ಈಶ್ವರಪ್ಪಗೆ ಟಿಕೆಟ್ ನೀಡಬೇಡಿ ಎಂದಿದ್ದ ಬಿಎಸ್‍ವೈ ಬೆಂಬಲಿಗನಿಗೆ ಜೀವ ಬೆದರಿಕೆ: ಆರೋಪ

Update: 2018-02-20 15:04 GMT

ಶಿವಮೊಗ್ಗ, ಫೆ. 20: ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಸ್ಪರ್ಧಾಕಾಂಕ್ಷಿಯಾಗಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನೀಡಬಾರದು ಎಂದು ಹೇಳಿ ಕಮಲ ಪಾಳಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದ, ಬಿ.ಎಸ್.ಯಡಿಯೂರಪ್ಪ ಬೆಂಬಲಿಗ ಬಿಳಕಿ ಕೃಷ್ಣಮೂರ್ತಿಗೆ ಇಬ್ಬರು ಆಗುಂತಕರು ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

'ಕೆ.ಎಸ್.ಈಶ್ವಪ್ಪ ವಿರುದ್ದ ಮಾತನಾಡಿದರೆ ಕೊಂದು ಬಿಡ್ತೀವಿ..' ಎಂದು ಅಪರಿಚಿತ ಯುವಕರಿಬ್ಬರು ಬೆದರಿಕೆ ಹಾಕಿದ್ದು, ಈ ಸಂಬಂಧ ಬಿಳಕಿ ಕೃಷ್ಣಮೂರ್ತಿಯವರು ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಈ ಕುರಿತಂತೆ ಇಲ್ಲಿಯವರೆಗೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ಎಫ್‍ಐಆರ್ ದಾಖಲಾಗಿಲ್ಲವೆಂದು ಹೇಳಲಾಗಿದೆ.

ಏನಾಯ್ತು?: ಕಳೆದ ಶನಿವಾರ ಬಿಳಕಿ ಕೃಷ್ಣಮೂರ್ತಿಯವರು ಭದ್ರಾವತಿ ತಾಲೂಕಿನ ಬಿಳಕಿ ಗ್ರಾಮದಿಂದ ಶಿವಮೊಗ್ಗ ನಗರದಲ್ಲಿರುವ ತಮ್ಮ ಮನೆಗೆ ಬೈಕ್‍ನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ನಗರದ ಕೋರ್ಪಳಯ್ಯನ ಛತ್ರದ ಬಳಿ ಬೈಕ್‍ನಲ್ಲಿ ಆಗಮಿಸಿದ ಇಬ್ಬರು ಯುವಕರು ವಾಹನ ಅಡ್ಡಗಟ್ಟಿದ್ದಾರೆ. ನಂತರ 'ಈಶ್ವರಪ್ಪ ವಿರುದ್ದ ಮಾತನಾಡಿದರೆ ಕೊಲೆ ಮಾಡುತ್ತೇವೆ' ಎಂದು ಬೆದರಿಕೆ ಹಾಕಿ ಬೈಕ್‍ನಲ್ಲಿ ಹಿಂದಿರುಗಿದ್ದಾರೆ. ಕತ್ತಲಾಗಿದ್ದ ಕಾರಣದಿಂದ ಯುವಕರ ಮುಖಚಹರೆಯಾಗಲಿ, ಬೈಕ್ ನೊಂದಣಿ ಸಂಖ್ಯೆಯಾಗಲಿ ಸರಿಯಾಗಿ ಗಮನಿಸಲು ಆಗಲಿಲ್ಲ ಎಂದು ದೂರಿನಲ್ಲಿ ತಿಳಿಸಿದ ಬಿಳಕಿ ಕೃಷ್ಣಮೂರ್ತಿ,  ನನಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಕುರಿತಂತೆ ಪಕ್ಷದ ವರಿಷ್ಠರು ಸೇರಿದಂತೆ ಜಿಲ್ಲಾಧ್ಯಕ್ಷರಿಗೆ ಮಾಹಿತಿ ನೀಡಿದ್ದೆನೆ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಭೆ ಸೇರಿದ್ದ ಸ್ಥಳೀಯ ಬಿಜೆಪಿ ಪಕ್ಷದ ಕೆಲ ನಾಯಕರು ಹಾಗೂ ಕಾರ್ಯಕರ್ತರು, ಈ ಬಾರಿ ಪಕ್ಷದಿಂದ ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ನೀಡಬಾರದು. ಎಸ್.ರುದ್ರೇಗೌಡರನ್ನು ಕಣಕ್ಕಿಳಿಸಬೇಕು ಎಂದು ಬಿಎಸ್‍ವೈಗೆ ಒತ್ತಾಯಿಸಿದ್ದರು.

ಈ ಸಭೆಯಲ್ಲಿ ಬಿಳಕಿ ಕೃಷ್ಣಮೂರ್ತಿ ಮಾತನಾಡಿ, 'ಕೆ.ಎಸ್.ಈಶ್ವರಪ್ಪರನ್ನು ಕಣಕ್ಕಿಳಿಸಿದರೆ ಪಕ್ಷ ಠೇವಣಿ ಉಳಿಸಿಕೊಳ್ಳುವುದು ಕಷ್ಟವಾಗಲಿದೆ' ಎಂದು ಹೇಳಿದ್ದರು. ಈ ಹೇಳಿಕೆಗೆ ಈಶ್ವರಪ್ಪ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಬೆಂಬಲಿಗರು ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನೆ ಕೂಡ ನಡೆಸಿ, ಬಿಳಕಿ ಕೃಷ್ಣಮೂರ್ತಿಯವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News