ತಂತ್ರಜ್ಞಾನ ಯುಗದಲ್ಲಿ ಕುಲಕಸುಬುಗಳು ಅವನತಿಯತ್ತ: ಹೆಚ್.ಎಸ್. ಪ್ರಕಾಶ್

Update: 2018-02-20 12:11 GMT

ಹಾಸನ,ಫೆ.20: ಇಂದಿನ ತಂತ್ರಜ್ಞಾನ ಯುಗದಲ್ಲಿ ಕುಲಕಸುಬುಗಳು ಅವನತಿಯತ್ತ ಸಾಗುತ್ತಿದ್ದು, ಕುಂಬಾರಿಕೆ ಕೆಲಸ ಮಾಡುವವರಿಗೆ ಸರಕಾರವು ನೆರವು ನೀಡಲು ಮುಂದಾಗಬೇಕು ಎಂದು ಶಾಸಕರಾದ ಹೆಚ್.ಎಸ್. ಪ್ರಕಾಶ್ ಅವರು ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ `ಸಂತ ಕವಿ ಸರ್ವಜ್ಞ ಜಯಂತಿ' ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಕುಲಕಸುಬುಗಳನ್ನು ಚಿತ್ರದಲ್ಲಿ ತೋರಿಸುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದರು.

ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕವಿ ಸರ್ವಜ್ಞ ಅವರು ಜೀವನ ವಿಧಾನ ಹೇಗಿತ್ತು ಎಂಬುದನ್ನು ತಮ್ಮ ಅನುಭವದಿಂದ ವಚನಗಳ ಮೂಲಕ ತ್ರಿಪದಿಯಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ದಾಖಲಿಸಿದ್ದಾರೆ. ಅವರು ಎಂದೆಂದಿಗೂ ಪ್ರಾರ್ಥಸ್ಮರಣೀಯ ಎಂದರು.

ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞ ಅವರ ತ್ರಿಪದಿ ದೊಡ್ಡ ಕಣಜ. ಸರ್ವಜ್ಞ ಕೈಯಾಡಿಸದ ಕ್ಷೇತ್ರವಿಲ್ಲ ಎಂದ ಅವರು, ಸರ್ವಜ್ಞ ಅವರ ವಚನಗಳು ಎಲ್ಲರಿಗೂ ಚೈತನ್ಯವಾಗಿವೆ. ಅವುಗಳನ್ನು ಓದಿ ತಿಳಿದುಕೊಂಡು ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಂಡು ಮುನ್ನೆಡದರೆ ಸರ್ವಜ್ಞ ಅವರಿಗೆ ಗೌರವ ಸರ್ಮಪಿಸಿದಂತಾಗುತ್ತದೆ ಎಂದರು. ಕುಂಬಾರ ಸಮಾಜದಲ್ಲಿ ಬುದ್ದಿವಂತ ಮಕ್ಕಳಿದ್ದಾರೆ. ಆದರೆ, ಅವರಿಗೆ ಸರಿಯಾದ ಅವಕಾಶ ಮತ್ತು ಸೌಲಭ್ಯಗಳು ಸಿಗುತ್ತಿಲ್ಲ. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವಿದ್ಯಾಭ್ಯಾಸಕ್ಕೆಂದು ಬರುವವರಿಗೆ, ತಮ್ಮದೇ ಸಮಾಜದ ವಿದ್ಯಾರ್ಥಿ ನಿಲಯ ಇದ್ದರೆ ಉತ್ತಮ. ನಿರ್ಮಿಸಲು ಮುಂದಾದರೆ ಶಾಸಕರ ನಿಧಿಯಿಂದ ಒಂದು ಕೋಟಿ ರೂಗಳ ಅನುಧಾನ ಕೊಡುವುದಾಗಿ ಭರವಸೆ ನುಡಿದರು. 

ತಾಲೂಕು ಪಂಚಾಯತ್ ಅಧ್ಯಕ್ಷ ಬಿ.ಟಿ. ಸತೀಶ್ ಮಾತನಾಡಿ, ಸಮಾಜಕ್ಕೆ ಒಂದು ಸಂದೇಶ ಕೊಟ್ಟ ಇಂತಹ ಮಹನಿಯರ ಜಯಂತಿಗಳನ್ನು ಆಚರಿಸುವ ಮೂಲಕ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಲಾಗುತ್ತಿದೆ. ಸರ್ವಜ್ಞ ಎಂದರೆ ಎಲ್ಲವನ್ನೂ ತಿಳಿದವನು ಎಂದು ಅರ್ಥ, ಅಂದು ಬೇರೂರಿದ್ದ ಸಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಸರ್ವಜ್ಞ ಅವರು ತಮ್ಮ ತ್ರಿಪದಿಗಳ ಮೂಲಕ ಸರಳವಾಗಿ ಎಲ್ಲರಿಗೂ ಅರ್ಥವಾಗುವು ರೀತಿಯಲ್ಲಿ ವಚನಗಳನ್ನು ರಚಿಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ವಚನಗಳು ಬರೆಯಲಾಗಿದೆ ಎಂದು ಹೇಳಿದರು.

ಸಂತ ಕವಿ ಸರ್ವಜ್ಞ ಅವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಇರಿಸಿ ಜಾನಪದ ಕಲಾ ತಂಡಗಳೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಹಾಸನಾಂಬ ಕಲಾಕ್ಷೇತ್ರದ ವರೆಗೆ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮೊದಲು ರೋಹನ್ ಅಯ್ಯರ್ ಅವರ ಸಂಗೀತ ಎಲ್ಲರ ಮನಸ್ಸಿಗೂ ಮುದ ನೀಡಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ. ಜಾನಕಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮ, ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ರಂಗಶೇಟ್ಟಿ, ಕಾರ್ಯದರ್ಶಿ ಶೇಖರ ಶೆಟ್ಟಿ, ಖಜಾಂಚಿ ಪ್ರಕಾಶ್, ಸರ್ವಾಜ್ಞ ಶಾಲೆಯ ಹಾಸನ್ ಶಂಕರ್, ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಇದ್ದರು. ಸಂಗೀತ ವಿದ್ವಾನ್ ವಾಣೀಶ್ರಿ ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಸಾಹಿತಿ ಗೊರೂರು ಅನಂತರಾಜು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News