ಕೋಲ್ಕತಾ ನೈಟ್ ರೈಡರ್ಸ್‌ಗೆ ಕ್ರಿಸ್ ಲಿನ್ ನಾಯಕ?

Update: 2018-02-19 18:31 GMT

ಕೋಲ್ಕತಾ, ಫೆ.19: ಮುಂಬರುವ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಕ್ರಿಸ್ ಲಿನ್‌ರನ್ನು ನಾಯಕನನ್ನಾಗಿ ನೇಮಿಸಲು ಚಿಂತನೆ ನಡೆಸುತ್ತಿದೆ. ಕಳೆದ ತಿಂಗಳು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಗೌತಮ್ ಗಂಭೀರ್ ತವರಿನ ತಂಡ ಡೆಲ್ಲಿ ಡೇರ್ ಡೆವಿಲ್ಸ್‌ಗೆ ಬಿಕರಿಯಾಗಿದ್ದರು. ಹೀಗಾಗಿ ಕೆಕೆಆರ್‌ನ ನಾಯಕನ ಸ್ಥಾನ ತೆರವಾಗಿದೆ.

ಜನವರಿಯಲ್ಲಿ ನಡೆದ ಹರಾಜಿನಲ್ಲಿ ಕೆಕೆಆರ್ 9.6 ಕೋ.ರೂ. ನೀಡಿ ಲಿನ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದು, ನಾಯಕತ್ವದ ಪಾತ್ರಕ್ಕೆ ಲಿನ್ ಓರ್ವ ಪ್ರಮುಖ ಅಭ್ಯರ್ಥಿ ಎಂದು ಕೆಕೆಆರ್ ಕೋಚ್ ಜಾಕ್ ಕಾಲಿಸ್ ಇತ್ತೀಚೆಗೆ ಸುಳಿವು ನೀಡಿದ್ದಾರೆ.

2017-18ರ ಬಿಗ್ ಬಾಶ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ಸ್ ಪರ ಲಿನ್ ಕೇವಲ 5 ಪಂದ್ಯಗಳನ್ನು ಆಡಿದ್ದರೂ 148 ರನ್ ಗಳಿಸಿ ಗಮನ ಸೆಳೆದಿದ್ದರು. ಲಿನ್ ಐದನೇ ಬಾರಿ ಐಪಿಎಲ್‌ನಲ್ಲಿ ಆಡಲಿದ್ದಾರೆ. ಕಳೆದ ವರ್ಷ ಕೆಕೆಆರ್ ತಂಡದಲ್ಲಿದ್ದ ಅವರು ಕೇವಲ 7 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರೂ 295 ರನ್ ಗಳಿಸಿದ್ದರು.

 ಲಿನ್‌ಗೆ ಅವರದೇ ದೇಶದ ಮಿಚೆಲ್ ಸ್ಟಾರ್ಕ್ ಹಾಗೂ ಮಿಚೆಲ್ ಜಾನ್ಸನ್ ಸಾಥ್ ನೀಡಲಿದ್ದಾರೆ. ಐಪಿಎಲ್‌ನಲ್ಲಿ ಸಾಕಷ್ಟು ಪಳಗಿರುವ ರಾಬಿನ್ ಉತ್ತಪ್ಪ, ವಿನಯಕುಮಾರ್, ಸುನೀಲ್ ನರೇನ್, ಪಿಯೂಷ್ ಚಾವ್ಲಾ ಕೆಕೆಆರ್‌ನಲ್ಲಿದ್ದಾರೆ.

ಲಿನ್‌ಗೆ ಗಂಭೀರ್‌ರಿಂದ ತೆರವಾದ ನಾಯಕತ್ವದ ಸ್ಥಾನ ತುಂಬುವುದು ಸುಲಭ ಸಾಧ್ಯವಲ್ಲ. 7 ವರ್ಷಗಳ ಕಾಲ ಕೋಲ್ಕತಾ ತಂಡವನ್ನು ಐಪಿಎಲ್‌ನಲ್ಲಿ ಪ್ರತಿನಿಧಿಸಿದ್ದ ಗಂಭೀರ್ 108 ಪಂದ್ಯಗಳಲ್ಲಿ 3,035 ರನ್ ಗಳಿಸಿದ್ದಲ್ಲದೆ 2 ಬಾರಿ ಐಪಿಎಲ್ ಟ್ರೋಫಿ ಜಯಿಸಲು ನಾಯಕತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News