ಕ್ರಾಂತಿಯ ಯುಗದ ಚಿಂತನೆ

Update: 2018-02-18 18:32 GMT

"ಕ್ರಾಂತಿಯ ಯುಗ'' ಎರಿಕ್ ಜಾನ್ ಆರ್ನೆಸ್ಟ್ ಹಾಬ್ಸ್‌ಬಾಮ್‌ಅವರ ಚಿಂತನಗಳ ಸಂಗ್ರಹ. ಅರ್ನೆಸ್ಟ್ ಅವರು ಇಪ್ಪತ್ತನೆಯ ಶತಮಾನದ ಪ್ರಮುಖ ಚಿಂತಕರಲ್ಲೊಬ್ಬರು. ಕೆಂಬ್ರಿಜ್ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾಗಿದ್ದ ಇವರು ಜ್ಞಾನೋದಯದ ಯುಗದ ಬಳಿಕ ಯುರೋಪಿನಲ್ಲಾದ ಪರಿವರ್ತನೆಗಳನ್ನು ಕುರಿತು ನಡೆಸಿದ ಚಿಂತನೆಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಇದು ಲೋಕವಿಖ್ಯಾತ ಕೃತಿಗಳಾಗಿವೆ. ಈ ಸಂಪುಟಗಳ ವಿಚಾರಗಳನ್ನು ಸಂಗ್ರಹಿಸಿ ನಿರೂಪಿಸಿದ್ದಾರೆ ನಾ. ದಿವಾಕರ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇದನ್ನು ಪ್ರಕಟಿಸಿದೆ.

1789ರ ಫ್ರೆಂಚ್ ಕ್ರಾಂತಿ ಮತ್ತು ಇದೇ ಕಾಲಘಟ್ಟದ ಬ್ರಿಟನ್ನಿನ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ 1789 ಮತ್ತು 1848ರ ಅವಧಿಯಲ್ಲಿ ವಿಶ್ವಮಟ್ಟದಲ್ಲಿ ಸಂಭವಿಸಿದ ಮನ್ವಂತರ ಪ್ರಕ್ರಿಯೆಗಳ ಮೂಲನೆಲೆಗಳನ್ನು ಈ ಕೃತಿಯಲ್ಲಿ ಶೋಧಿಸಲಾಗಿದೆ.ಲೇಖಕರು ಹೇಳುವಂತೆ ‘ಇದು ವಿಶ್ವದ ಅಥವಾ ಐರೋಪ್ಯ ರಾಷ್ಟ್ರಗಳ ಇತಿಹಾಸವಲ್ಲ. ಉಭಯ ಕ್ರಾಂತಿಗಳ ಫಲವಾಗಿ ಯಾವುದೇ ಒಂದು ದೇಶದಲ್ಲಿ ಉಂಟಾದ ವಿಪ್ಲವಕಾರಿ ಪ್ರಭಾವವನ್ನು ಕುರಿತು ಇಲ್ಲಿ ವಿಶ್ಲೇಶಿಸಲಾಗಿದೆ’. ಹಾಗಾಗಿಯೇ ಈ ಕೃತಿಯಲ್ಲಿ ಈಜಿಪ್ಟ್, ಐರ್ಲೆಂಡ್ ಮತ್ತು ಲ್ಯಾಟಿನ್ ಅಮೆರಿಕದ ಪ್ರಸ್ತಾಪ ಕಂಡು ಬರುತ್ತದೆ. ಜಪಾನ್, ಬಲ್ಗೇರಿಯಾ ಮತ್ತು ಆಫ್ರಿಕಾ ಉಲ್ಲೇಖವಾಗುವುದಿಲ್ಲ. ಕೃತಿಯ ಮೂಲ ಧ್ಯೇಯ ಇತಿಹಾಸದ ಘಟನೆಗಳ ವ್ಯಾಖ್ಯಾನವೇ ಹೊರತು ಸವಿಸ್ತಾರವಾದ ವಿವರಣೆಯಲ್ಲ. ಗತ ಇತಿಹಾಸದ ಬಗ್ಗೆ ಕೇವಲ ಕುತೂಹಲವನ್ನು ಹೊಂದಿರದೆ ಸಮಕಾಲೀನ ಜಗತ್ತಿನ ಪ್ರಸ್ತುತ ಪರಿಸ್ಥಿತಿಗೆ ಕಾರಣೀಭೂತವಾದ ಚಾರಿತ್ರಿಕ ಅಂಶಗಳನ್ನು ಗ್ರಹಿಸಿ ಜಗತ್ತು ಎತ್ತ ಸಾಗುತ್ತಿದೆ ಎಂದು ಚಿಂತಿಸುವ ವಿದ್ಯಾವಂತ ಸುಶಿಕ್ಷಿತರನ್ನು ಉದ್ದೇಶಿಸಿ ಈ ಕೃತಿಯನ್ನು ರಚಿಸಲಾಗಿದೆ. ಗ್ರಂಥವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ, ಈ ಅವಧಿಯ ಪ್ರಮುಖ ಘಟನೆಗಳನ್ನು ವ್ಯಾಖ್ಯಾನಿಸಲಾಗಿದೆ. ಎರಡನೆಯ ಭಾಗದಲ್ಲಿ ಕ್ರಾಂತಿಯ ಫಲವಾಗಿ ಉದಿಸಿದ ಸಮಾಜವನ್ನು ಕುರಿತು ವ್ಯಾಖ್ಯಾನಿಸಲಾಗಿದೆ.
400 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News