ದಾವಣಗೆರೆ: ತ್ರಿಪದಿಕವಿ ಶ್ರೀ ಸರ್ವಜ್ಞ ಜಯಂತಿ ಆಚರಣೆ

Update: 2018-02-20 17:30 GMT

ದಾವಣಗೆರೆ,ಫೆ.20: ಸರ್ವಜ್ಞರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಇಂತಹ ಮಹನಿಯರನ್ನು ವಿಶ್ವ ಮಹನೀಯರೆಂದು ಪರಿಗಣಿಸಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಇವರ ತ್ರಿಪದಿ-ವಚನಗಳ ಪಠ್ಯಕ್ರಮ ಅಳವಡಿಸುವಂತಾಗಬೇಕೆಂದು ಡಾ.ಚನ್ನೇಶ್ ಹೊನ್ನಾಳಿ ಹೇಳಿದರು.

ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಹಾಗೂ ಜಿಲ್ಲಾ ಕುಂಬಾರರ ಸಂಘ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ತ್ರಿಪದಿಕವಿ ಶ್ರೀ ಸರ್ವಜ್ಞ ಜಯಂತಿಯ ಆಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ದಾರ್ಶನಿಕ ಹಾಗೂ ಕಾವ್ಯ ಸರ್ವಜ್ಞ ಎಂಬ ಎರಡು ನೆಲೆಗಳ ಕುರಿತು ವಿವರಿಸಿದರು.

ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಹೊಂದಿರುವ ತಮಿಳುನಾಡಿನ ತಿರಿವಳ್ಳುರ್, ಆಂಧ್ರಪ್ರದೇಶದ ವೇಮನ ಚೌಪದಿ ಕವಿಗಳ ಹಾಗೆ ಕನ್ನಡದ ತ್ರಿಪದಿಕವಿ ಶ್ರೀ ಸರ್ವಜ್ಞರು ಪ್ರಮುಖರು ಎಂಬುದು ಹೆಮ್ಮೆಯ ವಿಚಾರ. ಸಮಾಜದ ಒಳಿತಿಗಾಗಿ ಜನರ ಮಧ್ಯದಲ್ಲಿಯೇ ಇದ್ದು ಮಾರ್ಗದರ್ಶನ ನೀಡುತ್ತಾ ಬಂದ ಮಹಾ ದಾರ್ಶನಿಕರು. ಇವರು ತಮ್ಮ ಬದುಕಿನುದಕ್ಕೂ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚಾರ ಮಾಡುತ್ತಾ ಎಲ್ಲಾ ಸಮುದಾಯದ ಜನರಿಗೆ ತಮ್ಮ ತ್ರಿಪದಿ, ವಚನಗಳ ಮೂಲಕ ದೇಸಿ ರೂಪದಲ್ಲಿ ಸಮಾಜಮುಖಿ ಚಿಂತನೆಗಳ ಕುರಿತು ಅರಿವು ಮೂಡಿಸುವ ಕಾರ್ಯ ಕೈಗೊಂಡಿದ್ದರು ಎಂದು ಹೇಳಿದರು.

ಸರ್ವಜ್ಞ ರಚಿಸಿರುವ ತ್ರಿಪದಿ ವಚನಗಳಿಗೆ ಆದಿ-ಅಂತ್ಯ ಇಲ್ಲ. ಭೂತ-ವರ್ತಮಾನ-ಭವಿಷ್ಯ ಕಾಲದಲ್ಲೂ ಸಮಾಜದ ಸುಧಾರಣೆಗಾಗಿ ಹಾಗೂ ಅಂಕು-ಡೊಂಕುಗಳನ್ನು ತಿದ್ದಲು, ಜೀವನದ ಮೌಲ್ಯವನ್ನು ಎತ್ತಿ ಹಿಡಿಯಲು, ಸತ್ಯ ಸಂದೇಶವನ್ನು ಸಾರಲು, ತಿಳುವಳಿಕೆಯ ಕರೆ ನೀಡಲು ಬಳಸಿದ ಅಸ್ತ್ರ ತ್ರಿಪದಿ. ಅವರು ರಚಿಸಿರುವ ತ್ರಿಪದಿ ವಚನಗಳನ್ನು ಹಾಡಬಹುದು ಮತ್ತು ಓದಬಹುದಾಗಿದೆ ಎಂದು ಸರ್ವಜ್ಞನ ವಚನವನ್ನು ಈ ರೀತಿ ವಾಚಿಸಿದರು. 

ಸರ್ವಜ್ಞರು ಎಲ್ಲಾ ಸಮುದಾಯಗಳಿಗೂ ಮೀಸಲಾಗಿದ್ದು, ಅವರ ಹುಟ್ಟು ಹಾಗೂ ಅವರು ಬೆಳದ ಹಾದಿ ಈಗಲೂ ಚರ್ಚೆಯ ಹಂತದಲ್ಲಿದೆ. ಅವರ ಮೂಲ ವಚನಗಳನ್ನು ಕ್ರೋಢೀಕರಿಸಿ ಸಿಡಿ ರೂಪದಲ್ಲಿ, ಪಠ್ಯಕ್ರಮದಲ್ಲಿ, ಪುಸ್ತಕದಲ್ಲಿ ಮುದ್ರಿತವಾಗಬೇಕು. ಹಾಗೂ ಅವರ ತ್ರಿಪದಿ- ವಚನಗಳ ಕುರಿತ ಅಧ್ಯಯನ ಪೀಠ ಸ್ಥಾಪನೆಯಾಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಮಾಡಿದರು.

ಇಂದಿನ ಜನರು ಆಧುನೀಕರಣ, ಉದಾರೀಕರಣ, ಖಾಸಗಿಕರಣದ ಪ್ರಭಾವದಿಂದ ತಮ್ಮ ಮೂಲ ಕುಲಕಸುಬಗಳನ್ನು ಮರೆತು ಹೋಗಿದ್ದಾರೆ. ಪೋಷಕರು ತಮ್ಮ ಮಕ್ಕಳು ರೈತರಾಗಬೇಕು, ಕುಂಬಾರರಾಗಬೇಕೆಂದು ಯಾರೂ ಬಯಸುವುದಿಲ್ಲ. ಪ್ರಸ್ತುತ ಕುಂಬಾರಿಕೆ ಮಾಡುತ್ತಿರುವವರ ಜೀವನ ಚಿಂತಾಜನಕ ಸ್ಥಿತಿಯಲ್ಲಿದೆ. ಅದನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಂಡು ಕುಂಬಾರಿಕೆ ಕಲೆಗೆ ಅಗತ್ಯ ತಂತ್ರಜ್ಞಾನವನ್ನು ಬಳಸಿಕೊಂಡು ಕೌಶಲ್ಯ ತರಬೇತಿ ಮತ್ತು ಕುಂಬಾರರ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಬೇಕೆಂದು ಅವರು ಮನವಿ ಮಾಡಿದರು.

ಜಿ.ಪಂ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು ಮಾತನಾಡಿ, ಸರ್ಕಾರದ ವತಿಯಿಂದ ಆಚರಿಸುತ್ತಿರುವ ಜಯಂತಿಗಳಲ್ಲಿ ಆಯಾ ಸಮುದಾಯದವರು ಮಾತ್ರವಲ್ಲದೇ ಎಲ್ಲಾ ಸಮುದಾಯದವರೂ ಪಾಲ್ಗೊಂಡಲ್ಲಿ ಜಯಂತಿಗಳ ಆಚರಣೆಯ ಮಹತ್ವ ಎಲ್ಲರಿಗೂ ತಿಳಿಯುತ್ತದೆ ಎಂದರು.

ಬಸವಣ್ಣನವರ ಜಯಂತಿ ಆಚರಣೆ ರೀತಿಯಲ್ಲೇ ಸರ್ವಜ್ಞರ ಜಯಂತಿಯನ್ನು ಎಲ್ಲ ಮನೆಗಳಲ್ಲೂ ಆಚರಿಸಿ ಅವರ ವಚನ-ಕಾವ್ಯಗಳ ಬಗ್ಗೆ ತಿಳಿದುಕೊಳ್ಳುವಂತಾಗಬೇಕು. ಸರ್ವಜ್ಞರು ಅಲೆಮಾರಿ ಜೀವನ ಮಾಡುತ್ತಾ ಎಲ್ಲಾ ಕಡೆ ತ್ರಿಪದಿ ವಚನಗಳಮೂಲಕ ಮಾರ್ಗದರ್ಶಕರಾಗಿ ಉತ್ತಮ ಸಂದೇಶ ಸಾರಿದವರು. ಸೂರ್ಯ-ಚಂದಿರ ಇರುವವರಗೂ ಮನುಕುಲಕ್ಕೆ ಮಾರ್ಗದರ್ಶಕಗಳಾಗಿರುತ್ತವೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ಅನುಭವ ಮಂಟಪ ಮಾದರಿಯಲ್ಲಿ ಕಟ್ಟಡಗಳ ಸ್ಥಾಪನೆಯ ಅವಶ್ಯವಿದ್ದು ಅದರಲ್ಲಿ ಜನರಿಗೆ ರಾಷ್ಟ್ರೀಯ ನಾಯಕರುಗಳ, ಕವಿಗಳ, ವಚನಕಾರ ಮಹನೀಯರ ಚಾರಿತ್ರ್ಯ ಜೀವನದ ಮಾಹಿತಿ ನೀಡುವ ಪುಸ್ತಕಗಳ ಗ್ರಂಥಾಲಯ ಅವಶ್ಯಕವಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೌರವ ಕಾರ್ಯದರ್ಶಿ ದಿಲ್ಲಪ್ಪ, ಜಿಲ್ಲಾ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಕುಂಚುರೂ, ಸರಸ್ವತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕೆ.ಎನ್ ಚಂದ್ರಶೇಖರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಸಮಾಜದ ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News