ವರ್ಷ ವರ್ಷವೂ ಬಜೆಟ್ ಮಂಡಿಸುವ ಅಗತ್ಯವಿದೆಯೇ?

Update: 2018-02-18 18:39 GMT

ಮಾನ್ಯರೇ,

ಈಗೀಗ ಬಜೆಟ್‌ಗಳ ಬಗ್ಗೆ, ಅದು ಕೇಂದ್ರದ್ದೇ ಇರಲಿ ರಾಜ್ಯದ್ದೇ ಇರಲಿ ಹೇಳಿಕೊಳ್ಳುವಂತಹ ವಿಶೇಷ ಆಸಕ್ತಿ ಯಾರಿಗೂ ಇದ್ದಂತೆ ಕಾಣುತ್ತಿಲ್ಲ. ಕೇವಲ ಅಂಕಿ ಅಂಶಗಳ ಒಂದು ನೀರಸ ಸರ್ಕಸ್ ಆಗಿರುವುದರ ಸಹಿತ ಅನೇಕ ಕಾರಣಗಳಿರಬಹುದು. ಆ ಎಲ್ಲ ಕಾರಣಗಳ ಜೊತೆಯಲ್ಲಿ, ‘ಪ್ರತೀ ವರ್ಷ’ ಬಜೆಟ್ ಮಂಡಿಸುವುದೂ ಇದಕ್ಕೆ ಒಂದು ಕಾರಣವಿರಬಹುದೇ? ಹೀಗೆ ಪ್ರತೀ ವರ್ಷ ಬಜೆಟ್ ಮಂಡಿಸುವ ಅಗತ್ಯವಿದೆಯೇ? ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇನ್ನು ಮೂರು ತಿಂಗಳ ಬಳಿಕ ಮತ್ತೆ ಹೊಸ ಸರಕಾರ ಬಜೆಟ್ ಮಂಡಿಸುತ್ತದೆ! ಈ ವಿಶೇಷ ಸಂದರ್ಭವನ್ನು ಬದಿಗಿಟ್ಟು ನೋಡಿದರೂ, ಶಾಸನಸಭೆಯಲ್ಲಿ ಬಜೆಟ್ ಮಂಡನೆಯಾಗಿ ಅದರಲ್ಲಿ ಘೋಷಿತವಾಗಿರುವ ಕಾರ್ಯಕ್ರಮಗಳು ಜಾರಿಗೆ ಬರಲು (ನಮ್ಮ ಜಡ ಕಾರ್ಯಾಂಗ ವ್ಯವಸ್ಥೆಯ ಕಾರಣವಾಗಿ) ಕೆಲವು ತಿಂಗಳುಗಳೇ ಬೇಕಾಗುತ್ತವೆ. ಅಷ್ಟಾಗುವಾಗ ಆರ್ಥಿಕ ವರ್ಷ ಮುಗಿದಿರುತ್ತದೆ ಮತ್ತು ಕಾರ್ಯಕ್ರಮ ಅನುಷ್ಠಾನಗೊಳ್ಳದ ಕಾರಣ ಮಂಜೂರಾದ ಬಹುತೇಕ ಹಣ ಮತ್ತೆ ಸರಕಾರಕ್ಕೆ ಮರಳಿರುತ್ತದೆ.

‘ಅಷ್ಟು ಹಣ ಮಂಜೂರಾಗಿದೆ ಇಷ್ಟು ಹಣ ಮಂಜೂರಾಗಿದೆ’ ಎಂದೆಲ್ಲ ನಾವು ಖುಷಿ ಪಡುತ್ತೇವೆ. ಹಾಗೆ ಮಂಜೂರಾಗಿರುವುದು ಕೇವಲ ಕಾಗದದಲ್ಲಿ ಮಾತ್ರ. ಅದು ಬಳಕೆಯಾಗದೆ ಖಜಾನೆಗೆ ಮರಳಿರುವುದೇ ಹೆಚ್ಚು ಮತ್ತು ಅದು ಯಾರಿಗೂ ಗೊತ್ತೇ ಆಗಿರುವುದಿಲ್ಲ. ಹಾಗಾಗಿ ಹೀಗೆ ಪ್ರತೀ ವರ್ಷ ಮಂಡಿಸುವ ಬದಲು ಕಾಲಾವಧಿಯನ್ನು ಹಿಗ್ಗಿಸುವ ಹಾಗೆ ಏನಾದರೂ ಬದಲಾವಣೆ ಮಾಡಬೇಕು ಮತ್ತು ಬಜೆಟ್‌ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುವಂತೆ ಮಾಡುವತ್ತ ಹೆಚ್ಚು ಗಮನ ನೀಡಬೇಕು ಎಂದು ಅನಿಸುವುದಿಲ್ಲವೇ?

Writer - ಶ್ರೀನಿವಾಸ್, ಕಾರ್ಕಳ

contributor

Editor - ಶ್ರೀನಿವಾಸ್, ಕಾರ್ಕಳ

contributor

Similar News