ಉಳ್ಳವರ ಅಟ್ಟಹಾಸಕ್ಕೆ ನಲುಗುತ್ತಿರುವ ಸಮತೆಯ ಕನಸು

Update: 2018-02-18 18:44 GMT

ಭಾರತದ ಉದ್ಧಾರದ ಬಗ್ಗೆ ಮಾತನಾಡುವ ಸಂಘಪರಿವಾರದಂತಹ ಕೋಮುವಾದಿ ಸಂಘಟನೆಗಳು ಭಾರತೀಯರ ನಡುವಿನ ಅಸಮಾನತೆಯ ಬಗ್ಗೆ ಮಾತನಾಡುವುದಿಲ್ಲ. ದುಡಿಯುವ ಜನ ಅಸಮಾನತೆಯ ಬಗ್ಗೆ ಮಾತನಾಡಲೇಬಾರದು, ಯೋಚಿಸಬಾರದು ಎಂದು ಅವರ ನಡುವೆ ಹಿಂದು, ಮುಸ್ಲಿಂ, ಕ್ರೈಸ್ತ ಎಂಬ ಪ್ರತ್ಯೇಕತೆಯ ದ್ವೇಷದ ಅಡ್ಡಗೋಡೆಗಳನ್ನು ನಿರ್ಮಿಸಲಾಗಿದೆ.


ಸಮಾಜವಾದಿ ಸೋವಿಯತ್ ರಶ್ಯ ಕುಸಿದು ಬಿದ್ದ ನಂತರ ಜಗತ್ತು ಏನಾಗಿದೆ? ಎತ್ತ ಹೊರಟಿದೆ? ಎಂದು ಅವಲೋಕಿಸಲು ಹೊರಟರೆ ಅಸಮಾನತೆಯ ಅಟ್ಟಹಾಸದ ಭಯಾನಕ ಚಿತ್ರ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಂದು ಜಗತ್ತಿನಲ್ಲಿ ಅಮೆರಿಕದ ಅಧ್ಯಕ್ಷ
ಟ್ರಂಪ್‌ನಿಂದ ಹಿಡಿದು ಭಾರತದ ಪ್ರಧಾನಿ ನರೇಂದ್ರ ಮೋದಿಯವರೆಗೆ ಕೇಳಿ ಬರುವ ಒಂದೇ ಒಂದು ಮಾತು ಅಭಿವೃದ್ಧಿ. ಇದು ಯಾರ ಅಭಿವೃದ್ಧಿ, ಎಂತಹ ಅಭಿವೃದ್ಧಿ ಎಂದು ಕಣ್ಣು ಬಿಟ್ಟು ನೋಡುತ್ತ ಹೋದರೆ ಅಸಮಾನತೆಯ ಭಯಾನಕ ರೂಪ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

ಈ ಅಭಿವೃದ್ಧಿಯ ಶಬ್ದದ ಹಿಂದೆ ಭಾರೀ ವಂಚನೆ ಅಡಗಿದೆ. ಇದು ಒಟ್ಟು ಜನಸಮುದಾಯದ ಅಭಿವೃದ್ಧಿಯಲ್ಲ. ಸಮಸ್ತ ಮನುಕುಲದ ಅಭಿವೃದ್ಧಿಯಲ್ಲ. ಇದು ಜಗತ್ತಿನ ಎಲ್ಲ ಮಕ್ಕಳು ಹೊಟ್ಟೆ ತುಂಬ ಊಟ ಮಾಡುವಂತಹ ಅಭಿವೃದ್ಧಿಯಲ್ಲ. ಈ ಅಭಿವೃದ್ಧಿ ಜಗತ್ತಿನ ಕೋಟಿ ಕೋಟಿ ಜನರನ್ನು ಬೀದಿಗೆ ತಳ್ಳಿ ಬೆರಳೆಣಿಕೆಯಷ್ಟು ಬಂಡವಾಳಗಾರರನ್ನು ಕೊಬ್ಬಿಸುವಂತಹ ಅಭಿವೃದ್ಧಿ. ಇತ್ತೀಚಿನ ಅಧಿಕೃತ ಅಂಕಿಅಂಶಗಳು ಈ ಅಭಿವೃದ್ಧಿಯ ಮುಖವಾಡವನ್ನು ಬಯಲಿಗೆಳೆದಿವೆ. ಗತಿಸಿದ 2017ನೇ ವರ್ಷದಲ್ಲಿ ಜಗತ್ತಿನಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ.82 ರಷ್ಟು ಭಾಗ ಕೇವಲ ಶೇ.1 ಜನರ ಕೈಗೆ ಸಿಲುಕಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ.73ರಷ್ಟು ಭಾಗ ಶೇ.1ರಷ್ಟಿರುವ ಬಂಡವಾಳಗಾರರ ತಿಜೋರಿ ಸೇರಿದೆ. ಇವು ಆಕ್ಸ್‌ಫಾಮ್ ಎಂಬ ಜಾಗತಿಕ ಸಂಸ್ಥೆಯೊಂದು ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳಾಗಿವೆ. ಇದರಿಂದ ಅಭಿವೃದ್ಧಿ ಎಂದರೆ ಯಾರ ಅಭಿವೃದ್ಧಿ ಎಂದು ಸ್ಪಷ್ಟವಾಗುತ್ತದೆ. ಅಂತಲೇ ಇಂದಿನ ಕಾರ್ಪೊರೇಟ್ ಪ್ರಜಾಪ್ರಭುತ್ವವನ್ನು ಉಳ್ಳವರಿಂದ ಉಳ್ಳವರಿಗಾಗಿ ಮಾಡಿಕೊಂಡಿರುವ ವ್ಯವಸ್ಥೆಯೆಂದು ಕರೆದರೆ ಅಚ್ಚರಿ ಪಡಬೇಕಿಲ್ಲ.

ಇದೇ ಆಕ್ಸ್‌ಫಾಮ್ ಸಂಸ್ಥೆ ಕಳೆದ 2016ನೇ ವರ್ಷದಲ್ಲಿ ಇಂತಹುದೇ ಅಧಿಕೃತ ವರದಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಜಗತ್ತಿನ ಶೇ. 58ರಷ್ಟು ಸಂಪತ್ತು ಶೇ.1ರಷ್ಟಿರುವ ಸಿರಿವಂತರ ಖಜಾನೆ ಸೇರಿದೆ. ಭಾರತದ ಶೇ.60 ರಷ್ಟು ಸಂಪತ್ತು ಶೇ.1ರಷ್ಟಿರುವ ಬಂಡವಾಳಗಾರರ ಬಳಿ ಸಂಗ್ರಹವಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಜಗತ್ತಿನ ಬಹುತೇಕ ಸಂಪತ್ತು ಕೆಲವೇ ಕೆಲವು ಉಳ್ಳವರ ಖಜಾನೆಯನ್ನು ಸೇರುತ್ತಿದೆ. ಪೃಥ್ವಿಯ ಮೇಲೆ ವಾಸಿಸುವ ಕೋಟ್ಯಂತರ ಜನರಿಗೆ ಸೇರಬೇಕಾದ ಸಂಪತ್ತು ಕೆಲವೇ ಬಂಡವಾಳಗಾರರ ಬಳಿ ಸೇರುವುದನ್ನು ಅಭಿವೃದ್ಧಿ ಎಂದು ಕರೆಯಲಾಗುತ್ತಿದೆ. ಇಡೀ ಜಗತ್ತು ಈಗ ಅನುಸರಿಸುತ್ತಿರುವ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ಮನುಷ್ಯನ ಶ್ರಮಕ್ಕೆ ಬೆಲೆ ಇಲ್ಲ. ಶ್ರಮದ ಬದಲಾಗಿ ಈಗಾಗಲೇ ಸಂಗ್ರಹವಾಗಿರುವ ಸಂಪತ್ತಿಗೆ ಹೆಚ್ಚು ಬೆಲೆಯಿದೆ. ಅಂದರೆ ಶ್ರಮ ಜೀವಿಗಳಿಗೆ ದೊರೆಯುವ ಕೂಲಿಗಿಂತ ಸಂಗ್ರಹವಾಗಿರುವ ಸಂಪತ್ತಿಗೆ ನೀಡುವ ಬಡ್ಡಿಯ ಪ್ರಮಾಣ ಹತ್ತಾರು ಪಟ್ಟು ಹೆಚ್ಚಾಗಿದೆ. ಒಂದು ಬಹುರಾಷ್ಟ್ರೀಯ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಒಂದು ದಿನದ ಆದಾಯ ಜಗತ್ತಿನ ಬಡ ಶ್ರಮ ಜೀವಿಯೊಬ್ಬನ ಒಂದು ವರ್ಷದ ಆದಾಯಕ್ಕಿಂತ ಹೆಚ್ಚಾಗಿದೆ ಎಂದು ಈ ವರದಿಯಿಂದ ಸ್ಪಷ್ಟವಾಗುತ್ತಿದೆ.

ಇಂದಿನ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ಜಗತ್ತಿನಲ್ಲಿ 2 ದಿನಕ್ಕೆ ಒಬ್ಬ ಕೋಟ್ಯಧಿಪತಿ ಹುಟ್ಟಿಕೊಳ್ಳುತ್ತಿದ್ದಾನೆ. ಆದರೆ ಕಳೆದ ಒಂದು ವರ್ಷದ ಕಾಲಾವಧಿಯಲ್ಲಿ ಜಗತ್ತಿನ ಬಡವರಲ್ಲಿ ಅರ್ಧದಷ್ಟು ಜನರ ಆದಾಯ ಶೇ.1ರಷ್ಟು ಮಾತ್ರ ಏರಿಕೆಯಾಗಿದೆ. ಭಾರತದಲ್ಲಿ ಅರ್ಧಕ್ಕರ್ಧ ಬಡವರ ಆದಾಯ ಕಳೆದ ಒಂದು ವರ್ಷದ ಕಾಲಾವಧಿಯಲ್ಲಿ ಒಂದೇ ಒಂದು ಪೈಸೆ ಏರಿಕೆಯಾಗಿಲ್ಲ. ಇದೆಲ್ಲದರ ಪರಿಣಾಮವಾಗಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ಅಭಿವೃದ್ಧಿಯ ಈ ಮಾದರಿ ಮತ್ತು ಮಾನದಂಡ ಇದೇ ರೀತಿ ಮುಂದುವರಿದರೆ ಭಾರತದಂತಹ ದೇಶಗಳು ಕಟ್ಟಿಕೊಂಡ ಕಲ್ಯಾಣ ರಾಜ್ಯದ ಕನಸು ನನಸಾಗದೇ ಬರೀ ಸಂವಿಧಾನದಲ್ಲಿ ಮಾತ್ರ ಉಳಿಯುತ್ತದೆ. ಜಿಡಿಪಿಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಪ್ರಧಾನಿ ಮೋದಿಯಿಂದ ಹಿಡಿದು ಹಣಕಾಸು ಸಚಿವ ಅರುಣ ಜೇಟ್ಲಿಯವರೆಗೂ ಎಲ್ಲರೂ ಪ್ರತಿಪಾದನೆ ಮಾಡುತ್ತಾರೆ. ಈ ಜಿಡಿಪಿಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬ ಪರಿಕಲ್ಪನೆಯೇ ಅರ್ಥಹೀನವಾಗಿದೆ. ಇದು ಒಂದು ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಬಿಂಬಿಸುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸ್ವಿಟ್ಸರ್‌ಲ್ಯಾಂಡಿನ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಗೆ ಮುನ್ನ ಬಿಡುಗಡೆಯಾದ ವರದಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡಿ ಸಂಪತ್ತಿಗಲ್ಲ ಎಂಬ ಶೀರ್ಷಿಕೆ ನೀಡಲಾಗಿತ್ತು. ಈ ಸಮಾವೇಶದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಹನ್ನೊಂದು ಸಾವಿರ ಕೋಟಿ ರೂ. ಟೋಪಿ ಹಾಕಿದ ನೀರವ್ ಮೋದಿ ಕೂಡ ಪಾಲ್ಗೊಂಡಿದ್ದ ಎಂಬುದು ಗಮನಾರ್ಹ. ಆತ ಅಲ್ಲಿಂದಲೇ ಇನ್ನೊಂದು ದೇಶಕ್ಕೆ ಪಲಾಯನ ಮಾಡಿದ.

ಭಾರತದಲ್ಲಿ ಅಸಮಾನತೆಯ ಅಜಗಜಾಂತರ ಹೇಗಿದೆ ಎಂದರೆ ಮುಖೇಶ್ ಅಂಬಾನಿಯೆಂಬ ಬಂಡವಾಳಗಾರನ ವ್ಯಕ್ತಿಗತ ಸಂಪತ್ತಿನ ಮೌಲ್ಯ 20 ಬಿಲಿಯನ್ ಡಾಲರ್ (ಅಂದರೆ 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು). ರಿಲಯನ್ಸ್ ಕಂಪೆನಿಯ ಬಹುತೇಕ ಶೇರುಗಳು ಈತನ ನಿಯಂತ್ರಣದಲ್ಲಿವೆ. ಈ ಕಂಪೆನಿಯ ಮಾರುಕಟ್ಟೆ ಬಂಡವಾಳ 47 ಬಿಲಿಯನ್ ಡಾಲರ್ (ಅಂದರೆ ಸುಮಾರು 2 ಲಕ್ಷ ಕೋಟಿ ರೂಪಾಯಿ). ಅಂತಲೇ ಅಂಬಾನಿ ಎಲ್ಲ ರೀತಿಯ ಉದ್ಯಮಗಳ ಜೊತೆಗೆ ಪ್ರಮುಖ ಸುದ್ದಿ ಮಾಧ್ಯಮಗಳ ಮೇಲೆ ಹಿಡಿತ ಹೊಂದಿದ್ದಾರೆ.

ಮುಂಬೈನಲ್ಲಿರುವ ಈ ಮುಖೇಶ್ ಅಂಬಾನಿ ಮನೆ ಹೇಗಿದೆ ಎಂಬುದನ್ನು ಲೇಖಕಿ ಅರುಂಧತಿ ರಾಯ್ ಅತ್ಯಂತ ರೋಚಕವಾಗಿ ವರ್ಣಿಸಿದ್ದಾರೆ. ಆಕಾಶದೆತ್ತರಕ್ಕೆ ಕಟ್ಟಿಸಲ್ಪಟ್ಟ ಅದು ಬರೀ ಕಟ್ಟಡವೋ ಆಧುನಿಕ ಭಾರತದ ದೇಗುಲವೋ ಅಥವಾ ವಾಸದ ಮನೆಯೋ ಇಲ್ಲವೇ ಪಿಶಾಚಿಗಳು ನೆಲೆಸಿದ ಹಾಳು ಗುಡಿಯೋ ಎಂದು ಅವರು ಪ್ರಶ್ನೆ ಹಾಕುತ್ತಾರೆ. ಮುಖೇಶ್ ಅಂಬಾನಿ ಈ ಭವ್ಯ ಬಂಗಲೆಗೆ ಆಂಟೇಲಾ ಎಂದು ಹೆಸರಿಟ್ಟಿದ್ದಾರೆ.

ಅಂಬಾನಿಯ ಆಂಟೇಲಾ ಎಂಬ ಈ ಭವ್ಯ ಬಂಗಲೆಯಲ್ಲಿ 3 ಹೆಲಿಪ್ಯಾಡ್‌ಗಳಿವೆ. 9 ಲಿಫ್ಟ್‌ಗಳಿವೆ. 5 ತೂಗು ಉದ್ಯಾನಗಳಿವೆ. 10 ಡಾನ್ಸ್ ಕೋಣೆಗಳಿವೆ. ಇಡೀ ಕಟ್ಟಡ ವಾತಾನುಕೂಲ ವ್ಯವಸ್ಥೆಯನ್ನು ಹೊಂದಿದೆ. ಪ್ರತೀ ಅಂತಸ್ತಿನಲ್ಲಿ ವ್ಯಾಯಾಮ ಶಾಲೆಗಳಿವೆ. ವಾಹನಗಳ ಪಾರ್ಕಿಂಗ್‌ಗಾಗಿ 6 ಅಂತಸ್ತುಗಳಿವೆ. 600 ಸೇವಕರು ಇಲ್ಲಿ ಕೆಲಸ ಮಾಡುತ್ತಾರೆ. ಇಷ್ಟೆಲ್ಲವನ್ನೂ ಒಳಗೊಂಡಿರುವ 27 ಅಂತಸ್ತುಗಳ ಬಂಗಲೆಯ ವರಾಂಡದ ತುಂಬೆಲ್ಲ ಹುಲ್ಲು ಹಾಸಿಗೆಯಿದೆ. ಇದು ಒಬ್ಬ ಕೋಟ್ಯಧಿಪತಿಯ ಮನೆಯ ವರ್ಣನೆ. ಇಂತಹ ಕೆಲ ಮನೆಗಳು ಮುಂಬೈನಲ್ಲಿವೆ. ಇದೇ ಮುಂಬೈನಲ್ಲಿ ಹಂದಿ ಗೂಡುಗಳಂತಹ ತಗಡನ್ನು ಹೊದಿಸಿದ ಪುಟ್ಟ ಮನೆಗಳಲ್ಲಿ ಲಕ್ಷಾಂತರ ಜನ ಧಾರಾವಿಯಂತಹ ಸ್ಲಂಗಳಲ್ಲಿ ವಾಸವಿದ್ದಾರೆ. ಭಾರತದ ಜನಸಂಖ್ಯೆ 120 ಕೋಟಿ. ಈ 120 ಕೋಟಿ ಜನರಿಗೆ ಸೇರಬೇಕಾದ ಸಂಪತ್ತು ಕೇವಲ 100 ಜನ ಬಂಡವಾಳಿಗರ ಕೈವಶವಾಗಿದೆ. ಈ ದೇಶದ ಕೇವಲ 100 ಮಂದಿ ಕಾರ್ಪೊರೇಟ್ ಉದ್ಯಮಪತಿಗಳು ದೇಶದ ಜಿಡಿಪಿಯ ಕಾಲು ಭಾಗದಷ್ಟು ಸಂಪತ್ತಿಗೆ ಒಡೆಯರಾಗಿದ್ದಾರೆ. ಇವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಛತ್ತೀಸಗಡ ಮತ್ತು ಓಡಿಶಾದ ಆದಿವಾಸಿಗಳ ನರಬೇಟೆ ನಡೆದಿದೆ. ಒಂದೆಡೆ ಕೆಲವೇ ಕೆಲವರಲ್ಲಿ ಸಂಪತ್ತಿನ ಶೇಖರಣೆಯಾಗುತ್ತಿದ್ದರೆ ಇನ್ನೊಂದೆಡೆ ಹಸಿವಿನಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೊಟ್ಟೆಪಾಡಿಗಾಗಿ ಮಕ್ಕಳನ್ನು ಮಾರಿಕೊಳ್ಳುತ್ತಿರುವ ತಾಯಂದಿರನ್ನು, ಮೈಮಾರಿಕೊಳ್ಳುತ್ತಿರುವ ಸೋದರಿಯರನ್ನು ಈ ಪುಣ್ಯ ಭೂಮಿಯಲ್ಲಿ ನೋಡುತ್ತಿದ್ದೇವೆ.

ಈ ಅಸಮಾನತೆಯನ್ನು ನಿವಾರಿಸಲು ಹೋರಾಡುತ್ತಿರುವ ದುಡಿಯುವ ವರ್ಗ ನಿತ್ಯವೂ ಉಳ್ಳವರ ದಾಳಿಗೆ ತುತ್ತಾಗುತ್ತಿದೆ. ಕೃಷಿಯಲ್ಲಿ ನಷ್ಟ ಅನುಭವಿಸಿ ತಮ್ಮ ಹೊಲಗದ್ದೆಗಳನ್ನು ಮಾರಿಕೊಂಡು ರೈತರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಕಾರ್ಖಾನೆಗಳು ಮುಚ್ಚುತ್ತಿವೆ. ಉದ್ಯೋಗಗಳು ಕಣ್ಮರೆಯಾಗುತ್ತಿವೆ. ಕಾರ್ಮಿಕ ಸಂಘಟನೆಗಳು ಮಾನ್ಯತೆ ಕಳೆದುಕೊಳ್ಳುತ್ತಿವೆ. ಎಲ್ಲಕ್ಕಿಂತ ಅಪಾಯಕಾರಿ ಬೆಳವಣಿಗೆ ಎಂದರೆ ಭಾರತದಂತಹ ದೇಶದಲ್ಲಿ ದುಡಿಯುವ ಜನರಲ್ಲಿ ಜಾತಿ ಧರ್ಮದಂತಹ ದ್ವೇಷದ ವಿಷಬೀಜ ಬಿತ್ತಲಾಗಿತ್ತಿದೆ. ಶೋಷಣೆಯನ್ನು ಮತ್ತು ಅಸಮಾನತೆಯನ್ನು ಪ್ರಶ್ನಿಸಬಾರದಂತೆ ದೇವರು ಮತ್ತು ಧರ್ಮಗಳ ಅನಸ್ತೇಶಿಯ ನೀಡಲಾಗುತ್ತಿದೆ. ಭಾರತದ ಉದ್ಧಾರದ ಬಗ್ಗೆ ಮಾತನಾಡುವ ಸಂಘಪರಿವಾರದಂತಹ ಕೋಮುವಾದಿ ಸಂಘಟನೆಗಳು ಭಾರತೀಯರ ನಡುವಿನ ಅಸಮಾನತೆಯ ಬಗ್ಗೆ ಮಾತನಾಡುವುದಿಲ್ಲ. ದುಡಿಯುವ ಜನ ಅಸಮಾನತೆಯ ಬಗ್ಗೆ ಮಾತನಾಡಲೇಬಾರದು, ಯೋಚಿಸಬಾರದು ಎಂದು ಅವರ ನಡುವೆ ಹಿಂದು, ಮುಸ್ಲಿಂ, ಕ್ರೈಸ್ತ ಎಂಬ ಪ್ರತ್ಯೇಕತೆಯ ದ್ವೇಷದ ಅಡ್ಡಗೋಡೆಗಳನ್ನು ನಿರ್ಮಿಸಲಾಗಿದೆ.

 ಆದರೂ ದೇಶದ ದುಡಿಯುವ ಜನ ದಲಿತರು, ಹಿಂದುಳಿದವರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರು ಸಮಾನತೆಯ ಬದುಕಿಗಾಗಿ ಹೋರಾಡುತ್ತಲೇ ಇದ್ದಾರೆ. ಇಂತಹ ಹೋರಾಟಗಳನ್ನು ಹತ್ತಿಕ್ಕಲು ಬಸ್ತಾರ್‌ನಂತಹ ಪ್ರದೇಶಗಳಲ್ಲಿ ಸೇನಾ ಪಡೆಗಳನ್ನು ನುಗ್ಗಿಸಲಾಗುತ್ತಿದೆ. ತಮ್ಮ ಮೇಲಿನ ಶೋಷಣೆ ಮತ್ತು ಅಸಮಾನತೆಯ ವಿರುದ್ಧ ದುಡಿಯುವ ಜನ ಒಂದಾಗಿ ಹೋರಾಡಬಾರದೆಂದು, ಪ್ರಶ್ನಿಸಬಾರದೆಂದು ಅವರನ್ನು ದಾರಿ ತಪ್ಪಿಸಲು ರಾಮ ಮಂದಿರ ನಿರ್ಮಾಣ, ಗೋರಕ್ಷಣೆ, ಮತಾಂತರ, ಲವ್ ಜಿಹಾದ್, ಪದ್ಮಾವತಿಯಂತಹ ಭಾವನಾತ್ಮಕ ವಿಷಯಗಳನ್ನು ಮುಂದೆ ಮಾಡಲಾಗುತ್ತಿದೆ. ಬಡವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಮಹಿಳೆಯರಿಗೆ ಎದುರಾಗಿರುವ ಅಪಾಯವನ್ನು ಮರೆಮಾಚಲು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹುಸಿ ಉನ್ಮಾದವನ್ನು ಸೃಷ್ಟಿಸಲಾಗುತ್ತಿದೆ. ಹಿಂದೂಗಳ ಸಂಖ್ಯೆ ಹೆಚ್ಚಿಸಲು ಹಿಂದೂ ಮಹಿಳೆಯರು ಹತ್ತು ಮಕ್ಕಳನ್ನು ಹೆರಬೇಕೆಂದು ಮಠಾಧೀಶರು ಕರೆ ಕೊಡುತ್ತಿದ್ದಾರೆ.

ದುಡಿಯುವ ಜನರ ನಡುವೆ ವಿಷಬೀಜ ಬಿತ್ತುವ, ಸಮಾನತೆಯ ಹೋರಾಟವನ್ನು ದಿಕ್ಕು ತಪ್ಪಿಸುವ ಸಲುವಾಗಿ ಸಂಘಪರಿವಾರದಂತಹ ಫ್ಯಾಶಿಸ್ಟ್ ಸಂಘಟನೆಗಳನ್ನು ಕಾರ್ಪೊರೇಟ್ ಬಂಡವಾಳಶಾಹಿಗಳು ದುಡ್ಡು ಕೊಟ್ಟು ಸಾಕುತ್ತಿದ್ದಾರೆ. ಈ ಕರಾಳ ಶಕ್ತಿಯನ್ನು ಹಿಮ್ಮೆಟ್ಟಿಸದೇ ದುಡಿಯುವ ಜನರನ್ನು ಒಂದು ಮಾಡಲು ಸಾಧ್ಯವಿಲ್ಲ. ದುಡಿಯುವ ಜನರನ್ನು ಒಂದು ಮಾಡದಿದ್ದರೆ ಸಮಾನತೆಯ ಕನಸು ನನಸಾಗುವುದಿಲ್ಲ. ಅದಕ್ಕಾಗಿ ಕೋಮುವಾದವನ್ನು ಪ್ರಧಾನ ಶತ್ರುವೆಂದು ನಾವು ಪರಿಗಣಿಸಬೇಕಾಗಿದೆ. ಸಮಾನತೆಯ ಬದುಕು ಸುಲಭವಾಗಿ ದಕ್ಕುವಂತಹದ್ದಲ್ಲ. ಅದಕ್ಕಾಗಿ ಭಾರೀ ಬೆಲೆ ತೆರಬೇಕಾಗುತ್ತದೆ. ಚರಿತ್ರೆಯಲ್ಲೂ ಕೂಡ ಈ ಸಮತೆಯ ಬದುಕಿಗಾಗಿ ಬಸವಣ್ಣನಂತಹವರು ಬಲಿದಾನ ಮಾಡಿದ್ದಾರೆ. ಅಪಾರ ಕಷ್ಟ ನೋವು ಅನುಭವಿಸಿದ ಬಾಬಾ ಸಾಹೇಬ ಅಂಬೇಡ್ಕರ್ ನಮ್ಮ ದೇಶ ಮುನ್ನಡೆಯಲು ಸಂವಿಧಾನ ಎಂಬ ಬೆಳಕು ನೀಡಿದ್ದಾರೆ. ಆ ಬೆಳಕನ್ನು ಕಾಪಾಡಿ ಸಮತೆಯ ಕನಸನ್ನು ನನಸಾಗಿಸುವುದು ನಮ್ಮ ಮುಂದಿರುವ ಸವಾಲಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News