ದಾವೋಸ್ ನಲ್ಲಿ ಪ್ರಧಾನಿ ಜೊತೆಗೆ ನೀರವ್ ಮೋದಿ: ಈ ಬಗ್ಗೆ ಅಮಿತ್ ಶಾ ಹೇಳಿದ್ದೇನು?

Update: 2018-02-20 18:31 GMT

ಹೊಸದಿಲ್ಲಿ, ಫೆ.20: ದಾವೋಸ್ ಸಮ್ಮೇಳನದಲ್ಲಿ ತೆಗೆಯಲಾದಂತಹ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಆಭರಣ ವ್ಯಾಪಾರಿ ನೀರವ್ ಮೋದಿ ಇರುವ ಭಾವಚಿತ್ರದ ಬಗ್ಗೆ ವಿಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಭಾವಚಿತ್ರವು ಏನನ್ನೂ ಸಾಬೀತುಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ ನೀವು ನನ್ನ ಜೊತೆ ಕುಳಿತುಕೊಂಡಿದ್ದೀರಿ. ಒಂದು ವೇಳೆ ನೀವು ಏನಾದರೂ ಅಪರಾಧ ಮಾಡಿದರೆ ಅದಕ್ಕೆ ನನ್ನನ್ನು ಜವಾಬ್ದಾರನನ್ನಾಗಿ ಮಾಡಲಾಗುತ್ತದೆಯೇ? ಎಂದು ಶಾ ಪ್ರಶ್ನಿಸಿದ್ದಾರೆ. ನೀರವ್ ಮೋದಿ ಪ್ರಕರಣವನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಿದೆ ಮತ್ತು ಅವರಿಗೆ ಸೇರಿದ ಐದು ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ ಎಂದು ಶಾ ವಿವರಿಸಿದ್ದಾರೆ. ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಕರ್ನಾಟಕದಲ್ಲಿ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿರುವ ಶಾ, ಸಿದ್ದರಾಮಯ್ಯ ಸರಕಾರವು ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರ ಮತ್ತು ಓಲೈಕೆ ರಾಜಕೀಯವನ್ನು ಅನುಸರಿಸುವ ಸರಕಾರ ಎಂದು ಟೀಕಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅತ್ಯಂತ ಭ್ರಷ್ಟ ಸರಕಾರ ಯಾವುದು ಎಂದು ಸ್ಪರ್ಧೆಯನ್ನು ಆಯೋಜಿಸಿದರೆ ಕರ್ನಾಟಕದ ಸಿದ್ದರಾಮಯ್ಯ ಸರಕಾರ ಆ ಪ್ರಶಸ್ತಿಯನ್ನು ಬಾಚಿಕೊಳ್ಳುತ್ತದೆ ಎಂದು ಶಾ ತಿಳಿಸಿದ್ದಾರೆ.ಆ

ರಾಜ್ಯದಲ್ಲಿ ಒಬ್ಬರ ಹಿಂದೆ ಒಬ್ಬರಂತೆ 20 ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಸರಕಾರವು ಸಾಧ್ಯವಿದ್ದಷ್ಟು ಕೊಲೆಗಾರರನ್ನು ರಕ್ಷಿಸಲು ಪ್ರಯತ್ನಿಸಲಿ. ಆದರೆ ಅವರ ದಿನಗಣನೆ ಆರಂಭವಾಗಿದೆ. ಮುಂದಿನ ಯಡಿಯೂರಪ್ಪ ಸರಕಾರವು ಕೊಲೆಗಾರರನ್ನು ಪತ್ತೆಹಚ್ಚಿ ಕಾನೂನಿನಡಿಯಲ್ಲಿ ಶಿಕ್ಷೆ ನೀಡಲಿದೆ ಎಂದು ಶಾ ತಿಳಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಹಲ್ಲೆ ಪ್ರಕರಣದ ಬಗ್ಗೆ ಮಾತನಾಡಿದ ಶಾ, ಕಾಂಗ್ರೆಸ್ ಶಾಸಕನ ಪುತ್ರ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದರೂ ಆತನ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ. ಇದು ಓಲೈಕೆ ರಾಜಕೀಯ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News