ಕೊಡಗಿನ ದೇವಾಲಯಗಳ ಪಾವಿತ್ರ್ಯತೆ ಕಾಪಾಡಲು ಅಗತ್ಯ ಕ್ರಮ: ರುದ್ರಪ್ಪ ಲಮಾಣಿ

Update: 2018-02-20 17:50 GMT

ಮಡಿಕೇರಿ,ಫೆ.20: ಕೊಡಗಿನ ತಲಕಾವೇರಿ ಹಾಗೂ ಭಗಂಡೇಶ್ವರ ದೇವಸ್ಥಾನಗಳ ಪಾವಿತ್ರ್ಯತೆಗೆ ಧಕ್ಕೆ ಬರುವಂತಹ ಘಟನೆಗಳು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಂದ ನಡೆಯುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್‍ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಭಾಗಮಂಡಲ ಶ್ರೀ ಭಗಂಡೇಶ್ವರ ತಲಕಾವೇರಿ ದೇವಾಲಯಗಳಲ್ಲಿ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳಿಂದ ದೇವಸ್ಥಾನಗಳ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಜಿಲ್ಲಾಡಳಿತದ ಮಾರ್ಗದರ್ಶನ ಮತ್ತು ಆರಕ್ಷಕ ಇಲಾಖೆಯ ಸಹಯೋಗದೊಂದಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಯ ಎ ವರ್ಗದ ಅಧಿಸೂಚಿತ ದೇವಾಲಯಗಳಾಗಿದ್ದು, ಈ ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಬ್ಯಾರಿಕೇಡ್ ಅಳವಡಿಕೆ, ಶುಚಿತ್ವ ಕಾಪಾಡಲು ಅಗತ್ಯ ಕ್ರಮವಹಿಸಲಾಗುತ್ತಿದ್ದು, ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿಗಳ ವ್ಯವಸ್ಥೆ, ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

34,555 ದೇವಾಲಯಗಳು: ರಾಜ್ಯದಲ್ಲಿ ಒಟ್ಟು 34,555 ದೇವಾಲಯಳು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಡಪಡುತ್ತಿದ್ದು, ದೇವಾಲಯಗಳಲ್ಲಿ ಸಂಗ್ರಹವಾದ ಹುಂಡಿ ಹಣವೂ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹವಾದ ಆದಾಯವನ್ನು ಆಯಾಯ ದೇವಾಲಯದ ನಿರ್ವಹಣೆಗಳಾದ ನಿತ್ಯಕಟ್ಲೆ, ಹೆಚ್ಚುಕಟ್ಲೆ, ರಥೋತ್ಸವ, ಸಿಬ್ಬಂದಿ ವೆಚ್ಚ, ಅಭಿವೃದ್ಧಿ ಕಾಮಗಾರಿಗಳಿಗೆ, ಭಕ್ತಾದಿಗಳ ದಾಸೋಹ ವ್ಯವಸ್ಥೆ ಹಾಗೂ ದೇವಾಲಯದ ವತಿಯಿಂದ ನಡೆಸಲ್ಪಡುತ್ತಿರುವ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಇತ್ಯಾದಿಗಳಿಗೆ ಬಳಸಲಾಗುತ್ತದೆ ಎಂದು ಸಚಿವರು ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಪ್ರಶ್ನೆಗೆ ಮಾಹಿತಿ ನೀಡಿದ್ದಾರೆ.

ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ದೇವಾಲಯಗಳ ಅರ್ಚಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಆಯಾ ದೇವಾಲಯದ ಆದಾಯಕ್ಕೆ ಅನುಗುಣವಾಗಿ ಶೇ.35 ಮೀರದಂತೆ ಹಾಗೂ ಸಿ ಪ್ರವರ್ಗದ ದೇವಾಲಯಗಳ ಅರ್ಚಕರಿಗೆ ತಸ್ವೀಕ್ ಮೊತ್ತ ಬಿಡುಗಡೆಗೆ ಅನುಸಾರವಾಗಿ ಸಂಭಾವನೆ ಅಥವಾ ವೇತನ ನೀಡಲಾಗುತ್ತಿದೆ ಎಂದು ಸುನಿಲ್ ಅವರ ಮತ್ತೊಂದು ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದ್ದಾರೆ.

ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ದೇವಾಲಯಗಳಅರ್ಚಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮಾಹೆಯಾನ ಅವರ ಉಳಿತಾಯ ಖಾತೆಗೆ  ಸಂಭಾವನೆ ಮತ್ತು ವೇತನಗಳನ್ನು ಜಮಾ ಮಾಡಲಾಗುತ್ತಿದ್ದು, ಸಿ ದೇವಾಲಯಗಳ ಅರ್ಚಕರಿಗೆ ತಸ್ವೀಕ್ ಮೊತ್ತ ಬಿಡುಗಡೆಗೆ ಅನುಸಾರವಾಗಿ ವೇತನ ಪಾವತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನಗಳ ಅರ್ಚಕರುಗಳಿಗೆ ದೇವಸ್ಥಾನದಲ್ಲಿ ಭಕ್ತರು ನೀಡುವ ತಟ್ಟೆಕಾಸು ಸಲ್ಲುತ್ತದೆ. ಓಂಕಾರೇಶ್ವರ ದೇವಾಲಯದ ಸಿಬ್ಬಂದಿಗಳಿಗೆ ಪ್ರತೀ ದಿನ ಒಂದು ಸೇರು ಅಕ್ಕಿಯನ್ನು  ನೈವೇದ್ಯ ರೂಪದಲ್ಲಿ ನೀಡಲಾಗುತ್ತಿದ್ದು, ಭಗಂಡೇಶ್ವರ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಒಳಾಂಗಣ ಸಿಬ್ಬಂದಿಗಳಿಗೆ ಉಚಿತ ವಿದ್ಯುತ್ ಮತ್ತು ಮೂಲ ಸೌಕರ್ಯಗಳನ್ನೊಳಗೊಂಡ ವಸತಿಗಳನ್ನು ಒದಗಿಸಲಾಗಿದೆ. ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದ ಮುಖ್ಯ ಅರ್ಚಕರಿಗೆ ಸೇವಾ ಕಮಿಷನ್ ಮತ್ತು ಉಚಿತ ವಿದ್ಯುತ್ ಹಾಗೂ ಮೂಲ ಸೌಕರ್ಯಗಳನ್ನೊಳಗೊಂಡ ವಸತಿ ಹಾಗೂ  ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅರ್ಚಕರಿಗೆ ಉಚಿತ ವಿದ್ಯುತ್ ಮತ್ತು ಮೂಲ ಸೌಕರ್ಯಗಳನ್ನೊಳಗೊಂಡ ವಸತಿ ನೀಡಲಾಗಿದೆ ಎಂದು ಸಚಿವರು ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಅಲ್ಲದೆ ತಲಕಾವೇರಿ ದೇವಸ್ಥಾನದಲ್ಲಿ ಅರ್ಚಕರಿಗೆ ಸೇವಾ ಕಮಿಷನ್ ಸೌಲಭ್ಯವಿದ್ದು, ತಲಕಾವೇರಿ ಜಾತ್ರೆ ಸಮಯದಲ್ಲಿ ಒಂದು ತಿಂಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News