ಬಾಗೇಪಲ್ಲಿ: ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಖಂಡರ ಸಭೆ

Update: 2018-02-19 12:14 GMT

ಬಾಗೇಪಲ್ಲಿ,ಫೆ.19:  ಕಾಂಗ್ರೆಸ್ ಪಕ್ಷದ ಸಂಭವನೀಯ ಆಕಾಂಕ್ಷಿಗಳನ್ನು ಪಟ್ಟಿ ಮಾಡಿ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸುವುದು ಮಾತ್ರ ನಮ್ಮ ಕೆಲಸ. ಅಭ್ಯರ್ಥಿಯನ್ನು ಘೋಷಣೆ ಮಾಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ಮಾಜಿ ಸಂಸದ ಹಾಗೂ ಚುನಾವಣಾ ವೀಕ್ಷಕ ಐ.ಜಿ.ಸನಧಿ ರವರು ತಿಳಿಸಿದರು.

ಪಟ್ಟಣದ ಹೊರವಲಯದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು  ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಿ, ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರುಗಳಿಂದ ಮಾಹಿತಿ ಸಂಗ್ರಹಿಸಿ, ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಿ ಎಐಸಿಸಿಗೆ ವರದಿಯನ್ನು ಸಲ್ಲಿಸಲು ನಾನು ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎಂ.ನಿಂಗಪ್ಪರವರು ವೀಕ್ಷಕರಾಗಿ ಬಂದಿರುವುದಾಗಿ ತಿಳಿಸಿದರು.

ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ನಾವು  ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಲು ಬಂದಿಲ್ಲ. ಇಲ್ಲಿ ನಾವು ಈ ಕ್ಷೇತ್ರದ ಪಕ್ಷದ ಜನಪ್ರತಿನಿಧಿಗಳ, ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸೇರಿದಂತೆ  ಕ್ಷೇತ್ರದ ಜನನಾಡಿಯ ಅಭಿಪ್ರಾಯವನ್ನು ಸಂಗ್ರಹಿಸಿ 5 ಮಂದಿ ಸಂಭವನೀಯ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಿ ನೇರವಾಗಿ ಎಐಸಿಸಿಗೆ ಕಳಹಿಸುವಂತೆ ನಮಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಅವರು, ಇಲ್ಲಿ ನಾವು ಸಂಗ್ರಹಿಸಿರುವ ಮಾಹಿತಿಯ ಪಟ್ಟಿಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೂಲಕ ಎಐಸಿಸಿ ಸಮಿತಿಗೆ ಸಲ್ಲಿಸಲಾಗುವುದು. ಪಕ್ಷದ ಟಿಕೆಟ್ ನೀಡುವ ಸಂಪೂರ್ಣ ಜವಾಬ್ದಾರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿರವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ತೀರ್ಮಾನಿಸಲಾಗುತ್ತೆ ಎಂದರು.

ಈ ಸಂಬಂಧ ಸಂಭವನೀಯ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಪಕ್ಷದ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಸಿ.ಎಂ.ನಿಂಗಪ್ಪ ಸಭೆಯಲ್ಲಿ ಪ್ರಸ್ಥಾಪಿಸುತ್ತಿದ್ದಂತೆ ಸಭೆಯಲ್ಲಿದ್ದ ಬಹುತೇಕ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಹಾಗೂ ಹಾಲಿ ಶಾಸಕರ ಬೆಂಬಲಿಗರು ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಬಿಟ್ಟರೆ ಬೇರೆ ಯಾವುದೇ ಆಕಾಂಕ್ಷಿಗಳಿಲ್ಲ ಎಂದು ಹಾಲಿ ಶಾಸಕರ ಪರ ಘೋಷಣೆಗಳನ್ನು ಕೂಗಿದರು. ಇಲ್ಲಿ ಬೇರೆ ಯಾರೂ ಆಕಾಂಕ್ಷಿಗಳಿಲ್ಲ, ಎಸ್.ಎನ್.ಸುಬ್ಬಾರೆಡ್ಡಿ ಮಾತ್ರ ಇಲ್ಲಿ ಏಕೈಕ ಆಕಾಂಕ್ಷಿ. ಇದರಿಂದ ಹಾಲಿ ಶಾಸಕರಿಗೆ ಪಕ್ಷದ ಅಧಿಕೃತ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಕೆಲ ಕಾರ್ಯಕರ್ತರು ಹಾಗೂ ಹಾಲಿ ಶಾಸಕರ ಬೆಂಬಲಿಗರು, ಒಂದು ವೇಳೆ ಬೇರೆ ಯಾರಾದರೂ ಆಕಾಂಕ್ಷಿಗಳಿದ್ದರೆ ಅವರು ಇದೇ ಸಭೆಯಲ್ಲಿ ಮನವಿಯನ್ನು ಸಲ್ಲಿಸಲಿ, ಯಾವುದೇ ಕಾರಣಕ್ಕೂ ರಸ್ತೆಯ ಮಧ್ಯದಲ್ಲಿಯೋ ಇಲ್ಲವೆ ಇತರೆ ಕಡೆ ನೀಡಿದರೆ ಅದನ್ನು ಪಕ್ಷದ ವೀಕ್ಷಕರಾಗಿ ಬಂದಿರುವಂತಹ ವೀಕ್ಷಕರು ಮನವಿಯನ್ನು ಸ್ವೀಕರಿಸಬಾರದು ಎಂದು  ಗದ್ದಲ ಮಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕರು ಸೇರಿದಂತೆ ಅವರ ಬೆಂಬಲಿಗರು ಸಭೆಗೆ ಆಗಮಿಸಿದ್ದು, ಇದರಿಂದ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತ್ತು.

ಈ ವೇಳೆ ಮಾಜಿ ಶಾಸಕ, ಎಐಸಿಸಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ಸಂಪಂಗಿ ರವರು ಸಭೆಗೆ ಆಗಮಿಸಿ ತಮ್ಮ ಮನವಿ ಪತ್ರವನ್ನು ಸಲ್ಲಿಸಿದರು. ವಿಧಾನ ಸಭಾ  ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಲು ಬಂದಿದ್ದ ಐ.ಜಿ.ಸನದಿ ಹಾಗೂ ಸಿ.ಎಂ.ನಿಂಗಪ್ಪ ರವರು ಈ ಕ್ಷೇತ್ರದಿಂದ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿ ಹಾಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ಮಾಜಿ ಶಾಸಕ ಎನ್.ಸಂಪಂಗಿ ರವರು ಮನವಿಯನ್ನು ಸಲ್ಲಿಸಿರುವುದಾಗಿ ತಿಳಿಸಿದ ಅವರು, ಪಕ್ಷದ ವರಿಷ್ಠರು ಯಾರಿಗೆ ಪಕ್ಷದ ಅಧಿಕೃತ ಅಭ್ಯರ್ಥಿ ಎಂಬುದಾಗಿ ತೀರ್ಮಾನ ಮಾಡಿದರೂ ಸಹ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಡಬೇಕೆಂದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ, ಜಿ.ಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾ.ಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News