ಮಡಿಕೇರಿ: ಮೂರನೇ ಬಾರಿಗೆ ಕೆಸಿಎಲ್ ಕ್ರಿಕೆಟ್ ಪಂದ್ಯಾಟ ಆಯೋಜನೆ

Update: 2018-02-19 12:36 GMT

ಮಡಿಕೇರಿ, ಫೆ.19: ಇಲ್ಲಿಯ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ 3ನೆ ವರ್ಷದ ಐಪಿಎಲ್ ಮಾದರಿಯ ಕೆಸಿಎಲ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಏರ್ಪಡಿಸಿರುವುದಾಗಿ ಸಂಘದ ಪ್ರಮುಖರು ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಕೆಸಿಎಲ್ ಸಮಿತಿಯ ಅಧ್ಯಕ್ಷ ಸುರೇಶ್ ಬಿಳಿಗೇರಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಕ್ರಿಕೆಟ್ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅದ್ಭುತ ವೇದಿಯಾಗಿ ಕೆಸಿಎಲ್ ರೂಪಗೊಂಡಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದಹಲವು ಗ್ರಾಮೀಣ ಭಾಗದ ಆಟಗಾರರು ರಾಜ್ಯಮಟ್ಟದಲ್ಲಿ ಸ್ಥಾನ ಪಡೆಯಲು ಈ ಕ್ರೀಡಾಕೂಟ ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಕೆಸಿಎಲ್ ಸಮಿತಿಯ ಉದ್ದೇಶವಾಗಿದೆ ಎಂದ ಅವರು, ಕೆಸಿಎಲ್ ಮೂರನೇ ಆವೃತ್ತಿಯು ಅತ್ಯಂತ ವಿಜೃಂಭಣೆಯಿಂದ ಎಪ್ರಿಲ್ 8 ರಿಂದ 12ರ ವರೆಗೆ ಸಿದ್ದಾಪುರದಲ್ಲಿ ನಡೆಯಲಿದೆ ಎಂದರು.

ಕೆಸಿಎಲ್ ಪ್ರಚಾರ ಸಮಿತಿಯ ಅಧ್ಯಕ್ಷ ರಜಿತ್ ಕುಮಾರ್ ಮಾತನಾಡಿ, ಪಂದ್ಯಾವಳಿಯಲ್ಲಿ ಕೇವಲ 12 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಆಟಗಾರರಿಗಾಗಿ ಜಿಲ್ಲೆಯಾದ್ಯಂತ ಅರ್ಜಿಯನ್ನು ವಿತರಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನವಾಗಿರುತ್ತದೆ ಎಂದು ಮಾಹಿತಿ ನೀಡಿದ ಅವರು, ಎರಡು ಹಂತದಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದ್ದು, ಪ್ರಥಮ ಹಂತದಲ್ಲಿ ಐಕಾನ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯು ಮಾ 10 ರಂದು ನಡೆಯಲಿದ್ದು, ಮಾ. 13 ರಂದು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ ಎಂದ ಅವರು, ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ರೂ. 1,15,151 ನಗದು ಹಾಗೂ ದ್ವಿತೀಯ ಸ್ಥಾನಕ್ಕೆ ರೂ. 56,565 ನಗದು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9945437442, 9449290718, 9731783149 ಸಂಖ್ಯೆಗೆ ಸಂಪರ್ಕಿಸಲು ಕೋರಿದ್ದಾರೆ.

ಗೋಷ್ಠಿಯಲ್ಲಿ ಕೆಸಿಎಲ್ ಸಮಿತಿಯ ಕಾರ್ಯದರ್ಶಿ ಮುಸ್ತಫ, ಸಮಿತಿ ಸಂಚಾಲಕರಾದ ಸತೀಶ್ ಹಾಗೂ ಚೆಲುವ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News