ಮೈಸೂರು: ರಸ್ತೆ ಬದಿ ವ್ಯಾಪಾರಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ದಸಂಸ ಒತ್ತಾಯ

Update: 2018-02-20 17:46 GMT

ಮೈಸೂರು,ಫೆ.20: ಕುಡಿಯುವ ನೀರು, ನೆರಳು ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ರಸ್ತೆ ಬದಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ದೂರಿದೆ.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಸಮಿತಿ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ, ಹೂವು, ಹಣ್ಣು, ತರಕಾರಿ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ರಸ್ತೆ ಬದಿ ವ್ಯಾಪಾರಿಗಳು ಕುಡಿಯುವ ನೀರು ಸೇರಿದಂತೆ ಯಾವುದೇ ಸೌಕರ್ಯಗಳು ಇಲ್ಲದೇ ಬಿಸಿಲು ಮಳೆಯಿಂದ ಪರದಾಡುವಂತಾಗಿದ್ದು ಈ ಬಗ್ಗೆ ಗ್ರಾಮ ಪಂಚಾಯತ್ ಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದರು.

ಹುಲ್ಲಹಳ್ಳಿಯಲ್ಲಿ ಪೆಟ್ರೋಲ್ ಬಂಕ್, ಚಿತ್ರಮಂದಿರ, ಖಾಸಗಿ ಬಡಾವಣೆಗಳು ತಲೆ ಎತ್ತಿದ್ದು ಪ್ರಮುಖ ವ್ಯಾಪಾರಿ ಕೇಂದ್ರ, ಅಲ್ಲದೇ ಸುಮಾರು 25 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು ತಾಲೂಕು ಕೇಂದ್ರವಾಗಿ ಘೋಷಣೆಯಾಗಬೇಕಿತ್ತು, ಆದರೆ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಇಂದಿಗೂ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಗೊಳಗಾಗಿದ್ದು, ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದರು.

ಕುಡಿಯುವ ನೀರು ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ವಾರದೊಳಗೆ ಒದಗಿಸುವ ಮೂಲಕ ರಸ್ತೆ ಬದಿ ವ್ಯಾಪಾರಿಗಳ ಹಿತ ಕಾಪಾಡಬೇಕು ಇಲ್ಲವೇ ಜಿಲ್ಲಾ ಪಂಚಾಯತ್ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಕ.ರಾ.ದ.ಸಂ.ಸ.ಮುಖಂಡ ಪುಟ್ಟಸ್ವಾಮಿ ದೇವರಸನಹಳ್ಳಿ, ರಸ್ತೆಬದಿ ವ್ಯಾಪಾರಿಗಳ ಸಂಘಟನಾ ಸಂಚಾಲಕ ಮಹದೇವಸ್ವಾಮಿ ಹುಲ್ಲಹಳ್ಲಿ, ನಂದೀಶ ಹುಲ್ಲಹಳ್ಳಿ, ಮರಿಯಪ್ಪ ಹುಲ್ಲಹಳ್ಳಿ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News