ಸಾಗರ: ತುಮರಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ

Update: 2018-02-19 16:53 GMT

ಸಾಗರ, ಫೆ.19: ತುಮರಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಐತಿಹಾಸಿಕ ಕಾರ್ಯಕ್ರಮ. ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಸಂತ್ರಸ್ತ ಜನರಿಗೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ಈ ಯೋಜನೆ ಅತ್ಯಂತ ಮಹತ್ವಪೂರ್ಣವಾದದ್ದು ಎಂದು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಮತ್ತು ಹಡಗುಗಳ ಸಚಿವಾಲಯ ಹಾಗೂ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸಾಗರ ತಾಲೂಕಿನ ಕಳಸವಳ್ಳಿಯಲ್ಲಿ ತುಮರಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹೀಗೆ ತಯಾರಿಸಿದ ಪ್ರಸ್ತಾವವನ್ನು ನನಗೆ ಕಳುಹಿಸಿಕೊಟ್ಟರೆ ತಕ್ಷಣ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.

ಮುಂದಿನ ಎರಡು ವರ್ಷಗಳಲ್ಲಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಬಯೋಡಿಸೇಲ್ ವಾಹನ ತಯಾರಿಕೆ ಹಾಗೂ ಸಂಚಾರಕ್ಕೆ ಕೇಂದ್ರ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.

ದೇಶವೊಂದು ಅಭಿವೃದ್ಧಿ ಹೊಂದಬೇಕಾದರೆ ಕೈಗಾರಿಕೆ ಮತ್ತು ಕೃಷಿ ಅತ್ಯಗತ್ಯ. ಕೈಗಾರಿಕೆಗಳ ಮೂಲಕ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಿದೆ. ಕೈಗಾರಿಕೆಗಳ ಸ್ಥಾಪನೆಯಾಗಬೇಕಾದರೆ ರಸ್ತೆ, ನೀರು, ವಿದ್ಯುಚ್ಛಕ್ತಿ ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರತಿರಾಜ್ಯಗಳ ನಡುವೆ ಸಂಪರ್ಕ ಸಾಧಿಸಲು ರಸ್ತೆ ಅಭಿವೃದ್ಧಿ ಕಾರ್ಯವನ್ನು ಕೇಂದ್ರ ಸರಕಾರ ಅತ್ಯಂತ ತ್ವರಿತವಾಗಿ ಕೈಗೆತ್ತಿಕೊಂಡಿದೆ ಎಂದು ಹೇಳಿದರು.

ತುಮಕೂರಿನಿಂದ ಶಿವಮೊಗ್ಗವರೆಗೆ ರಾಷ್ಟ್ರೀಯ ಹೆದ್ದಾರಿ 206ನ್ನು ಚತುಷ್ಪಥ ರಸ್ತೆಯಾಗಿ ಮಾರ್ಪಡಿಸಲು 5,800 ಕೋಟಿ ರೂ. ಭಾರತ್ ಮಾಲಾ ಯೋಜನೆಯಡಿ ನೀಡಲಾಗಿದೆ. ದಶಕಗಳ ಕಾಲ ರಸ್ತೆ ಹಾಳಾಗದಂತೆ ಅಗತ್ಯ ಗುಣಮಟ್ಟ ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಪ್ರತಿದಿನ ಕನಿಷ್ಠ 28 ಕಿ.ಮೀ. ರಸ್ತೆ ನಿರ್ಮಾಣ ಮಾಡಬೇಕು ಎನ್ನುವುದು ತನ್ನ ಆಶಯ. ಈ ಹಿನ್ನೆಲೆಯಲ್ಲಿ ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಅತಿ ಶೀಘ್ರದಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.

ಚೆನ್ನೈ-ಬೆಂಗಳೂರು, ಹೈದರಾಬಾದ್-ಬೆಂಗಳೂರು ರಸ್ತೆಯನ್ನು ಎಕ್ಸ್‌ಪ್ರೆಸ್ ಹೈವೇಯಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ. ಇದರ ಜೊತೆಗೆ ಬೆಂಗಳೂರು-ಮೈಸೂರು ನಡುವಿನ 117 ಕಿ.ಮೀ. ರಸ್ತೆ ಅಭಿವೃದ್ಧಿಗೆ 7,000 ಕೋಟಿ ರೂ. ಅನುದಾನ ನೀಡಲಾಗಿದ್ದು, ಆರು ಪಥದ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧವಾಗಿದ್ದು, ಮುಂದಿನ 2 ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ನಮ್ಮ ಸರಕಾರದ ಅವಧಿಯಲ್ಲಿ ಅತಿಹೆಚ್ಚು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. 2014ರವರೆಗೆ ರಾಜ್ಯದಲ್ಲಿ 6,716 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿತ್ತು. ನಾವು ಅಧಿಕಾರಕ್ಕೆ ಬಂದ ಮೂರೂವರೆ ವರ್ಷದಲ್ಲಿ 6,805 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.

ಸಂಸದ ಬಿ.ಎಸ್. ಯಡಿಯೂರಪ್ಪ ಮಾತನಾಡಿ, 1945ರ ಹಿರೇಭಾಸ್ಕರ ಹಾಗೂ 1960ರಲ್ಲಿ ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಹಿನ್ನೀರಿನ ಜನರು ಮಾಡಿದ ತ್ಯಾಗವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸಮಾರಂಭದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಶಾಸಕ ಬಿ.ವೈ. ರಾಘವೇಂದ್ರ, ಪ್ರಮುಖರಾದ ಆಯನೂರು ಮಂಜುನಾಥ್, ಗುರುಮೂರ್ತಿ, ಎಸ್.ದತ್ತಾತ್ರಿ, ಮಲ್ಲಿಕಾರ್ಜುನ ಹಕ್ರೆ, ಜಿ.ಟಿ. ಸತ್ಯನಾರಾಯಣ, ಕಾಗೋಡು ಅಣ್ಣಪ್ಪ, ರಾಜಶೇಖರ ಗಾಳಿಪುರ, ಸಿಗಂದೂರು ರಾಮಪ್ಪ, ಎಸ್.ಪಿ. ಶೇಷಗಿರಿ ಭಟ್, ಲಕ್ಷ್ಮಣಕುಮಾರ್ ಪೇಶ್ವೆ ಸೇರಿದಂತೆ ಇನ್ನಿತರರು ಇದ್ದರು.

ಅಭಿವೃದ್ಧಿ ವಿಷಯದಲ್ಲಿ ನಮ್ಮ ಸರಕಾರ ಯಾವುದೇ ರಾಜಕೀಯ ಮಾಡುವುದಿಲ್ಲ. ಶಿಕಾರಿಪುರ, ಶಿವಮೊಗ್ಗ, ಸಿಗ್ಗಾ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟ ಯೋಜನೆ ರೂಪಿಸುವುದು ರಾಜ್ಯ ಸರಕಾರದ ಹೊಣೆಗಾರಿಕೆ.
- ನಿತಿನ್ ಗಡ್ಕರಿ,ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಖಾತೆ ಸಚಿವ

ಶರಾವತಿ ನದಿಗೆ ಆಣೆಕಟ್ಟು ಕಟ್ಟುವ ಸಂದರ್ಭದಲ್ಲಿ ತಮ್ಮ ಸರ್ವಸ್ವವನ್ನು ಕಳೆದುಕೊಂಡು ಸಂತ್ರಸ್ತ ಬದುಕು ಸಾಗಿಸುತ್ತಿರುವ ಹಿನ್ನೀರಿನ ಜನರಿಗೆ ಇಂದು ಸುದಿನ. ಬಹುಕಾಲದ ಸೇತುವೆ ಬೇಡಿಕೆಯನ್ನು ಕೇಂದ್ರ ಸರಕಾರ ಈಡೇರಿಸುತ್ತಿದೆ. ಸಂಸದ ಯಡಿಯೂರಪ್ಪ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ.
- ಕಾಗೋಡು ತಿಮ್ಮಪ್ಪ,ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News