ಹೊರಮಾವು ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದ 'ಕೈ' ಮುಖಂಡ

Update: 2018-02-20 07:11 GMT

ಬೆಂಗಳೂರು, ಫೆ.20: ಜಮೀನಿಗೆ ಅಕ್ರಮವಾಗಿ ಖಾತೆ ಮಾಡಿಕೊಡದ ಕಾರಣಕ್ಕಾಗಿ ಕಾಂಗ್ರೆಸ್ ಮುಖಂಡರೊಬ್ಬರು ಬಿಬಿಎಂಪಿಯ ಹೊರಮಾವು  ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದ ಘಟನೆ ವರದಿಯಾಗಿದೆ. ಕೆಆರ್ ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಅವರು ಬಿಬಿಎಂಪಿ ಕಚೇರಿಯಲ್ಲಿ ತಮಗೆ ಯಾವುದೋ ಕೆಲಸ  ಆಗಿಲ್ಲ ಎಂಬ ಸಿಟ್ಟಿನಿಂದ ಬಿಬಿಎಂಪಿ ಕಚೇರಿ ನುಗ್ಗಿ ಪೆಟ್ರೋಲ್ ಸುರಿದು ದಾಂದಲೆ ನಡೆಸಿದರು ಎಂದು ತಿಳಿದು ಬಂದಿದೆ.

ಜಮೀನು ಖಾತೆ ಮಾಡಿಕೊಡದಿದ್ದರೆ ಕಚೇರಿಗೆ ಬೆಂಕಿ ಹಚ್ಚುವುದಾಗಿ ಅಲ್ಲಿದ್ದ ಅಧಿಕಾರಿಗಳನ್ನು ಬೆದರಿಸಿದ ನಾರಾಯಣ ಸ್ವಾಮಿ ಅವರು ತನ್ನ ಆಪ್ತನ  ಕೈಯಲ್ಲಿದ್ದ  ಪೆಟ್ರೋಲ್ ಬಾಟ್ಲಿಯನ್ನು  ಕಿತ್ತುಕೊಂಡು ಕಚೇರಿಯ ಕಡತಗಳಿರುವ ಕವಾಟಿಗೆ ಪೆಟ್ರೋಲ್ ಎರಚಿದರು ಎಂದು ಟಿವಿ 9 ವರದಿ ಮಾಡಿದೆ. 

ಶಾಸಕ ಭೈರತಿ ಬಸವರಾಜ್  ಆಪ್ತರಾಗಿರುವ ಜಲಮಂಡಳಿ ಸದಸ್ಯ  ನಾರಾಯಣ ಸ್ವಾಮಿ ಎಂಬವರು ಫೆ.16ರಂದು  ಈ ಕೃತ್ಯ ನಡೆಸಿದ್ದರೂ, ಘಟನೆತಡವಾಗಿ  ಬೆಳಕಿಗೆ ಬಂದಿದೆ. ನಾರಾಯಣ ಸ್ವಾಮಿ  ಗೂಂಡಾಗಿರಿ ವರ್ತನೆಯ ವಿಡಿಯೊ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.

ನಾರಾಯಣ ಸ್ವಾಮಿ ತಪ್ಪು ಮಾಡಿದ್ದರೆ ಬಂಧಿಸಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪೊಲೀಸರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೆಟ್ರೋಲ್ ಸುರಿದಿಲ್ಲ: ತಾನು ಪೆಟ್ರೋಲ್ ಸುರಿದಿಲ್ಲ. ಕೆಮಿಕಲ್ ಮಿಶ್ರಿತ ನೀರು ಎರಚಿರುವುದಾಗಿ  ಹೇಳಿ ನಾರಾಯಣಸ್ವಾಮಿ ಅವರು ಈ ನಡುವೆ ಈ ಪ್ರಕರಣದಿಂದ ಹೊರಬರಲು ಯತ್ನ ನಡೆಸಿರುವುದಾಗಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News