ಕೊಡಗು: ವನ್ಯ ಜೀವಿಗಳಿಂದ ಮಾನವ ಹಾನಿ, ಫಸಲು ನಷ್ಟ; ಫೆ. 23ರಂದು ಅರಣ್ಯ ಭವನ ಮುತ್ತಿಗೆ

Update: 2018-02-20 12:44 GMT

ಸಿದ್ದಾಪುರ (ಕೊಡಗು), ಫೆ.20: ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳಿಂದ ಆಗುತ್ತಿರುವ ಮಾನವ ಹಾನಿ ಹಾಗೂ ಫಸಲು ನಷ್ಟವನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ಸರ್ಕಾರ ರೂಪಿಸಬೇಕೆಂದು ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಫೆ.23 ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾ ಹಾಗೂ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲಾಗುವುದೆಂದು ಕೊಡಗು ಜಿಲ್ಲಾ ರೈತ ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಸಂಚಾಲಕ ಮಂಡೇಪಂಡ ಪ್ರವೀಣ್ ಬೋಪಯ್ಯ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಶಕಗಳಿಂದ ಕಾಡಾನೆಗಳ ಹಾವಳಿ ಮೀತಿಮೀರಿದ್ದು ಇದೀಗ ಕೆಲವು ವರ್ಷಗಳಲ್ಲಿ ಕಾಡಾನೆ-ಮಾನವ ಸಂಘರ್ಷ ತಾರಕ್ಕೇರಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆಯು ಶಾಶ್ವತ ಯೋಜನೆಯನ್ನು ಸರ್ಕಾರ ರೂಪಿಸಬೇಕು ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಫೆ. 23ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾ ಹಾಗೂ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಹಾಗೂ ಜಿಲ್ಲಾ ರೈತ ಸಂಘ ಹಾಗೂ ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದರು. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಆಗಮಿಸಬೇಕೆಂದು ಕರೆ ನೀಡಿದರು. 

ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಕೆ.ಎಂ. ಕುಶಾಲಪ್ಪ ಮಾತನಾಡಿ, 23 ರಂದು ಮಡಿಕೇರಿಯಲ್ಲಿ ಹಮ್ಮಿಕೊಂಡಿರುವ ಜಾಥಾ ಹಾಗೂ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವ ಹೋರಾಟಕ್ಕೆ ಜಿಲ್ಲೆಯ ಸಂಸದರು, ಎಲ್ಲಾ ಶಾಸಕರುಗಳು ಆಗಮಿಸಿ ಹೋರಾಟಕ್ಕೆ ಸಹಕರಿಸಬೇಕು ಹಾಗೂ ಸಮಸ್ಯೆಗಳನ್ನು ಆಲಿಸಬೇಕು ಎಂದ ಅವರು, ತಪ್ಪಿದ್ದಲ್ಲಿ ಅವರುಗಳ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಲಾಗುವುದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಕಾನೂನು ಸಲಹೆಗಾರರಾದ ಕೆ.ಬಿ. ಹೇಮಚಂದ್ರ, ಸಮಿತಿಯ ಪದಾಧಿಕಾರಿಗಳಾದ ದೇವಣೀರ ಸುಜಯ್, ಕೆ.ಪಿ. ನಂದಾಗಣಪತಿ, ಕೊಂಗೇರ ಗಪ್ಪಣ್ಣ, ಹೆಚ್.ಬಿ. ರಮೇಶ್, ಎಂ.ಕೆ. ಅರ್ಜುನ್ ತಿಮ್ಮಯ್ಯ, ರಾಜಗಣಪತಿ ಇತರರು ಹಾಜರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News