ಮಾಲ್ದೀವ್ಸ್: ತುರ್ತು ಪರಿಸ್ಥಿತಿ 30 ದಿನ ವಿಸ್ತರಣೆಗೆ ಕೋರಿಕೆ

Update: 2018-02-20 18:39 GMT

ಮಾಲೆ (ಮಾಲ್ದೀವ್ಸ್), ಫೆ. 20: ಮಾಲ್ದೀವ್ಸ್‌ನಲ್ಲಿ ಜಾರಿಯಲ್ಲಿರುವ ತುರ್ತು ಪರಿಸ್ಥಿತಿಯನ್ನು ಇನ್ನೂ 30 ದಿನಗಳ ಕಾಲ ವಿಸ್ತರಿಸುವ ನಿರ್ಣಯವನ್ನು ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದರು. ಆದರೆ, ಈ ನಿರ್ಣಯದ ಮೇಲಿನ ಮತದಾನವನ್ನು ಪ್ರತಿಪಕ್ಷ ಸಂಸದರು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಸ್ಥಗಿತಗೊಂಡಿದೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸಲು ನಿರಾಕರಿಸಿ ಮಾಲ್ದೀವ್ಸ್ ಅಧ್ಯಕ್ಷರು ದೇಶದಲ್ಲಿ ಫೆಬ್ರವರಿ 5ರಂದು 15 ದಿನಗಳವರೆಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

 ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್ ಸೇರಿದಂತೆ ಒಂಬತ್ತು ಪ್ರತಿಪಕ್ಷ ನಾಯಕರ ದೋಷಿತ್ವವನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್, ಅವರನ್ನು ಸೆರೆಮನೆಯಿಂದ ಬಿಡುಗಡೆಗೊಳಿಸುವಂತೆ ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಅದೇ ವೇಳೆ, ಆಡಳಿತಾರೂಢ ಪಕ್ಷದಿಂದ ಪ್ರತಿಪಕ್ಷಗಳ ಸಾಲಿಗೆ ಪಕ್ಷಾಂತರಗೊಂಡಿರುವ 12 ಸಂಸದರ ಸದಸ್ಯತ್ವವನ್ನು ಮರಳಿಸುವಂತೆಯೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ತುರ್ತು ಪರಿಸ್ಥಿತಿಯ ಅವಧಿ ಮಂಗಳವಾರ ಕೊನೆಗೊಳ್ಳಲಿದೆ.

15 ದಿನಗಳ ಅವಧಿಗೆ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಲಾಗುವುದು ಎಂಬುದಾಗಿ ಸೋಮವಾರ ಆರಂಭದಲ್ಲಿ ಸಂಸತ್ತಿಗೆ ತಿಳಿಸಲಾಗಿತ್ತು. ಆದರೆ, 30 ದಿನಗಳ ವಿಸ್ತರಣೆಯನ್ನು ಕೋರಲಾಗಿತ್ತು ಎಂಬುದಾಗಿ ಬಳಿಕ ಅಧ್ಯಕ್ಷರ ಕಚೇರಿ ಪ್ರಕಟಿಸಿತು.

ಯಮೀನ್ ಮಂಡಿಸಿದ ಪ್ರಸ್ತಾಪದ ಬಗ್ಗೆ ಚರ್ಚಿಸಲು ಆಡಳಿತಾರೂಢ ಪ್ರೊಗ್ರೆಸಿವ್ ಪಾರ್ಟಿ ಆಫ್ ದ ಮಾಲ್ದೀವ್ಸ್ (ಪಿಪಿಎಂ)ನ 39 ಸಂಸದರು ಸಂಸತ್ ಅಧಿವೇಶನಕ್ಕೆ ಹಾಜರಾಗಿದ್ದರು. ಆದರೆ, ಪ್ರತಿಪಕ್ಷದ ಎಲ್ಲ ಸದಸ್ಯರು ಅಧಿವೇಶನವನ್ನು ಬಹಿಷ್ಕರಿಸಿದರು.

ಬಳಿಕ ಸಂಸದರು ನಿರ್ಣಯವನ್ನು ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಗೆ ಕಳುಹಿಸಿದರು. ಸಮಿತಿಯು ಮುಚ್ಚಿದ ಕೋಣೆಯಲ್ಲಿ ಸಭೆ ಸೇರಿ ಪ್ರಸ್ತಾಪವನ್ನು ಅನುಮೋದಿಸಿದೆ.

ಕೋರಂ ಇಲ್ಲ: ಪ್ರತಿಪಕ್ಷ ಆಕ್ಷೇಪ

ನಿರ್ಣಯದ ಚರ್ಚೆಗೆ 85 ಸದಸ್ಯ ಬಲದ ಸಂಸತ್ತಿನಲ್ಲಿ 43 ಸಂಸದರ ಅವಶ್ಯಕತೆ ಇದೆ ಎಂಬುದಾಗಿ ಪ್ರತಿಪಕ್ಷಗಳು ಬೆಟ್ಟು ಮಾಡಿದವು.

ಆದರೆ, ಆಡಳಿತಾರೂಢ ಪಕ್ಷದ ಕೇವಲ 39 ಸಂಸದರು ಹಾಜರಿದ್ದ ಹಿನ್ನೆಲೆಯಲ್ಲಿ ಸೋಮವಾರ ತಡ ರಾತ್ರಿಯವರೆಗೂ ನಿರ್ಣಯವನ್ನು ಮತಕ್ಕೆ ಹಾಕಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News