ಶಿವಮೊಗ್ಗ: ಕಾಲಾರ ಪೀಡಿತ ಮೈದೊಳಲು ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣ

Update: 2018-02-20 17:12 GMT

 ಶಿವಮೊಗ್ಗ, ಫೆ. 20: ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಹಲವು ಗ್ರಾಮಸ್ಥರು ವಾಂತಿ-ಭೇದಿಗೆ ತುತ್ತಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೆ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗ್ರಾಮಸ್ಥರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. 

ಮೈದೊಳಲು ಗ್ರಾಮದಲ್ಲಿ ಕಾಲಾರ ಕಾಣಿಸಿಕೊಂಡ ನಂತರ, ಇತ್ತೀಚೆಗೆ ಈ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆಲ ಗ್ರಾಮಗಳಲ್ಲಿಯೂ ಕೆಲ ಗ್ರಾಮಸ್ಥರು ವಾಂತಿ-ಭೇದಿಗೆ ತುತ್ತಾಗಿ ಅಸ್ವಸ್ಥಗೊಂಡಿದ್ದರು. 'ಮಂಗೋಟೆಯಲ್ಲಿ ಆರು, ಮಲ್ಲಾಪುರದಲ್ಲಿ ಮೂವರು ಹಾಗೂ ಆನವೇರಿ ಗ್ರಾಮದ ಓರ್ವರು ವಾಂತಿ-ಭೇದಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಮೊಗ್ಗ ನಗರ ಹಾಗೂ ಸ್ಥಳೀಯ ಆಸ್ಪತ್ರೆಗಳಿಗೆ ಇವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದರಲ್ಲಿ ಕೆಲ ಗ್ರಾಮಸ್ಥರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದು ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ' ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ (ಡಿ.ಹೆಚ್.ಓ.) ಡಾ. ಹನುಮಂತಪ್ಪ ತಿಳಿಸಿದ್ದಾರೆ. 

ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಮಂಗೋಟಿ, ಮಲ್ಲಾಪುರ ಗ್ರಾಮಗಳಿಗೆ ಆರೋಗ್ಯ ಇಲಾಖೆಯ ತಂಡ ಭೇಟಿಯಿತ್ತು ಪರಿಶೀಲನೆ ನಡೆಸಿದೆ. ಕುಡಿಯುವ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದೆ. ಹಾಗೆಯೇ ಅಸ್ವಸ್ಥಗೊಂಡ ಕುಟುಂಬದವರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿದೆ. ಪ್ರಯೋಗಾಲಯದ ವರದಿಯ ನಂತರವಷ್ಟೆ ಅಸ್ವಸ್ಥತೆಗೆ ಕಾರಣ ತಿಳಿದುಬರಬೇಕಾಗಿದೆ' ಎಂದು ಹೇಳಿದ್ದಾರೆ. 

ಮೈದೊಳಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಕ ಜನಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಕುಡಿಯುವ ನೀರಿನ ಪರಿಶುದ್ದತೆ, ಗುಣಮಟ್ಟದ ಆಹಾರ ಸೇವನೆ, ಪರಿಸರದ ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹಾಗೆಯೇ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್‍ಗಳ ಸ್ವಚ್ಚತೆಗೆ ಕ್ರಮಕೈಗೊಳ್ಳುವಂತೆ ಸ್ಥಳೀಯ ಗ್ರಾಮ ಪಂಚಾಯತ್ ಪ್ರಮುಖರಿಗೆ ಸೂಚನೆ ನೀಡಲಾಗಿದೆ. ನಾಗರಿಕರು ಆತಂಕಪಡುವ ಅಗತ್ಯವಿಲ್ಲ' ಎಂದು ಡಾ. ಹನುಮಂತಪ್ಪ ತಿಳಿಸಿದ್ದಾರೆ. 

ಸಹಜ ಸ್ಥಿತಿಗೆ: ಮೈದೊಳಲು ಗ್ರಾಮದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಗ್ರಾಮದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಚಿಕಿತ್ಸೆ ದೊರಕುವ ವ್ಯವಸ್ಥೆ ಮಾಡಲಾಗಿದೆ. ಆರು ಹಾಸಿಗೆಯ ವ್ಯವಸ್ಥೆ ಮಾಡಲಾಗಿದೆ. ದಿನದಿಂದ ದಿನಕ್ಕೆ ಇಲ್ಲಿಗೆ ಆಗಮಿಸುವ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಡಿ.ಹೆಚ್.ಓ. ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. 

ಸಾವಿನ ಸರಣಿ: ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಮಾಡಿ ತೀವ್ರ ಅಸ್ವಸ್ಥಗೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕು ಪಂಚಾಯತ್ ಸದಸ್ಯ ಎಸ್.ಕೆ.ಪಾಟೀಲ್ (45) ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ ಫೆ. 9 ರಂದು ಎಸ್.ಕೆ.ಪಾಟೀಲ್‍ರವರು ಅಸ್ವಸ್ಥಗೊಂಡಿದ್ದರು. ಇವರಿಗೆ ಮೈದೊಳಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ಸಾವಿನಿಂದ ಒಟ್ಟಾರೆ ಇಲ್ಲಿಯವರೆಗೂ ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಪ್ರಕರಣದಿಂದ ಮೃತಪಟ್ಟವರ ಸಂಖ್ಯೆ ಆರಕ್ಕೇರಿದಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News