ದಾವಣಗೆರೆ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

Update: 2018-02-20 17:37 GMT

ದಾವಣಗೆರೆ,ಫೆ.20: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ ನಡೆಸಲಾಯಿತು. 

ಮಹಾನಗರ ಪಾಲಿಕೆ ಬಳಿ ಜಮಾಯಿಸಿದ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಮಾತನಾಡಿದ ಸಿಐಟಿಯು ಮುಖಂಡ ಕೆ.ಎಲ್.ಭಟ್, ದೇಶದಲ್ಲಿ ಭ್ರಷ್ಟಚಾರದ ಪ್ರಕರಣಗಳು ಒಂದೊಂದಾಗಿ ಹೊರ ಬರುತ್ತಿದ್ದರೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನಿ ಬಾಬ ಆಗಿರುವುದು ದೇಶದ ಜನತೆಯನ್ನು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ. ಲಲಿತ್‍ಮೋದಿ, ನೀರವ್ ಮೋದಿ, ವಿಜಯಮಲ್ಯ ನಂತಹ ಉದ್ಯಮಿಗಳು ಬ್ಯಾಂಕ್‍ಗಳಿಗೆ ಮೋಸ ಮಾಡಿ ದೇಶ ಬಿಟ್ಟು ಹೋಗಿದ್ದಾರೆ. ಅದರೆ ಇದರ ಬಗ್ಗೆ ಇದುವರೆಗೂ ಚಕಾರವೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕಾಳ ಸಂತೆ ವ್ಯಾಪಾರದಿಂದ ಜನರು ತತ್ತರಿಸಿ ಹೋಗಿದ್ದಾರೆ. ನಿರುದ್ಯೋಗ ಸಮಸ್ಯೆಯಿಂದ ಯುವ ಸಮುದಾಯ ಬಳಲುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಟೀಕಿಸಿದರು. ಸರಕಾರಗಳು ಈ ಕೂಡಲೇ ಯುವ ಸಮುದಾಯದ ಹಿತ ಕಾಯಲು ಹೊಸ ಉದ್ಯೋಗ ಸೃಷ್ಠಿಸಬೇಕು. ಪಡಿತರ ವ್ಯವಸ್ಥೆ ಸಾರ್ವತ್ರಿಕರಣಗೊಳಿಸಬೇಕು. ಕಾರ್ಮಿಕ ಕಾನೂನು ಯಾವುದೇ ಷರತ್ತಿಲ್ಲದೇ ಜಾರಿಗೊಳಿಸಬೇಕು. ಉಲ್ಲಂಘನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಬೇಕು. ಕನಿಷ್ಠ 18 ಸಾವಿರ ವೇತನ ನೀಡಬೇಕು. 3 ಸಾವಿರ ಪಿಂಚಣಿ ಒದಗಿಸಬೇಕು ಎಂದರು.

ಸಾರ್ವಜನಿಕ ವಲಯದ ಉದ್ಯಮಗಳ ಷೇರು ಮಾರಾಟ ಮತ್ತು ಬಂಡವಾಳ ಹರಣ ಮಾಡಬಾರದು. ಗುತ್ತಿಗೆ ಪದ್ದತಿ ಕೈಬಿಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವೇತನ, ಬೋನಸ್ ಪಡೆಯಲು ಅರ್ಹತೆ, ಪ್ರಾವಿಡೆಂಟ್ ಫಂಡ್ ಮೇಲಿನ ಎಲ್ಲ ನಿರ್ಬಂಧ ತೆಗದುಹಾಕಬೇಕು. ಅರ್ಜಿ ಸಲ್ಲಿಸಿದ 45 ದಿನಗಳ ಒಳಗೆ ಕಡ್ಡಾಯವಾಗಿ ಕಾರ್ಮಿಕ ಸಂಘಟನೆಗಳ ರಿಜಿಸ್ಟ್ರೇಷನ್ ಮಾಡಬೇಕು. ಕಾರ್ಮಿಕ ಕಾನೂನು ತಿದ್ದುಪಡಿ ಮಾಡಬಾರದು. ರೈಲ್ವೆ, ವಿಮೆ, ರಕ್ಷಣಾ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು ಎನ್ನುವ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. 

ಎಐಯುಟಿಯುಸಿ ಕೈದಾಳೆ ಮಂಜುನಾಥ, ಇಂಟಿಕ್‍ನ ಆರ್.ಎಸ್.ತಿಪ್ಪೇಸ್ವಾಮಿ, ಹೆಚ್,ಜಿ, ಉಮೇಶ್, ಅವರಗೆರೆ ಚಂದ್ರು, ಆನಂದರಾಜ್, ಅವರೆಗೆರೆ ವಾಸು ಸೇರಿದಂತೆ ಹಲವರು ಭಾಗವಹಿಸಿದ್ದರು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News