ದಾವಣಗೆರೆ: ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಣೆ

Update: 2018-02-20 17:33 GMT

ದಾವಣಗೆರೆ,ಫೆ.20: ಸಂಪತ್ತಿನ ಸಮಾನ ಹಂಚಿಕೆ, ಬಡತನ ನಿರ್ಮೂಲನೆ ಮತ್ತು ಉದ್ಯೋಗ ದೊರೆತಾಗ ಮಾತ್ರ ಸಾಮಾಜಿಕ ನ್ಯಾಯ ದಿನಾಚರಣೆ ಪರಿಕಲ್ಪನೆ ಅರ್ಥಪೂರ್ಣವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಹೆಚ್.ಹೊಸಗೌಡರ್  ಹೇಳಿದರು. 

ಇಲ್ಲಿನ ಎಂಎಸ್‍ಬಿ ಕಾಲೇಜಿನ ಅವರಣದಲ್ಲಿ  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಾಸಬ ಕಲಾ ಮತ್ತು  ವಾಣಿಜ್ಯ ಕಾಲೇಜು ಆಶ್ರಯದಲ್ಲಿ  ಮಂಗಳವಾರ ಏರ್ಪಡಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಸಂಸ್ಥೆ ಫೆ. 20, 2007 ರಂದು ವಿಶ್ವ ಸಾಮಾಜಿಕ ದಿನವನ್ನಾಗಿ ಆಚರಣೆಗೆ ತಂದಿದ್ದು, ಅಂದಿನಿಂದ ಪ್ರತಿ ವರ್ಷ ಫೆ.20ನ್ನು ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಜಗತ್ತಿನ ಎಲ್ಲಾ ಶೋಷಿತರು, ಅಸಂಘಟಿತರು, ತುಳಿತಕ್ಕೆ ಒಳಗಾದವರಿಗೆ ಸಮಾಜದಲ್ಲಿ ಸರಿ ಸಮಾನವಾದ ಸ್ಥಾನಮಾನ ಮತ್ತು ಹಕ್ಕುಗಳನ್ನು ನೀಡುವ ಮೂಲಕ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಸರ್ಕಾರಗಳು ಮಾಡಬೇಕಾಗಿದೆ ಎಂದರು.

ವಿದ್ಯಾರ್ಥಿಗಳು ಸಂವಿಧಾನದ ನೀಡಿದಂತಹ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಜೊತೆಗೆ ತಮ್ಮ ಕರ್ತವ್ಯಗಳ ಬಗ್ಗೆಯೂ ಅರಿತುಕೊಳ್ಳಬೇಕು. ಪ್ರಸ್ತುತ ವಿದ್ಯಾವಂತರೂ ಮತದಾನದಿಂದ ದೂರ ಉಳಿಯುತ್ತಿರುವುದು ದುರಾದುಷ್ಟಕರ ಸಂಗತಿಯಾಗಿದೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಬೇಕಾದರೆ ಮತದಾನದಂತಹ ಪವಿತ್ರ ಕಾರ್ಯದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲ್ಗೊಂಡು ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು. 

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ಅನಾದಿ ಕಾಲದಿಂದಲೂ ಸಂತರು, ಶರಣರು, ತತ್ವಜ್ಞಾನಿಗಳು, ಮಾನವ ಹಕ್ಕುಗಳ ಹೋರಾಟಗಾರರು ಮನುಷ್ಯ ಜೀವಕ್ಕೆ ಘನತೆ ತಂದು ಕೊಡುವ ನಿಟ್ಟಿನಲ್ಲಿ ಮತ್ತು ಸಮ ಸಮಾಜದ ನಿರ್ಮಾಣದ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿದ್ದರೂ ಸಹ ಇಂದಿಗೂ ಸಾಮಾಜಿಕ ನ್ಯಾಯ ಮರೀಚಿಕೆಯಾಗಿದೆ ಎಂದು ಅಸಮಾಧಾಣ ವ್ಯಕ್ತಪಡಿಸಿದರು.

ಜಾತಿ, ಧರ್ಮ, ವರ್ಗಗಳ ಆಧಾರದ ಮೇಲೆ ಜನರನ್ನು ವಿಂಗಡಿಸುವ ಮತ್ತು ನೋಡುವ ಸ್ಥಿತಿ ಮುಂದುವರೆದಿದ್ದು, 21ನೇ ಶತಮಾನದಲ್ಲಿಯೂ ಸಹ ಭ್ರೂಣಹತ್ಯೆಯಂತಹ ಪಿಡುಗುಗಳು ಅಸ್ತಿತ್ವದಲ್ಲಿರುವುದು ದುರಂತ ಎಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆಂಬಾಲಯ್ಯ, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೋ.ಟಿ.ಆರ್.ರಂಗಸ್ವಾಮಿ, ಉಪನ್ಯಾಸಕ ಯಶವಂತಕುಮಾರ ಇತರರ ಉಪಸ್ಥಿತರಿದ್ದರು.   
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News