ಮಡಿಕೇರಿ: ಕೇಂದ್ರದ 7 ಅಂಶಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರೈತರಿಗೆ ಕೃಷಿ ತಜ್ಞರ ಕರೆ

Update: 2018-02-17 11:50 GMT

ಮಡಿಕೇರಿ, ಫೆ.17 : ರೈತರು ಕೇಂದ್ರ ಸರ್ಕಾರದ ಏಳು ಅಂಶಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಇಳುವರಿಯನ್ನು ಪಡೆಯುವ ಮೂಲಕ ಹೆಚ್ಚು ಆದಾಯವನ್ನು ಗಳಿಸಿದಾಗ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕಾರಿಯಾಗುತ್ತದೆ ಎಂದು ಶಿವಮೊಗ್ಗದ ಕೃಷಿ ಹಾಗೂ ತೋಟಗಾರಿಕ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಟಿ.ಹೆಚ್.ಗೌಡ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ ಆಕಾಶವಾಣಿ ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ಘಟಕದ ಸಹಯೋಗದಲ್ಲಿ ನಗರದ ವಿಸ್ತರಣಾ ಘಟಕ ತರಬೇತಿ ಕೇಂದ್ರದಲ್ಲಿ ನಡೆದ “ಬಾನುಲಿ ರೈತ ದಿನಾಚರಣೆ-2018” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ರೈತರ ಏಳಿಗೆಗಾಗಿ ಏಳು ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಪ್ರಸ್ತುತ ದಿನಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ, ಅದರ ಉಪಯೋಗ ಹಾಗೂ ಕೃಷಿ ಬೆಳವಣಿಗೆಯ ಕುರಿತು ಜನಸಮಾನ್ಯರಿಗೆ ಮಾಹಿತಿಯನ್ನು ನೀಡುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬಾನುಲಿಗಳು ಸಹಕಾರಿಯಾಗಿವೆ ಎಂದು ಡಾ.ಟಿ.ಹೆಚ್.ಗೌಡ ಅಭಿಪ್ರಾಯಪಟ್ಟರು.

ಬೆಳೆಗಾರರು ಹೆಚ್ಚು ಬಾನುಲಿಯನ್ನು ಕೇಳುವುದರಿಂದ ತಮ್ಮ ಕಾಲ ವ್ಯಯಗೊಳಿಸದೆ ಹೆಚ್ಚು ಮಾಹಿತಿಯನ್ನು ಪಡೆದುಕೊಳ್ಳಲು ಉತ್ತಮ ಮಾರ್ಗವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರೇಡಿಯೋ ಕೇಳುಗರ ಪ್ರಮಾಣ ಕಡಿಮೆಯಾಗಿದ್ದು, ತಮ್ಮ ಕಾರ್ಯಕ್ಷೇತ್ರದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಇತ್ತೀಚಿನ ದಿನಗಳಲ್ಲಿ ರೈತರು ಕೃಷಿ ಕಾರ್ಯದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರಕಾರಗಳು ರೈತರ ಅಭ್ಯುದಯಕ್ಕಾಗಿ ಮತ್ತು ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಮಾಧ್ಯಮಗಳ ಮೂಲಕ ಅವುಗಳ ಮಾಹಿತಿಯನ್ನು ಪಡೆದು ಪ್ರಗತಿ ಸಾಧಿಸಬೇಕೆಂದು ಸಲಹೆ ನೀಡಿದರು.

ಕೊಡಗು ಜಿಲ್ಲಾ ನಬಾರ್ಡ್ ಬ್ಯಾಂಕ್‍ನ ವ್ಯವಸ್ಥಾಪಕರಾದ ಮುಂಡಂಡ ಸಿ. ನಾಣಯ್ಯ ಮಾತನಾಡಿ ಕೇಂದ್ರ ಸರ್ಕಾರದದಿಂದ 2022 ರ ಹೊತ್ತಿಗೆ ಕೃಷಿಕರ ಆದಾಯವನ್ನು ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ 7 ಅಂಶಗಳ ಕಾರ್ಯಕ್ರಮ ಮಹತ್ವ ಪಡೆದಿದೆ ಎಂದರು.  ತಾವು ಬೆಳೆದ ಬೆಳೆಗೆ ಉತ್ತಮ ಆದಾಯ ಗಳಿಸಲಾಗದೆ ರೈತರು ಆರ್ಥಿಕ ದುಸ್ಥಿಯನ್ನು ಎದುರಿಸುವಂತಾಗಿದೆ. ಇತರರ ಆದಾಯದೊಂದಿಗೆ ಹೋಲಿಕೆ ಮಾಡಿದರೆ ರೈತರ ಆದಾಯ ಉತ್ತಮ ಮಟ್ಟದಲ್ಲಿಲ್ಲ. ದೇಶದಲ್ಲಿ ಕೃಷಿಯನ್ನು ಅವಲಂಬಿತವಾಗಿರುವ ಕೃಷಿಕರು 5 ರಲ್ಲಿ 1 ಭಾಗ ಬಡತನದ ರೇಖೆಯಲ್ಲಿದ್ದಾರೆ. ಸಮಸ್ಯೆಗಳ ಸುಳಿಗೆ ಸಿಕ್ಕಿ ಆರ್ಥಿಕ ತುಳಿತಕ್ಕೆ ಒಳಗಾಗುತ್ತಿದ್ದಾರೆ, ಅಲ್ಲದೆ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಮತ್ತೆ ದೇಶದಲ್ಲಿ ಸಂಭವಿಸಬಾರದು ಎನ್ನುವ ಕಾರಣಕ್ಕಾಗಿ ಸಂಘ ಸಂಸ್ಥೆಗಳೊಂದಿಗೆ ಹಾಗೂ ರೈತರೊಂದಿಗೆ ಚರ್ಚಿಸಿ ಏಳು ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ನಾಣಯ್ಯ ಹೇಳಿದರು.  

ರೈತರ ಕೃಷಿ ಆದಾಯ ಹೆಚ್ಚಿಸುವುದು, ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು, ರೈತರು ಬೆಳೆದ ಬೆಳೆಗಳನ್ನು ಶೇಖರಿಸಿಡುವ ವ್ಯವಸ್ಥೆ, ಕೃಷಿ ಸಂಪದ ಯೋಜನೆಯಡಿ ಫಸಲಿನ ಮೌಲ್ಯ ವರ್ಧನೆ ಮಾಡುವುದು, ಮಾರುಕಟ್ಟೆ ವಿಸ್ತರಣೆ, ಫಸಲ್ ವಿಮಾ ಯೋಜನೆ ಹಾಗೂ ಹವಮಾನ ಆಧಾರಿತ ವಿಮಾ ಯೋಜನೆ, ಉಪ ಬೆಳೆಗಳ ಕೃಷಿಗೆ ಪ್ರೋತ್ಸಾಹ ನೀಡುವುದು ಸೇರಿದಂತೆ ಇನ್ನೂ ಕೆಲವು ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು. 

ಅಪ್ಪಂಗಳದ ಕಾಫಿ ಹಾಗೂ ಏಲಕ್ಕಿ ಸಂಶೋಧಾನ ಕೇಂದ್ರದ ಮುಖ್ಯಸ್ಥರಾದ ಅಂಕೇಗೌಡ ಮಾತನಾಡಿ, ಕೃಷಿ ಜೊತೆಯಲ್ಲಿ ಇನ್ನಿತರ ಬೇಸಾಯವನ್ನು ಮಾಡುವ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು ಎಂದ ಅವರು ವಿವಿಧ ಬೆಳೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ 2022ರ ಹೊತ್ತಿಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ವಿಧಾನಗಳ ಕುರಿತು ವಿಚಾರ ಸಂಕಿರಣ ನಡೆಯಿತು.

ಕಾರ್ಯಕ್ರಮದಲ್ಲಿ ಮಡಿಕೇರಿ ಆಕಾಶವಾಣಿ ಸಹಾಯಕ ನಿರ್ದೇಶಕರಾದ ಎಂ.ರಾಘವೇಂದ್ರ, ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಯೋಗಿಕಾ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಐ.ಎನ್.ದೊರೆಯಪ್ಪ ಗೌಡ, ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ರಘುಪತಿ ಎನ್. ಕೆಂಚಾರೆಡ್ಡಿ, ಗೊಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಷಯತಜ್ಞರಾದ ಡಾ. ಕೆ.ವಿ.ವೀರೇಂದ್ರ ಕುಮಾರ್ ಹಾಗೂ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಯುವ ವಿಜ್ಞಾನಿ ಡಾ. ಮಂಡೇಪಂಡ ಕಾವೇರಿ ದೇವಯ್ಯ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News