ಮೈಸೂರಿನಲ್ಲಿ ಸಿದ್ದರಾಮಯ್ಯ ಮೋದಿಗೆ ಹೇಳಿದ್ದೇನು ?

Update: 2018-02-20 15:19 GMT

ಮೈಸೂರು, ಫೆ.10: ಮೈಸೂರಿನಲ್ಲಿ ಸೋಮವಾರ ರೈಲು ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಮುಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದು, ಒಂದು ಕ್ಷಣ ಮೋದಿ ಗಲಿಬಿಲಿಗೊಂಡ ಘಟನೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿಯ ಮುಂದೆ ಧಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಿಮ್ಮ ಜೊತೆಗಿರುವವರನ್ನು ನಂಬಬೇಡಿ. ನಾವೇ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ” ಎಂದು ಸವಾಲು ಹಾಕಿದಾಗ ಮೋದಿ ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಈ ಘಟನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದ ಗೌಡ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಈ ಸಂದರ್ಭ ಸಿದ್ದರಾಮಯ್ಯ ಅವರು ಅನಂತಕುಮಾರ್ ಜೊತೆ, ‘‘ಏನಯ್ಯಾ, ಪ್ರಧಾನಿ ಜೊತೆ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಸುಳ್ಳುಪಳ್ಳು ಹೇಳುತ್ತಿದ್ದೀಯಾ?, ವೇದಿಕೆಗೆ ನನ್ನನ್ನು ಕರೆ, ಪ್ರಧಾನಿ ಜೊತೆ ನನಗೆ ಮಾತನಾಡಲಿಕ್ಕಿದೆ’’ ಎಂದರೆನ್ನಲಾಗಿದೆ.

 ಆಗ ಅನಂತಕುಮಾರ್ ಮರುಮಾತನಾಡದೆ ನಕ್ಕುಬಿಟ್ಟರಂತೆ. ಕೆಲವು ನಿಮಿಷಗಳ ಬಳಿಕ ಅನಂತಕುಮಾರ್, ಮೋದಿ ಜೊತೆ ಸಿದ್ದರಾಮಯ್ಯ ಬಗ್ಗೆ ಪ್ರಸ್ತಾಪಿಸುತ್ತಾ, ‘‘ಹಿ ವಾಂಟ್ಸ್ ಟು ಅಟೆಂಡ್ ದಿ ಫಂಕ್ಷನ್ ಹಿ ವಾಂಟ್ಸ್ ಟು ಕಮ್ ಟು ದಿ ಡಯಸ್ (ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸಿದ್ದಾರೆ, ಅವರು ವೇದಿಕೆ ಬರಲಿಚ್ಛಿಸಿದ್ದಾರೆ )’’ ಎಂದರಂತೆ. ಆಗ ಮೋದಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದಾರೆ. ಸಿದ್ದರಾಮಯ್ಯ ನೇರ ಅವರ ಬಳಿಗೆ ಬಂದು, ‘‘ಡೋಂಟ್ ಟ್ರಸ್ಟ್ ದೀಸ್ ಪೀಪಲ್, ವಿ ವಿಲ್ ಕಮ್ ಬ್ಯಾಕ್ ಟು ಪವರ್ (ಇವರನ್ನು ನಂಬಬೇಡಿ. ನಾವು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ)’’ ಎಂದು ಹೇಳಿದರೆನ್ನಲಾಗಿದೆ. ಇದನ್ನು ನಿರೀಕ್ಷಿಸದ ಪ್ರಧಾನಿ ಮೋದಿ ಒಂದು ಕ್ಷಣ ಕಕ್ಕಾಬಿಕ್ಕಿಯಾದರಂತೆ. ಅಷ್ಟೇ ಅಲ್ಲಿದೆ ಬಿಜೆಪಿ ಸಚಿವರೂ ಕೂಡಾ ಸಿದ್ದರಾಮಯ್ಯ ಮಾತಿಗೆ ಬೇಸ್ತುಬಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News