ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಶರಣಾಗತಿ

Update: 2018-02-19 05:34 GMT

 ಬೆಂಗಳೂರು, ಫೆ.19: ಶಾಂತಿನಗರ ಕ್ಷೇತ್ರದ ಶಾಸಕ ಎನ್‌ಎ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ಸೋಮವಾರ ಬೆಳಗ್ಗೆ ಶರಣಾಗಿದ್ದಾರೆ.

ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿ ನಲಪಾಡ್‌ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. 37 ಗಂಟೆಗಳ ಕಾಲ ತಲೆಮರೆಸಿಕೊಂಡಿದ್ದ ನಲಪಾಡ್ ಕೊನೆಗೂ ಆಟೋ ರಿಕ್ಷಾದಲ್ಲಿ ಪೊಲೀಸ್ ಸ್ಟೇಶನ್‌ಗೆ ಬಂದು ಶರಣಾಗಿದ್ದಾರೆ.

‘‘ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಯಾರೇ ತಪ್ಪು ಮಾಡಿದರೂ ಅದು ತಪ್ಪು. ನನ್ನ ಮಗ ನಿನ್ನೆ ರಾತ್ರಿ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾನೆ. ಮನೆಯಲ್ಲಿಟ್ಟುಕೊಂಡು ಕಳುಹಿಸಿದರೆ ಕಾನೂನು ಬದಲಾಗಲ್ಲ. ಆತನನ್ನು ನಾನೇ ಪೊಲೀಸ್ ಠಾಣೆಯಲ್ಲಿ ಶರಣಾಗುವಂತೆ ಮಾಡುತ್ತೇನೆ’’ ಎಂದು ಶಾಂತಿನಗರ ಕ್ಷೇತ್ರದ ಶಾಸಕ ಎನ್‌ಎ ಹಾರಿಸ್ ಹೇಳಿದ್ದರು.

ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ತನ್ನ ಹತ್ತು ಜನರ ಸ್ನೇಹಿತರ ಜೊತೆಗೂಡಿ ಶನಿವಾರ ರಾತ್ರಿ ಯುಬಿ ಸಿಟಿಯ ರೆಸ್ಟೊರೆಂಟ್‌ವೊಂದರಲ್ಲಿ ಡಾಲರ್ಸ್ ಕಾಲನಿ ನಿವಾಸಿ ವಿದ್ವತ್ ಎಂಬಾತನಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಗಂಭೀರ ಗಾಯಗೊಂಡಿರುವ ವಿದ್ವತ್‌ನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News