ಮಡಿಕೇರಿ: ಎ.ಕೆ.ಸುಬ್ಬಯ್ಯ ಅಭಿನಂದನಾ ಸಮಾರಂಭ ಫೆ.27ಕ್ಕೆ ಮುಂದೂಡಿಕೆ

Update: 2018-02-20 12:14 GMT

ಮಡಿಕೇರಿ,ಫೆ.20 : ಎ.ಕೆ.ಸುಬ್ಬಯ್ಯ ಅವರ ಅಭಿನಂದನಾ ಸಮಿತಿ ವತಿಯಿಂದ ಫೆ.25 ರಂದು ನಡೆಯಬೇಕಾಗಿದ್ದ “ಎ.ಕೆ.ಸುಬ್ಬಯ್ಯ ಅಭಿನಂದನಾ ಸಮಾರಂಭ”ವನ್ನು ಫೆ.27 ಕ್ಕೆ ಮುಂದೂಡಲಾಗಿದೆ ಎಂದು ಸಮಿತಿಯ ಪ್ರಮುಖರಾದ ಮನುಶೆಣೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.27 ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ನ್ಯಾಯವಾದಿಗಳು ಹಾಗೂ  ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಪ್ರೊ.ರವಿವರ್ಮ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ದಾರಿದೀಪ” ಎಂಬ ಹೆಸರಿನ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ ಎಂದರು. 

ಎ.ಕೆ.ಸುಬ್ಬಯ್ಯ ಅವರ ಸಮಗ್ರ ಬರಹಗಳ ಗ್ರಂಥ “ಸೌಹಾರ್ದ ಸೆಲೆ” ಯನ್ನುಖ್ಯಾತ ಸಾಹಿತಿ ಪದ್ಮಶ್ರೀ ದೇವನೂರು ಮಹದೇವ ಹಾಗೂ ಸುಬ್ಬಯ್ಯ ಅವರ ಜೀವನ ಚರಿತ್ರೆಯ “ನಿರ್ಭೀತಿಯ ಹೆಜ್ಜೆಗಳು” ಪುಸ್ತಕವನ್ನು ರೈತ ನಾಯಕರು ಹಾಗೂ ಸಾಹಿತಿಗಳಾದ ಚುಕ್ಕಿ ನಂಜುಂಡಸ್ವಾಮಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕೆ.ಆರ್.ರಮೇಶ್ ಕುಮಾರ್, ಬೆಂಗಳೂರು ಅಭಿವೃದ್ದಿ ಹಾಗೂ ನಗರ ಯೋಜನೆ ಸಚಿವರಾದ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ಎಂ.ಸಿ. ನಾಣಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಮನುಶೆಣೈ ಮಾಹಿತಿ ನೀಡಿದರು. 
 ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಸದಸ್ಯರಾದ ಕೆ.ಆರ್.ವಿದ್ಯಾಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News