ಭ್ರಷ್ಟಾಚಾರ ಜಾಗೃತಿಗಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳಿಸಿದ ಪ್ರಶಸ್ತಿಗಳೆಷ್ಟು ಗೊತ್ತಾ?

Update: 2018-02-19 08:21 GMT

ಹೊಸದಿಲ್ಲಿ, ಫೆ.19: ಕಳೆದ ಕೆಲ ವರ್ಷಗಳ ಅವಧಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11,400 ಕೋಟಿ ರೂ. ವಂಚನೆ  ನಡೆದಿರುವಂತೆಯೇ ಈ ಅವಧಿಯಲ್ಲಿ ಅದು ಬ್ಯಾಂಕ್ ನಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರಗಳ ಪತ್ತೆಗಾಗಿ ಹಲವಾರು  ಪ್ರಶಸ್ತಿಗಳನ್ನೂ ಬಾಚಿಕೊಂಡಿರುವುದು ವಿಪರ್ಯಾಸವೇ ಸರಿ.

ಕಳೆದ  ಮೂರು ವರ್ಷಗಳಲ್ಲಿ ಈ ಸಾರ್ವಜನಿಕ ರಂಗದ ಬ್ಯಾಂಕ್ ಮೂರು  ವಿಜಿಲೆನ್ಸ್ ಎಕ್ಸಲೆನ್ಸ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇವುಗಳಲ್ಲಿ ಎರಡು ಪ್ರಶಸ್ತಿಗಳು ಬ್ಯಾಂಕಿಗೆ ವಂಚನೆಗೈದು ಇದೀಗ ವಿದೇಶಕ್ಕೆ ಪಲಾಯನಗೈದಿರುವ ನೀರವ್ ಮೋದಿ ಮತ್ತಾತನ ಕುಟುಂಬದ ಒಡೆತನದ ಕಂಪೆನಿಗಳಿಗೆ 293 ಲೆಟರ್ಸ್ ಆಫ್ ಅಂಡರ್ ಟೇಕಿಂಗ್ ನೀಡಿದ ವರ್ಷ ಅಂದರೆ 2017ರಲ್ಲಿಯೇ  ಬಂದಿತ್ತು ಹಾಗೂ ಈ ಪ್ರಶಸ್ತಿಗಳನ್ನು ಕೇಂದ್ರ ವಿಜಿಲೆನ್ಸ್ ಆಯುಕ್ತರಾದ ಕೆ ವಿ ಚೌಧುರಿ ಅವರೇ ಪ್ರದಾನ ಮಾಡಿರುವುದು ಉಲ್ಲೇಖಾರ್ಹ.

ಕಳೆದ ವರ್ಷದ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಖ್ಯ ವಿಜಿಲೆನ್ಸ್ ಅಧಿಕಾರಿ ಎಸ್ ಕೆ ನಾಗಪಾಲ್ ಅವರು ಚೌಧುರಿ ಅವರಿಂದ ಹೈದರಾಬಾದ್ ನಗರದಲ್ಲಿರುವ ಒಸ್ಮಾನಿಯಾ ವಿವಿಯ ಕ್ಯಾಂಪಸ್ಸಿನಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಎಂಟರ್‍ಪ್ರೈಸ್  ಆಯೋಜಿಸಿದ್ದ ವಿಜಿಲೆನ್ಸ್ ಕಾಂಕ್ಲೇವ್ ನಲ್ಲಿ  ಕಾರ್ಪೊರೇಟ್ ವಿಜಿಲೆನ್ಸ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

ಅಕ್ಟೋಬರ್ 2017ರಲ್ಲಿ ಹೊಸದಿಲ್ಲಿಯಲ್ಲಿ ಕೇಂದ್ರ ವಿಜಿಲೆನ್ಸ್ ಆಯೋಗ ಆಯೋಜಿಸಿದ್ದ ವಿಜಿಲೆನ್ಸ್ ಜಾಗೃತಿ ಸಪ್ತಾಹದ ಸಂದರ್ಭ ``ಟೈಮ್ಲಿ ಕಂಪ್ಲೀಶನ್ ಆಫ್ ಡಿಸಿಪ್ಲಿನರಿ ಪ್ರೊಸೀಡಿಂಗ್ಸ್'' ಕ್ಷೇತ್ರದಲ್ಲಿನ ಅಸಾಮಾನ್ಯ ಸಾಧನೆಗಾಗಿ ಪಿಎನ್‍ಬಿ ವಿಜಿಲೆನ್ಸ್ ಎಕ್ಸಲೆನ್ಸ್ ಪ್ರಶಸ್ತಿಯನ್ನು  ಪಡೆದಿತ್ತು. ನಿಗದಿತ ಸಮಯ ಮಿತಿಯೊಳಗಾಗಿ ಶೇ 92ರಷ್ಟು ಶಿಸ್ತು ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಈ ಪ್ರಶಸ್ತಿ ಕೊಡ ಮಾಡಲಾಗಿತ್ತು. 2014-15ರಲ್ಲಿ ಕೂಡ ಈ ಬ್ಯಾಂಕ್ ಐಪಿಇ ವಿಜಿಲೆನ್ಸ್ ಪ್ರಶಸ್ತಿ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News