ಡಾ.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ : ‘ಅಪಘಾತ ಜೀವ ರಕ್ಷಕ’ ಯೋಜನೆ

Update: 2018-02-17 11:58 GMT

ಮಡಿಕೇರಿ, ಫೆ.17: ರಸ್ತೆ ಅಪಘಾತ ಪ್ರಕರಣಗಳಲ್ಲಿ ರಾಷ್ಟ್ರವು 6 ನೇ ಸ್ಥಾನ ಹೊಂದಿದೆ. ಅಪಘಾತ ಸಂಭವಿಸಿದ ಮೊದಲ 60 ನಿಮಿಷಗಳು ಸುವರ್ಣ ಅವಧಿಯಾಗಿದ್ದು, ಆ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ದೊರೆತಲ್ಲಿ. ಪ್ರತಿ ವರ್ಷ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜೀವಗಳನ್ನು ರಕ್ಷಿಸಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.    

ಅಪಘಾತಕ್ಕೊಳಗಾದವರನ್ನು ರಕ್ಷಿಸುವ ಹಂಬಲವಿದ್ದರೂ, ಪ್ರಥಮ ಚಿಕಿತ್ಸೆ ಕುರಿತು ಅರಿವಿಲ್ಲದಿರುವುದು ಹಾಗೂ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಅಲೆದಾಡಬೇಕಾದ ಭಯದಿಂದ ಅಪಘಾತ ನಡೆದಾಗ ಪ್ರತ್ಯಕ್ಷದರ್ಶಿಗಳು ಹಿಂಜರಿಯುತ್ತಿರುವುದು ಕಂಡುಬರುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅಪಘಾತಕ್ಕೊಳಗಾದ ಗಾಯಾಳುಗಳಿಗೆ ಸ್ಥಳದಲ್ಲಿಯೇ ತುರ್ತು ಮಾನವೀಯ ಸಹಾಯ ಹಾಗೂ ಪ್ರಥಮ ಚಿಕಿತ್ಸೆಯನ್ನು ನೀಡಿ, ತದನಂತರ  ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ನೀಡಿದಲ್ಲಿ ಅಪಘಾತದ ಗಾಯಾಳುಗಳನ್ನು ಪ್ರಾಣಾಪಾಯದಿಂದ ರಕ್ಷಿಸುವುದಲ್ಲದೇ, ಕುಟುಂಬದ ಆಧಾರ ಸ್ಥಂಭವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಅವರ ಕುಟುಂಬವನ್ನು ಸಹ ಅತಂತ್ರದಿಂದ ಪಾರುಮಾಡಬಹುದಾಗಿದೆ. 

ಈ ಹಿನ್ನೆಲೆಯಲ್ಲಿ ಅಪಘಾತಕ್ಕೊಳಗಾದ ಗಾಯಳುಗಳಿಗೆ ಕೂಡಲೇ ಪ್ರಥಮ ಚಿಕಿತ್ಸೆಯನ್ನು ನೀಡಿ, ಹತ್ತಿರದ ಆಸ್ಪತ್ರೆಗೆ ಸೇರಿಸಿ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಆ ಮೂಲಕ ಗಾಯಾಳುವಿನ ಪ್ರಾಣ ರಕ್ಷಣೆಯನ್ನು ಮಾಡುವುದನ್ನು ಉತ್ತೇಜಿಸುವ ದೃಷ್ಟಿಯಿಂದ ಸರ್ಕಾರವು “ಅಪಘಾತ ಜೀವ ರಕ್ಷಕ ಯೋಜನೆ”ಯನ್ನು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಕಾರ್ಮಿಕ, ಒಳಾಡಳಿತ, ಸಾರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಗೃಹ ಇಲಾಖೆಗಳ ಸಹಯೋಗದೊಂದಿಗೆ 2016-17 ನೇ ಸಾಲಿನಿಂದ ಜಾರಿಗೊಳಿಸುತ್ತಿದೆ.

ಯೋಜನೆಯ ವಿಶೇಷತೆ; ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸೆ ಮತ್ತು ಗೃಹ ಶುಶ್ರೂಷೆಗಳನ್ನು ಒಳಗೊಂಡ ತರಬೇತಿ ನೀಡುವುದು. ಪ್ರಥಮ ಚಿಕಿತ್ಸೆ ತರಬೇತಿ ನೀಡುವಲ್ಲಿ ಪರಿಣಿತಿ ಹಾಗೂ ಅನುಭವವುಳ್ಳ ಸಂಸ್ಥೆಗಳಾದ ಸೆಂಟ್‍ಜಾನ್ ಆಂಬ್ಯುಲೆನ್ಸ್ ಹಾಗೂ ರೆಡ್‍ಕ್ರಾಸ್ ಸೊಸೈಟಿ ಇವುಗಳ ಸಹಭಾಗಿತ್ವದೊಂದಿಗೆ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ತರಬೇತಿ ಆಯೋಜಿಸುವುದು.  

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಊರ್ಜಿತ ವಾಣಿಜ್ಯ ಚಾಲನಾ ಪರವಾನಗಿ ಹೊಂದಿದ ಸುಮಾರು 12,500 ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ತರಬೇತಿ ನೀಡಿ ‘ಅಪಘಾತ ಜೀವ ರಕ್ಷಕ’ರನ್ನಾಗಿ ಸಜ್ಜಗೊಳಿಸುವ ಗುರಿ ಹೊಂದಲಾಗಿದೆ. ತರಬೇತಿ ಪಡೆದ ಎಲ್ಲಾ ಶಿಭಿರಾರ್ಥಿಗಳಿಗೆ ಸರ್ಕಾರದ ವತಿಯಿಂದ ತರಬೇತಿ ಪ್ರಮಾಣ ಪತ್ರ ಹಾಗೂ “ಪ್ರಥಮ ಚಿಕಿತ್ಸಾ ಕಿಟ್”ನ್ನು ವಿತರಿಸಲಾಗುವುದು. ಅಪಘಾತ ಸಂಭವಿಸಿದಲ್ಲಿ ತೆಗೆದುಕೊಳ್ಳಬೇಕಾದ ಕಾನೂನಾತ್ಮಕ ಕಾರ್ಯಗಳ ಕುರಿತು ಸಹ ಮಾಹಿತಿ ನೀಡಲಾಗುತ್ತದೆ.

ಅಪಘಾತ ಜೀವ ರಕ್ಷಕರ ಹೊಣೆ: ಅಪಘಾತ ವೀಕ್ಷಿಸಿದ ಪ್ರತ್ಯಕ್ಷದರ್ಶಿ ಜೀವರಕ್ಷಕರು ನಿರ್ವಹಿಸಬೇಕಾದ ಹೊಣೆ ಗಾಯಾಳುಗಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವುದು ತುರ್ತಾಗಿ ಹತ್ತಿರದ ಆಸ್ಪತ್ರಗೆ ದಾಖಿಲಿಸುವುದು ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡುವುದು.

ಪ್ರೋತ್ಸಾಹಧನ: ಗಾಯಾಳುಗಳನ್ನು ರಕ್ಷಿಸಿದ ಅಪಘಾತ ಜೀವ ರಕ್ಷಕರು ಅಪಘಾತ ಸಂಭವಿಸಿದ ದಿನಾಂಕದಿಂದ 6 ತಿಂಗಳ ಅವಧಿಯೊಳಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ದಾಖಲೆಗಳನ್ನು ಒದಗಿಸಿ  ಮಂಡಳಿಯ ವತಿಯಿಂದ ಒಂದು ತಿಂಗಳೊಳಗಾಗಿ 1 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. 

ಸಲ್ಲಿಸಬೇಕಾದ ದಾಖಲೆಗಳು: ಸಾರಿಗೆ ವಾಹನ ಚಲಾಯಿಸಲು ರಾಜ್ಯದಲ್ಲಿ ಸಾರಿಗೆ ಇಲಾಖೆಯಿಂದ ಪಡೆದ ಊರ್ಜಿತ ವಾಣಿಜ್ಯ ಚಾಲನಾ ಪರವಾನಿಗೆಯ ಪ್ರತಿ. ಜೀವರಕ್ಷಕ ತರಬೇತಿ ಪ್ರಮಾಣ ಪತ್ರದ ಪ್ರತಿ, ಪ್ರಥಮ ವರ್ತಮಾನ ವರದಿಯ ಪ್ರತಿ, ಆಸ್ಪತ್ರೆಗೆ ಸೇರಿದ ಕುರಿತು ಪ್ರಮಾಣ ಪತ್ರ, ಹೆಚ್ಚಿನ ಮಾಹಿತಿಗಾಗಿ ಪ್ರಥಮ ಚಿಕಿತ್ಸೆ ತರಬೇತಿ ಪಡೆಯಲು ಆಯಾಯ ಜಿಲ್ಲಾ ಹಾಗೂ ತಾಲೂಕುಗಳಲ್ಲಿರುವ ಕಾರ್ಮಿಕ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News