ಗುತ್ತಿಗೆದಾರರಿಗೆ 1685 ಕೋಟಿ ರೂ ನೀಡಲು ಬಾಕಿ: ಸಚಿವ ಮಹದೇವಪ್ಪ

Update: 2018-02-20 17:48 GMT

ಮಡಿಕೇರಿ,ಫೆ.20: ಲೋಕೋಪಯೋಗಿ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯಲ್ಲಿ ಕಾಮಗಾರಿ ಪೂರ್ಣಗೊಂಡು ಗುತ್ತಿಗೆದಾರರಿಗೆ 1685.78 ಕೋಟಿ ರೂ.ಗಳ ಬಿಲ್ ಪಾವತಿಗೆ ಬಾಕಿ ಉಳಿದಿರುವುದಾಗಿ ಲೋಕೋಪಯೋಗಿ  ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, 2018ರ ಜನವರಿ ಅಂತ್ಯಕ್ಕೆ ರಾಜ್ಯದಲ್ಲಿ ಕಾಮಗಾರಿ ಪೂರ್ಣಗೊಂಡು ಬಿಲ್ ಪಾವತಿಗೆ 2268.28 ಕೋಟಿ ರೂ. ಬಾಕಿ ಇದ್ದು, ಇದರಲ್ಲಿ ಫೆಬ್ರವರಿ ತಿಂಗಳಿನಲ್ಲಿ 582.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಉಳಿದಂತೆ 1685.78 ಕೋಟಿ ರೂ.ಗಳಷ್ಟು ಬಿಲ್ ಪಾವತಿಗೆ ಬಾಕಿ ಉಳಿದಿದೆ ಎಂದು ವಿವರಿಸಿದ್ದಾರೆ.

ಕೊಡಗು 51.74 ಕೋಟಿ ರೂ
ಕೊಡಗು ಜಿಲ್ಲೆಯಲ್ಲಿ 2018ರ ಜನವರಿ ಅಂತ್ಯಕ್ಕೆ 51.74 ಕೋಟಿ ರೂ. ಪಾವತಿಗೆ ಬಾಕಿ ಇದ್ದು, ಇದರಲ್ಲಿ ಫೆಬ್ರವರಿ ಅಂತ್ಯಕ್ಕೆ 13.78 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪ್ರಸಕ್ತ 37.96 ಕೋಟಿ ರೂ.ಗಳಷ್ಟು ಬಾಕಿ ಇರುವುದಾಗಿ ಸಚಿವರು ಉತ್ತರಿಸಿದ್ದಾರೆ.

ಕಾಮಗಾರಿಗಳ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆಗೆ ಇರುವ ತೊಡಕುಗಳೇನು ಎಂಬ ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಮತ್ತು ಪೂರಕ ಅಂದಾಜುಗಳಲ್ಲಿ ಹೆಚ್ಚುವರಿ ಅನುದಾನ ಪಡೆದುಕೊಂಡು ಬಾಕಿ ಬಿಲ್ ತೀರುವಳಿಗೊಳಿಸಲು ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News