ಹನೂರು: 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ

Update: 2018-02-20 10:55 GMT

ಹನೂರು,ಫೆ.20: ನರೇಗಾ ಯೋಜನೆಯಡಿ ಕಳೆದ 6 ತಿಂಗಳ ಅವಧಿಯಲ್ಲಿ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 186 ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, 64 ಲಕ್ಷ ರೂ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಾಪಂ ನರೇಗಾ ಸಂಯೋಜಕ ಮನೋಹರ್ ತಿಳಿಸಿದರು. 

ಕ್ಷೇತ್ರ ವ್ಯಾಪ್ತಿಯ ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸಿದ್ಧ 2017-18ನೇ ಸಾಲಿನ 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. 

ಹನೂರು ಕ್ಷೇತ್ರ ವ್ಯಾಪ್ತಿಯು ದೊಡ್ಡ ಗ್ರಾಮ ಪಂಚಾಯತ್ ಆಗಿದ್ದು, ಇದರಲ್ಲಿ 23 ಗ್ರಾಮಗಳು ಒಳಪಟ್ಟಿದೆ. ಗ್ರಾಮ ವ್ಯಾಪ್ತಿಯಲ್ಲಿ 4ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದ್ದು, ಕಳೆದ 6 ತಿಂಗಳ ಅವಧಿಯಲ್ಲಿ ನರೇಗಾ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಲ್ಲಿ  ಕೃಷಿಹೊಂಡಾ, ಧನದ ಕೂಟ್ಟಿಗೆ, ಚೆಕ್‍ಡ್ಯಾಂ ಹೂಳೆತ್ತುವುದು, ಕಾಲುವೆ ನಿರ್ಮಾಣ, ಸ್ಮಶಾನ ಅಭಿವೃದ್ದಿ ರೀವೆಟ್‍ಮೆಂಟ್, ಕೆರೆ ಅಭಿವೃದ್ದಿ, ಜಾನುವಾರುಗಳ ನೀರಿನ ತೊಟ್ಟಿ, ರಸ್ತೆ ನಿರ್ಮಾಣ, ವಸತಿ ಯೋಜನೆಗಳು ಸೇರಿದಂತೆ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ದಿಸೆಯಲ್ಲಿ 186 ಕಾಮಗಾರಿಗಳಿಗೆ 6,41,10,691ರೂಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮಸ್ಥರು ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಗ್ರಾಮವು ಅಭಿವೃದ್ಧಿಯತ್ತ ಸಾಗಲು ಸಹಕಾರ ನೀಡಬೇಕು ಎಂದು ತಿಳಿಸಿದರು. 

ಪಿಡಿಒ ನಜುಂಡಸ್ವಾಮಿ ಮಾತನಾಡಿ, ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಪ್ರತಿ ಕುಟುಂಬದ ಕರಕುಶಲ ಕೂಲಿ ಕಾರ್ಮಿಕರು ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಯೋಜನೆಯಡಿ ರಸ್ತೆ ಅಭಿವೃದ್ಧಿ, ಒಕ್ಕಣೆ ಕಣ ನಿರ್ಮಾಣ, ಜಮೀನು ಅಭಿವೃದ್ಧಿ, ಕೆರೆ ಅಭಿವೃದ್ಧಿ, ಶಾಲಾ ಕಾಂಪೌಂಡ್ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಆದುದರಿಂದ ಗ್ರಾಪಂ ವ್ಯಾಪ್ತಿಯಲ್ಲಿನ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು 

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ  ಬೋದಮ್ಮ, ಉಪಾಧ್ಯಕ್ಷ  ಜಪಾಮಾಲೈ, ನೂಡಲ್ ಅಧಿಕಾರಿ ರಮೇಶ್ ಗ್ರಾಪಂ ಸದಸ್ಯರಾದ ರಾಮಲಿಂಗಮ್, ಶಿವಣ್ಣ ಶಿವನಂಜಪ್ಪ, ಇನಾಶಿಮುತ್ತು, ತಂಬಿ ರಾಜ ತಮುಖಂಡರಾದ ಮಾದು ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News