ಕೊಳ್ಳೇಗಾಲ:‘ವಿಶ್ವ ಸಾಮಾಜಿಕ ನ್ಯಾಯ ದಿನ' ಕಾನೂನು ಅರಿವು ಕಾರ್ಯಕ್ರಮ

Update: 2018-02-20 17:24 GMT

ಕೊಳ್ಳೇಗಾಲ, ಫೆ.20: ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆಯ ಆಧಾರದ ಮೇಲೆ ತಾರತಮ್ಯ ಮಾಡದೆ ಸರ್ವರಿಗೂ ಸಮಾನ ಅವಕಾಶಗಳನ್ನು ದೊರಕಿಸುವುದೇ ಸಂವಿಧಾನದ ಮುಖ್ಯ ಆಶಯವಾಗಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರೂ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರೂ ಆದ ಎಸ್.ಜೆ. ಕೃಷ್ಣ ತಿಳಿಸಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ತಾಲೂಕು ಪಂಚಾಯತ್ ಹಾಗೂ ತಾಲೂಕು ಸಮಾಜಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಸಮಾಜಿಕ ನ್ಯಾಯ ದಿನ’ ದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೂಲಿ ಹರಸಿ ವಲಸೆ ಹೋಗುವ ಕಾರ್ಮಿಕರ ಸಾಮಾಜಿಕ ನ್ಯಾಯ ಅನ್ವೇಷಣೆ ಈ ವರ್ಷದ ಮುಖ್ಯ ಧ್ಯೇಯವಾಕ್ಯವಾಗಿದೆ. ವಲಸೆ ಹೋಗುವ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಸಮಾಜಿಕ ನ್ಯಾಯ ದೊರೆಯುವಂತಾಗಬೇಕು ಎಂದರು. ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜನರಲ್ಲಿ ಕಾನೂನು ಜಾಗೃತಿ ಮೂಲಕ ಸಾಮಾಜಿಕ ನ್ಯಾಯದ ಅರಿವು ಮೂಡಿಸಲಾಗುತ್ತಿದೆ. ಮಹಿಳೆಯರು ಸಮಾಜದಲ್ಲಿ ನಡೆಯುವ ತಾರತಮ್ಯವನ್ನು ಪ್ರಶ್ನಿಸುವ ಮೂಲಕ ಸಮಾನ ಅವಕಾಶಗಳನ್ನು ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಎಂ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಸಮಾನತೆಯನ್ನು ಸಾಧಿಸುವ ಸಲುವಾಗಿ ಸರ್ಕಾರ ರೂಪಿಸಿರುವ ಕಾನೂನುಗಳ ಬಗ್ಗೆ ಅರಿವನ್ನು ಮಹಿಳೆಯರು ಪಡೆದುಕೊಳ್ಳಬೇಕು. ಸ್ವಚ್ಚತಾ ಸರ್ವೇಕ್ಷಣೆ ಕಾರ್ಯಕ್ರಮದಡಿ ಪ್ರತಿ ಕುಟುಂಬವೂ ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳುವ ಮೂಲಕ ಸ್ವಚ್ಚತೆಗೆ ಸಹಕರಿಸಬೇಕು ಎಂದು ಹೇಳಿದರು.

ಹಿರಿಯ ವಕೀಲ ಡಿ. ವೆಂಕಟಾಚಲ ಭಾರತೀಯ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆ ಕುರಿತು ವಿಶೇಷ ಉಪನ್ಯಾಸ ನೀಡಿ, ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ, ಸರ್ಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶ ಮತ್ತು ಯೋಗ್ಯ ಜೀವನಮಟ್ಟ ಕಲ್ಪಿಸಲು ಯತ್ನಿಸುತ್ತದೆ. ಒಂದು ಸುಖೀ ರಾಜ್ಯದ ನಿರ್ಮಾಣವೇ ಸಂವಿಧಾನ ನಿರ್ಮಾತೃಗಳ ಮುಖ್ಯ ಉದ್ದೇಶ ಎಂದರು. ದೇಶದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ದೊರೆತಾಗ ಮಾತ್ರ ದೇಶದಲ್ಲಿ ಸಾಮಾಜಿಕ ಸಮಾನತೆ ಸಾಧ್ಯ ಎಂದರು.

ವಕೀಲರ ಸಂಘದ ಅಧ್ಯಕ್ಷ ಡಿ.ಎಸ್. ಬಸವರಾಜು, ಸಹಾಯಕ ಸರ್ಕಾರಿ ಅಭಿಯೋಜಕ ಎಂ. ನಾಗೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಕು. ಕೆ. ಮಂಜುಳಾ ವಕೀಲ ಸೀಗರಾಜು ಸಂವಿಧಾನದ ಮಹತ್ವ ಕುರಿತು ಮಾತನಾಡಿದರು.

ಮಹಿಳಾ ಸಂಘಗಳ ತಾಲೂಕು ಸಂಯೋಜಕಿ ಸ್ಟೆಲ್ಲಾಕುಮಾರಿ ಭಾಗ್ಯಮ್ಮ, ಸುನಿತಾ,ಸ್ವೇತಾ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಕೃಷ್ಣರಾಜೇ ಅರಸ್, ತಾಲೂಕು ಕಾನೂನು ಸೇವೆ ಸಮಿತಿ ಸುಂದರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News