ತುಮಕೂರು: ಕೈಮಗ್ಗಗಳ ಯಶಸ್ಸಿಗೆ ತಂತ್ರಜ್ಞಾನದ ಬಳಕೆ ಅನಿವಾರ್ಯ; ಅನೀಸ್ ಕಣ್ಮಣಿಜಾಯ್

Update: 2018-02-20 18:05 GMT

ತುಮಕೂರು,ಫೆ.20: ಜಿಲ್ಲೆಯ ಕೈಮಗ್ಗ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ನೇಕಾರರು ತಮ್ಮ ಉತ್ಪನ್ನ ಮಾರಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಭಿಪ್ರಾಯಪಟ್ಟಿದ್ದಾರೆ.

ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ನಗರದಲ್ಲಿಂದು ಹಮ್ಮಿಕೊಂಡಿದ್ದ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ, ಗುಬ್ಬಿ ತಾಲೂಕಿನ ಕಲ್ಲೂರಿನ ರೇಷ್ಮೆ ಉತ್ಪನ್ನಗಳಿಗೆ ಬಹು ಬೇಡಿಕೆ ಇದೆ. ಆದರೆ ಉತ್ಪನ್ನಗಳ ಲಾಭ ಮಾತ್ರ ನೇಕಾರರಿಗೆ ಸಿಗುತ್ತಿಲ್ಲ ಎಂದರು.

ನೇಕಾರರು ತಮ್ಮ ಉತ್ಪನ್ನಗಳನ್ನು ತಾವೇ ಮಾರುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ. ತಂತ್ರಜ್ಞಾನದ ಬಳಕೆ ಮಾಡುವಲ್ಲಿ ನೇಕಾರರು ಹಿಂದುಳಿದಿದ್ದು, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡರೆ ಆದಾಯವನ್ನು ವೃದ್ಧಿಸಿಕೊಳ್ಳಬಹುದು, ತಂತ್ರಜ್ಞಾನದ ಯುಗದಲ್ಲಿ ನೇಕಾರರು ತಮ್ಮ ಉತ್ಪನ್ನಗಳನ್ನು ಸ್ವಯಂ ಮಾರಾಟ ಮಾಡುವುದಲ್ಲದೇ ತಮ್ಮದೇ ಬ್ರ್ಯಾಂಡ್ ಅನ್ನು ನಿರ್ಮಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದಾರ್ಥ ಕಾಲೇಜಿನ ಪ್ರಾಂಶುಪಾಲ ಎಂ.ಕೆ.ವೀರಯ್ಯ, ಸರ್ಕಾರದಿಂದ ದೊರೆಯುವ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವುದರಿಂದ ಸ್ವಯಂ ಉದ್ದಿಮೆದಾರರಾಗುವುದಲ್ಲದೆ, ಉದ್ಯೋಗದಾತರೂ ಆಗಬಹುದು, ಋಣಾತ್ಮಕ ಚಿಂತನೆಗಳನ್ನು ಬಿಟ್ಟು ಸಕಾರಾತ್ಮಕವಾಗಿ ಶ್ರದ್ಧೆವಹಿಸಿ ಕಾರ್ಯ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದು ಎಂದು ಸಲಹೆ ನೀಡಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಸಿ.ಎಸ್.ಯೋಗೇಶ್ ಮಾತನಾಡಿ ಜವಳಿ ಕ್ಷೇತ್ರದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಸಾಕಷ್ಟು ಅವಕಾಶಗಳಿವೆ. ಋತುಗಳಿಗೆ ತಕ್ಕಂತೆ ‘ಫ್ಯಾಷನ್ ಟ್ರೆಂಡ್’ಗೆ ಅನುಗುಣವಾಗಿ ಉತ್ಪಾದನೆ ಮಾಡಿದರೆ ಆರ್ಥಿಕ ಮುನ್ನಡೆ ಸಾಧಿಸಬಹುದು ಎಂದು ತಿಳಿಸಿದರು. ಸರ್ಕಾರವು ವಿವಿಧ ಯೋಜನೆಗಳಡಿ ಕೈಮಗ್ಗ ಮತ್ತು ಜವಳಿ ಉದ್ದಿಮೆ ಸ್ಥಾಪಿಸುವವರಿಗೆ ಬ್ಯಾಂಕ್ ನೆರವಿನೊಂದಿಗೆ ಸಹಾಯಧನವನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ಉಣ್ಣೆ, ರೇಷ್ಮೆ, ಪವರ್‍ಲೂಮ್, ಗಾರ್ಮೆಂಟ್ಸ್ ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾದ ಸಂಪನ್ಮೂಲವಿದೆ. ಜವಳಿ ಕ್ಷೇತ್ರದಲ್ಲಿ ಹಲವು ಉಪ ಘಟಕಗಳಿರುವುದರಿಂದ ಉದ್ದಿಮೆದಾರರಿಗೆ ಅನುಕೂಲವಾಗಲಿದೆ ಎಂದರು.

ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಜ್ಯೋತಿಗಣೇಶ್ ಮಾತನಾಡಿ, ಸಬ್ಸಿಡಿ ಆಸೆಗಾಗಿ ಸಾಲವನ್ನು ಪಡೆಯದೇ, ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಸಾಧಿಸುವ ಛಲದೊಂದಿಗೆ ಶ್ರದ್ಧೆ, ಸಮಯಪಾಲನೆ ಇದ್ದಾಗ ಮಾತ್ರ ಯಶಸ್ಸು ದೊರೆಯುತ್ತದೆ ಎನ್ನುವುದನ್ನು ಉದ್ದಿಮೆ ಸ್ಥಾಪಿಸುವವರು ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಎಸ್.ವಿರೂಪಾಕ್ಷಪ್ಪ, ಸಹಾಯಕ ನಿರ್ದೇಶಕರಾದ ಜಿ.ಜಿ.ಸಂತೋಷ್, ಪ್ರೊ.ಸಂಜೀವ್‍ಕುಮಾರ್, ಸಂಪನ್ಮೂಲ ವ್ಯಕ್ತಿ ಕಣ್ಣನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News