ಬಂದೂಕು ಕಾನೂನು ಪರಿವರ್ತನೆಗಾಗಿ ಫ್ಲೋರಿಡ ರಾಜಧಾನಿಯಲ್ಲಿ ವಿದ್ಯಾರ್ಥಿಗಳ ರ್ಯಾಲಿ

Update: 2018-02-20 18:36 GMT

ಪಾರ್ಕ್‌ಲ್ಯಾಂಡ್ (ಫ್ಲೋರಿಡ), ಫೆ. 20: ಅಮೆರಿಕದ ಫ್ಲೋರಿಡ ರಾಜ್ಯದ ಪಾರ್ಕ್‌ಲ್ಯಾಂಡ್‌ನಲ್ಲಿರುವ ಸ್ಟೋನ್‌ಮನ್ ಡಗ್ಲಸ್ ಹೈಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ ಹತ್ಯಾಕಾಂಡದ ಮಾದರಿಯ ಇನ್ನೊಂದು ಹತ್ಯಾಕಾಂಡವನ್ನು ತಡೆಯುವಂತೆ ಜನಪ್ರತಿನಿಧಿಗಳನ್ನು ಒತ್ತಾಯಿಸಲು ಈ ಶಾಲೆಯ ನೂರು ವಿದ್ಯಾರ್ಥಿಗಳು ರಾಜ್ಯದ ರಾಜಧಾನಿ ಟ್ಯಾಲಹಸಿಗೆ ಪ್ರಯಾಣಿಸಲಿದ್ದಾರೆ.

ವಿದ್ಯಾರ್ಥಿಗಳು 400 ಕಿ.ಮೀ. ದೂರದ ರಾಜಧಾನಿಗೆ ಬಸ್‌ನಲ್ಲಿ ಹೋಗಲಿದ್ದಾರೆ.

ಈ ಹೈಸ್ಕೂಲ್‌ನ ಹಳೆ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿ 17 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಬಂದೂಕು ನಿಯಂತ್ರಣ ಕಾನೂನಿಗಳಿಗೆ ಆಮೂಲಾಗ್ರ ಬದಲಾವಣೆಗಳನ್ನು ತರುವಂತೆ ರಾಜ್ಯದ ರಿಪಬ್ಲಿಕನ್ ಸರಕಾರದ ಮೇಲೆ ಒತ್ತಡ ಹೇರುವುದಕ್ಕಾಗಿ ವಿದ್ಯಾರ್ಥಿಗಳು ಬುಧವಾರ ಸಾರ್ವಜನಿಕ ಸಭೆಯೊಂದನ್ನು ನಡೆಸಲಿದ್ದಾರೆ.

 ಅಮೆರಿಕದ ರಿಪಬ್ಲಿಕನ್ ಪಕ್ಷವು ಮುಕ್ತ ಬಂದೂಕು ಪರವಾನಿಗೆಯ ಪರವಾಗಿದೆ. ಫ್ಲೋರಿಡ ರಾಜ್ಯದಲ್ಲಿ ದಶಕಗಳಿಂದ ರಿಪಬ್ಲಿಕನ್ ಸರಕಾರ ಅಸ್ತಿತ್ವದಲ್ಲಿದೆ. ಆದಾಗ್ಯೂ, ಹೈಸ್ಕೂಲ್ ಹತ್ಯಾಕಾಂಡದ ಬಳಿಕ ಹಲವು ರಿಪಬ್ಲಿಕನ್ ಜನಪ್ರತಿನಿಧಿಗಳು ತಮ್ಮ ನಿಲುವನ್ನು ಸಡಿಲಿಸಿದ್ದು, ಬಂದೂಕು ನಿಯಂತ್ರಣ ಕಾನೂನುಗಳನ್ನು ಬಲಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News