ಇಂಗ್ಲೆಂಡ್ ಗೆ 2 ರನ್ ಜಯ; ಫೈನಲ್ ತಲುಪಲು ವಿಫಲ

Update: 2018-02-18 18:43 GMT

ಹ್ಯಾಮಿಲ್ಟನ್,ಫೆ.18: ತ್ರಿಕೋನ ಟ್ವೆಂಟಿ-20 ಸರಣಿಯ ಕೊನೆಯ ರೌಂಡ್-ರಾಬಿನ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆತಿಥೇಯ ನ್ಯೂಝಿಲೆಂಡ್ ವಿರುದ್ಧ ಕೇವಲ 2 ರನ್‌ನಿಂದ ಗೆಲುವು ಸಾಧಿಸಿದೆ. ಆದರೆ, ಫೈನಲ್‌ಗೆ ತಲುಪಲು ವಿಫಲವಾಗಿದೆ.

ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಾಯಕ ಇಯಾನ್ ಮೊರ್ಗನ್(ಔಟಾಗದೆ 80) ಹಾಗೂ ಡೇವಿಡ್ ಮಲಾನ್(53)ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನ್ಯೂಝಿಲೆಂಡ್ ತಂಡ ಆರಂಭಿಕ ಆಟಗಾರ ಕಾಲಿನ್ ಮುನ್ರೊ ಮಿಂಚಿನ ಬ್ಯಾಟಿಂಗ್ ಹೊರತಾಗಿಯೂ 20 ಓವರ್‌ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 192 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮಾರ್ಟಿನ್ ಗಪ್ಟಿಲ್(62) ಹಾಗೂ ಮುನ್ರೊ ಮೊದಲ ವಿಕೆಟ್‌ಗೆ 78 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮುನ್ರೊ ಕೇವಲ 18 ಎಸೆತಗಳಲ್ಲಿ 50 ರನ್ ಗಳಿಸಿ ಆರನೇ ವೇಗದ ಅರ್ಧಶತಕ ದಾಖಲಿಸಿದರು. 21 ಎಸೆತಗಳಲ್ಲಿ 57 ರನ್ ಗಳಿಸಿದ ಮುನ್ರೊ 7 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು. ಇಂಗ್ಲೆಂಡ್ ಸ್ಪಿನ್ನರ್‌ಗಳಾದ ಆದಿಲ್ ರಶೀದ್ ಹಾಗೂ ಲಿಯಾಮ್ ಡಾಸನ್ ಕಿವೀಸ್ ಆಟಗಾರರನ್ನು ಕಾಡಿದರು. ಮಾರ್ಕ್ ಚಾಪ್ಮನ್(ಔಟಾಗದೆ 37) ಮಧ್ಯಮ ಕ್ರಮಾಂಕದಲ್ಲಿ ಹೋರಾಟ ನೀಡಿದರೂ ಯಾವುದೇ ಫಲ ಸಿಗಲಿಲ್ಲ. ಇಂಗ್ಲೆಂಡ್ 2 ರನ್‌ನಿಂದ ಜಯ ಸಾಧಿಸಿದರೂ ಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಬುಧವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಥಾನ ಪಡೆಯಲು ಇಂಗ್ಲೆಂಡ್ ತಂಡ ಕಿವೀಸ್‌ನ್ನು 20 ರನ್‌ಗಳಿಂದ ಮಣಿಸಬೇಕಾಗಿತ್ತು.

ಗಾಯದ ಸಮಸ್ಯೆಯಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಮೊರ್ಗನ್ ಆಡಿರಲಿಲ್ಲ. ಕೊನೆಯ ಲೀಗ್ ಪಂದ್ಯದಲ್ಲಿ 46 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಬಾರಿಸಿದ ಮೊರ್ಗನ್ ಇಂಗ್ಲೆಂಡ್ ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾಗಿದ್ದಾರೆ. ಇಂಗ್ಲೆಂಡ್ 24 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ ಮಲಾನ್(53 ರನ್) ಅವರೊಂದಿಗೆ 3ನೇ ವಿಕೆಟ್ 93 ರನ್ ಜೊತೆಯಾಟ ನಡೆಸಿದ ಮೊರ್ಗನ್ ತಂಡವನ್ನು ಆಧರಿಸಿದರು. ಮಲಾನ್ ತನ್ನ 5ನೇ ಪಂದ್ಯದಲ್ಲಿ 4ನೇ ಬಾರಿ ಅರ್ಧಶತಕ (53,36 ಎಸೆತ, 2 ಬೌಂಡರಿ, 5 ಸಿಕ್ಸರ್)ದಾಖಲಿಸಿದರು.

ನ್ಯೂಝಿಲೆಂಡ್ ಪರ ಟ್ರೆಂಟ್ ಬೌಲ್ಟ್(3-50) ಮೂರು ವಿಕೆಟ್ ಕಬಳಿಸಿದರು. ಟಿಮ್ ಸೌಥಿ (2-22)ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

►ಇಂಗ್ಲೆಂಡ್: 20 ಓವರ್‌ಗಳಲ್ಲಿ 194/7

(ಮೊರ್ಗನ್ ಔಟಾಗದೆ 80, ಮಲಾನ್ 53, ರಾಯ್ 21, ಬೌಲ್ಟ್ 3-50,ಸೌಥಿ 2-22)

►ನ್ಯೂಝಿಲೆಂಡ್: 20 ಓವರ್‌ಗಳಲ್ಲಿ 192/4

(ಮಾರ್ಟಿನ್ ಗಪ್ಟಿಲ್ 62, ಮುನ್ರೊ 57, ಚಾಪ್ಮನ್ 37, ರಶೀದ್ 1-22, ಡಾಸನ್ 1-27, ಮಾಲನ್ 1-27)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News