ಕಸಾಯಿಖಾನೆಯಾಗುತ್ತಿರುವ ತುಮಕೂರು ನಗರ: ಮಾಜಿ ಸಚಿವ ಶಿವಣ್ಣ

Update: 2018-02-20 17:59 GMT

ತುಮಕೂರು,ಫೆ.20: ಕೇಂದ್ರ ಸರ್ಕಾರ ತುಮಕೂರು ನಗರವನ್ನು ಸ್ಮಾರ್ಟ್‍ಸಿಟಿ ಎಂದು ಘೋಷಣೆ ಮಾಡಿದ್ದು, ನಗರದಲ್ಲಿ ಅದಕ್ಕೆ ತಕ್ಕಂತಹ ವಾತಾವರಣವನ್ನು ಸ್ಥಳೀಯ ಶಾಸಕರು ನಿರ್ಮಾಣ ಮಾಡುತ್ತಿಲ್ಲ. ಅದಕ್ಕೆ ಬದಲಾಗಿ ಇಡೀ ನಗರವನ್ನು ಕಸಾಯಿಖಾನೆಯನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಎಸ್. ಶಿವಣ್ಣ ಆರೋಪಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 35 ವಾರ್ಡ್‍ಗಳ ಪೈಕಿ 20ಕ್ಕೂ ಹೆಚ್ಚು ವಾರ್ಡ್‍ಗಳಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ದೂರಿದರು.
ಒಂದು ಕಡೆ ವೇಶ್ಯಾವಾಟಿಕೆ ದಂಧೆ, ಇನ್ನೊಂದು ಕಡೆ ದನದ ಮಾಂಸ ಮಾರಾಟ, ಮತ್ತೊಂದು ಕಡೆ ಲವ್ ಜಿಹಾದ್ ನಡೆಯುತ್ತಿದ್ದು, ನಗರದ ನಾಗರೀಕರು ಸೌಜನ್ಯದಿಂದ ಬಾಳುವಂತಹ ವಾತಾವರಣ ಇಲ್ಲ ಎಂದರು.

ಮಹಾಶಿವರಾತ್ರಿ ಹಬ್ಬದ ದಿನ ನಗರದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಬಹುತೇಕ ಎಲ್ಲಾ ಕಡೆ ಮಾಂಸ ಮಾರಾಟ ನಡೆಯುತ್ತಿತ್ತು ಎಂದು ತಿಳಿಸಿದರು. ನಗರದಲ್ಲಿ ಸುಮಾರು 70 ಕಡೆ ಅನಧಿಕೃತವಾಗಿ ಮಾಂಸ ಮಾರಾಟದ ಅಂಗಡಿಗಳನ್ನು ನಡೆಸಲಾಗುತ್ತಿದ್ದು, ಇವುಗಳಿಗೆ ಸಂಬಂಧಿಸಿದ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯಲಾಗಿಲ್ಲ, ನಗರದ 2-3 ಕಡೆ ದನಗಳನ್ನು ಕಡಿದು ಇಡೀ ಜಿಲ್ಲೆಗೆ ದನದ ಮಾಂಸವನ್ನು ಸರಬರಾಜು ಮಾಡಲಾಗುತ್ತಿದ್ದು, ಇದಕ್ಕೆ ಪಾಲಿಕೆ ಸದಸ್ಯರೊಬ್ಬರ ಕುಮ್ಮಕ್ಕು ಇದ್ದು, ಅವರ ಮಾಲೀಕತ್ವದ ಅಂಗಡಿಯಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಆರೋಪ ಮಾಡಿದರು.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಾವು ತಂದಿದ್ದು, ಪರಿಶೀಲನೆಗೆ ಅಧಿಕಾರಿಗಳ ತಂಡ ಹೋಗಿದ್ದಾಗ ಬಾಗಿಲು ಮುಚ್ಚಲಾಗಿತ್ತು ಎಂದು ತಿಳಿಸಿದ್ದಾರೆ. ತಾವು ಪರಿಶೀಲನೆಗೆ ಬರುವ ಮಾಹಿತಿಯನ್ನು ಅಂಗಡಿ ಮಾಲೀಕರಿಗೆ ತಿಳಿಸಿ ತೆರಳಿದರೆ ಬಾಗಿಲು ಹಾಕದೆ ಸುಮ್ಮನಿರುತ್ತಾರೆಯೇ ಎಂದರು.
ಕಸಾಯಿ ಖಾನೆಗಳಲ್ಲಿ ಪ್ರಾಣಿಗಳನ್ನು ವಧೆ ಮಾಡಿದ ರಕ್ತ ಮತ್ತು ಅವುಗಳ ತ್ಯಾಜ್ಯವನ್ನು ಒಳಚರಂಡಿಗೆ ಬಿಡಲಾಗುತ್ತಿದ್ದು, ಇದರಿಂದ ಮ್ಯಾನ್‍ಹೋಲ್‍ಗಳು ತುಂಬಿ ರಸ್ತೆಗೆ ಉಕ್ಕಿ ಹರಿದಾಗ ಗಬ್ಬುನಾತ ಬೀರುತ್ತಿವೆ ಎಂದರು.

ಸ್ಥಳೀಯ ಶಾಸಕರು ಇದೆಲ್ಲದಕ್ಕೂ ಕುಮ್ಮಕ್ಕು ನೀಡುತ್ತಿದ್ದು, ನಗರದಲ್ಲಿರುವ ಕೊಳಗೇರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದ ಅವರು ತಮ್ಮ ಅಧಿಕಾರಾವಧಿಯಲ್ಲಿ ಕೊಳಗೇರಿಗಳನ್ನು ತೆರವುಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ದಿಬ್ಬೂರಿನಲ್ಲಿ 1200 ಮನೆಗಳ ವಸತಿ ಸಮುಚ್ಛಯ ನಿರ್ಮಾಣ ಮಾಡಲಾಗಿತ್ತು. ಈ ಮನೆಗಳನ್ನು ಸ್ಥಳೀಯ ಶಾಸಕರು ಅರ್ಹರಲ್ಲದ ಫಲಾನುಭವಿಗಳಿಗೆ ವಿತರಿಸಿದ್ದು, ಉಳಿದವುಗಳನ್ನು ತಮಗೆ ಬೇಕಾದವರಿಗೆ ಮಾರಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಪಂಚಾಕ್ಷರಯ್ಯ, ಶಾಂತರಾಜು, ನಂಜುಂಡಪ್ಪ, ಬನಶಂಕರಿ ಬಾಬು, ಹೆಚ್.ಕೆ.ಶಿವಣ್ಣ, ಪ್ರಕಾಶ್, ಗೋಪಾಲಕೃಷ್ಣ, ಮದನ್‍ಸಿಂಗ್, ದಯಾನಂದ ಮುಂತಾದವರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News