ಬಾಗೇಪಲ್ಲಿ: ಛತ್ರಪತಿ ಶಿವಾಜಿ, ಸರ್ವಜ್ಞ ಜಯಂತಿ ಆಚರಣೆ

Update: 2018-02-20 11:35 GMT

ಬಾಗೇಪಲ್ಲಿ,ಫೆ.20: ಹಿಂದಿನ ಕಾಲದಲ್ಲಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದಿದ ಮಹನೀಯರನ್ನು ಇಂದಿನ ಯುವಪೀಳಿಗೆ ನೆನೆಸಿಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ತಹಸೀಲ್ದಾರ್ ಮಹಮದ್ ಅಸ್ಲಂ ತಿಳಿಸಿದ್ದಾರೆ.

ಪಟ್ಟಣದ ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಶ್ರೀ ಛತ್ರಪತಿ ಶಿವಾಜಿ ಹಾಗೂ ಸರ್ವಜ್ಞ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಮಹನೀಯರು, ವಚನಕಾರರು, ಕವಿಗಳು, ಸಾಹಿತಿಗಳು ಸೇರಿದಂತೆ ಇನ್ನೂ ಅನೇಕರು ತಮ್ಮ ವಚನಗಳ, ಗದ್ಯ ಪದ್ಯಗಳ ಬರವಣಿಗೆಗಳ ಮೂಲಕ ಸಮಾಜದಲ್ಲಿ ನಡೆಯುತ್ತಿದ್ದ ಜಾತಿ ಪದ್ದತಿ, ಮೂಢನಂಬಿಕೆ, ಮೌಡ್ಯಗಳನ್ನು ಖಂಡಿಸಿ ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದರು. ಇಂತಹ ಯಾವುದೇ ಪುಣ್ಯಪುರುಷರ ಜಯಂತಿಗಳನ್ನು ಕೇವಲ ಕಾಟಾಚಾರಕ್ಕಾಗಿ ಮಾಡಬಾರದು. ಅವರ ಆದರ್ಶಗಳನ್ನು ಅಚಾರ ವಿಚಾರಗಳನ್ನು ಜನರಿಗೆ ಮುಟ್ಟಿಸುವಂತಹ ಕೆಲಸ ಮಾಡಬೇಕಾಗಿದೆ ಎಂದರು

ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಕುಂಬಾರರ ಸಂಘದ ಖಜಾಂಚಿ ಬಿ.ವಿ.ಶಿವಯ್ಯ, ನಮ್ಮ ದೇಶದಲ್ಲಿ ಸ್ವಚ್ಚ ಸಮಾಜಕ್ಕಾಗಿ ದುಡಿದಂತಹ ಮಹನೀಯರನ್ನು ಅವರವರ ಜಾತಿಗಳಿಗೆ ಸೀಮಿತ ಮಾಡಿ ಹಿಂದಿನ ಕಾಲದಲ್ಲಿದ್ದ ಜಾತಿಪದ್ದತಿಯನ್ನು ಮತ್ತೆ ಜಾರಿಗೆ ತರುತ್ತಿದ್ದಾರೆ. ಸರ್ವಜ್ಞ, ಚತ್ರಪತಿ ಶಿವಾಜಿ, ವೇಮನ, ಬಸವಣ್ಣ, ಇನ್ನೂ ಅನೇಕರು ತಮ್ಮ ಸ್ವಾರ್ಥಕ್ಕಾಗಿ ಎಂದೂ ಯೋಚಿಸಿದವರಲ್ಲ. ಸರ್ವಜ್ಞ ಎಂದರೆ ಎಲ್ಲವನ್ನೂ ಬಲ್ಲವನು. 600 ವರ್ಷಗಳ ಹಿಂದೆ ರೈಲು ಮಾರ್ಗದ ಬಗ್ಗೆ ಮುನ್ನುಡಿ ಬರೆದು ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ಅಂದಿನ ಕಾಲದಲ್ಲೇ ಕನ್ನಡ ಭಾಷೆಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದರು. ಕುಂಬಾರರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಈ ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರಿ ಸೌಲಭ್ಯಗಳನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.

ನಂತರ ಮರಾಠ ಸಂಘದ ನಾಗರಾಜರಾವ್ ಮಾತನಾಡಿದರು

ಈ ಸಂದರ್ಭದಲ್ಲಿ ಯಲ್ಲಂಪಲ್ಲಿ ನಂಜುಂಡಪ್ಪ, ಕಾರ್ಯಕ್ರಮದ ಆವರಣದಲ್ಲೇ ಮಡಕೆಯನ್ನು ಮಾಡುವುದರ ಮೂಲಕ ಕುಂಬಾರ ಕುಲ ಕಸುಬಿಗೆ ಸಾಕ್ಷಿಯಾದರು.

ಕಾರ್ಯಕ್ರದಲ್ಲಿ ತಾ.ಪಂ.ಉಪಾದ್ಯಕ್ಷೆ ಸರಸ್ವತಮ್ಮ, ಬಿಇಒ ಎಂ.ಶಿವಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಕ ವಿ.ಜಯರಾಂ, ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರವಣಪ್ಪ, ಶಿಕ್ಷಕಿ ಪ್ರಭಾವತಮ್ಮ, ಸಾಕ್ಷರತಾ ಸಮನ್ವಯ ಅದಿಕಾರಿ ಶಿವಪ್ಪ, ಮರಾಠ ಸಂಘದ ಅಧ್ಯಕ್ಷ ಆನಂದರಾವ್, ಶಿಕ್ಷಕ ಮಂಜುನಾಥ ಪುರಸಭೆ ಸದಸ್ಯೆ ಉಷಾರಾಣಿ, ನಿವೃತ್ತ ಎಎಸ್‍ಐ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News