ಕೇಂದ್ರ ಬಜೆಟ್-ಪ್ರಮುಖ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು

Update: 2018-02-20 18:58 GMT

ಭಾಗ-1

ಈ ಸಲದ ಅಂದರೆ 2018-19ನೇ ವರ್ಷದ ಕೇಂದ್ರ ಬಜೆಟ್‌ನಲ್ಲಿರುವ ಅತೀ ಮಹತ್ವದ ಪ್ರಕಟನೆಯೆಂದರೆ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ.ಇದು ಜಗತ್ತಿನಲ್ಲಿಯೇ ಅತೀ ದೊಡ್ಡ ಸರಕಾರದಿಂದ ನಡೆಸಲ್ಪಡುವ ಆರೋಗ್ಯ ರಕ್ಷಣಾ ಯೋಜನೆಯಾಗಲಿದ್ದು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 50 ಕೋಟಿ ಜನರು ಇದರ ಫಲಾನುಭವಿಯಾಗಲಿದ್ದಾರೆ. ಈ ಯೋಜನೆಯನ್ವಯ ಪ್ರತೀ ಕುಟುಂಬಕ್ಕೆ ವಾರ್ಷಿಕ 5 ಲಕ್ಷದಷ್ಟರ ಆರೋಗ್ಯ ರಕ್ಷೆ(ಹೆಲ್ತ್ ಕವರೇಜ್) ದೊರೆಯಲಿದೆ. ಈ ಯೋಜನೆ ದೇಶದ ಶೇ.40ರಷ್ಟು ಜನಸಂಖ್ಯೆಯನ್ನೊಳಗೊಳ್ಳಲಿರುವ ಮಹತ್ವಾಕಾಂಕ್ಷಿ ಸರಕಾರಿ ಯೋಜನೆಯಾಗಲಿದೆ.

 ಆದರೆ ಬಜೆಟ್‌ನಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸಿಲ್ಲ. ಈ ಬೃಹತ್ ಯೋಜನೆಗೆ ಬೇಕಾದ ಹಣವನ್ನೂ ಬಜೆಟ್‌ನಲ್ಲಿ ತೆಗೆದಿಡಲಿಲ್ಲ. ಇದು 2016ರ ಬಜೆಟ್‌ನಲ್ಲಿ ಪ್ರಕಟಿಸಲ್ಪಟ್ಟ ಸಾಮಾಜಿಕ ಭದ್ರತಾ ಯೋಜನೆ (ಸೋಷಿಯಲ್ ಸೆಕ್ಯುರಿಟಿ ಸ್ಕೀಮ್)ಯ ಹಾದಿ ಹಿಡಿಯದಿದ್ದರೆ ಸಾಕು. 2016ರಲ್ಲಿ ಪ್ರಕಟಿಸಲ್ಪಟ್ಟ ಸಾಮಾಜಿಕ ಭದ್ರತಾ ಯೋಜನೆ ಬೆಳಕು ಕಾಣಲೇ ಇಲ್ಲ. ಸರಕಾರ ಅದಕ್ಕೆ ಬೇಕಾದ ಹಣ ಒದಗಿಸಲಿಲ್ಲ ಮತ್ತು ಅದರ ಅನುಷ್ಠಾನಕ್ಕೆ ಮುಂದಾಗಲೇ ಇಲ್ಲ.
ಈ ಸಲದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒದಗಿಸಿದ ಹಣ ಕೇವಲ ಶೇ. 2ರ ಏರಿಕೆ ಕಂಡಿದೆ.

 ಈ ಕ್ಷೇತ್ರಕ್ಕೆ 2018-19ರಲ್ಲಿ 58,600 ಕೋಟಿಯಷ್ಟು ಹಣ ಒದಗಿಸಲಾಗಿದ್ದು 2017-18ರಲ್ಲಿ ರೂ. 53,294 ಕೋಟಿಯಷ್ಟು ಹಣ ಒದಗಿಸಲಾಗಿತ್ತು. ಅಂದರೆ ಶೇ.23 ಹೆಚ್ಚಳ ಅಷ್ಟೆ.
  ಸರಕಾರ ಪ್ರಕಟಿಸಿರುವ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಸರಿಯಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಗೊಂಡರೆ ಅದರಿಂದ ಜನತೆಗೆ ತುಂಬಾ ಅನುಕೂಲವಾಗಲಿದೆ. ಆದರೆ ಸರಕಾರ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ ವಿವರಗಳನ್ನು ಪ್ರಕಟಿಸದಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ

ಪ್ರತ್ಯೇಕ ವಿಂಗಡನೆಯ ಕೊರತೆ: ಪ್ರತ್ಯೇಕ ಹಣ ವಿಂಗಡನೆಯ ಅಲಭ್ಯತೆಯಿಂದಾಗಿ ಯೋಜನೆಯ ವ್ಯವಸ್ಥಿತ ಅನುಷ್ಠಾನ ಕಷ್ಠ. ಭಾರತದಲ್ಲಿ ಆರೋಗ್ಯ ಕ್ಷೇತ್ರದ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಅಲ್ಪಮೊತ್ತದ ಹಣ ಒದಗಿಸುವುದು ಮತ್ತು ಒಟ್ಟಾರೆ ನಿರ್ವಹಣೆಯ ನಿರ್ಲಕ್ಷ ಇವೆಲ್ಲ ಆತಂಕದ ವಿಷಯಗಳು. ಆರೋಗ್ಯ ರಕ್ಷಣೆಯ ಮೇಲೆ ಈಗ ಆಗುವ ವೆಚ್ಚ ಒಟ್ಟು ಆಂತರಿಕ ಉತ್ಪತ್ತಿಯ(ಜಿಡಿಪಿ) ಶೇ.1.4 ಮಾತ್ರ. ಇದು ಹೆಚ್ಚಬೇಕು ಬಜೆಟ್ ಇದಕ್ಕೂ ಲಕ್ಷನೀಡಬೇಕಿತ್ತು.

 ವ್ಯಾಧಿ ನಿರೋಧ ಕ್ರಮಗಳಿಗೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕ್ರಮಗಳಿಗೂ ಒತ್ತು ನೀಡಬೇಕಿತ್ತು. ರಾಷ್ಟ್ರೀಯ ಆರೋಗ್ಯ ರಕ್ಷಕ ಯೋಜನೆಯಲ್ಲಿ ವಿಮಾಸಂಸ್ಥೆಗಳಿಗೆ ಮಹತ್ವದ ಪಾತ್ರವಿದೆ.

ಸರಕಾರ ಸೂಕ್ತ ನಿಯಂತ್ರಣಾ ಕ್ರಮಗಳನ್ನು ಯೋಜನೆಯ ಅನುಷ್ಠಾನದ ವೇಳೆ ಜಾರಿಗೆ ತರಬೇಕಾಗುತ್ತದೆ. ಇಲ್ಲದಿದ್ದರೆ ಕ್ಷುಲ್ಲಕ ಕಾರಣಗಳಿಗೆ ಆಸ್ಪತ್ರೆ ಬಿಲ್ಲುಗಳನ್ನು ವಿಮಾ ಸಂಸ್ಥೆಗಳು ತಿರಸ್ಕರಿಸಿ ಜನರಿಗೆ ತೊಂದರೆ ನೀಡಬಹುದು ಮತ್ತು ಆ ಮೂಲಕ ಲಾಭ ಹೆಚ್ಚಿಸಿಕೊಳ್ಳಬಹುದು. ಆದ್ದರಿಂದ ನಿಯಂತ್ರಣಾ ಕ್ರಮಗಳಿಗೂ ಸರಕಾರ ಲಕ್ಷ ನೀಡಬೇಕು ಮತ್ತು ಇತರ ನೌಕರರ ಸಂಖ್ಯೆಯೂ ಹೆಚ್ಚಬೇಕು. ಈ ಎಲ್ಲ ವಿಷಯಗಳಿಗೂ ಲಕ್ಷ ನೀಡಬೇಕು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಕ್ರಮಗಳು ಬಜೆಟ್‌ನಲ್ಲಿ ಪ್ರಕಟಿಸಲ್ಪಟ್ಟಿವೆ. ಕನಿಷ್ಠ ಬೆಂಬಲ ಬೆಲೆಯ ನಿಗದಿ ಇತ್ಯಾದಿ ಪ್ರಕಟಿತ ಕ್ರಮಗಳು ರೈತರ ವರಮಾನ ಹೆಚ್ಚಿಸುವಲ್ಲಿ ನೆರವಾಗಬಹುದು.
ಕೃಷಿ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳುವ ಕುರಿತು ಬಜೆಟ್‌ನಲ್ಲಿ ನಮೂದಿಸಲಾಗಿದೆ. ಆದರೆ ಅದರ ವಿವರಗಳನ್ನು ಮತ್ತು ಅದಕ್ಕೆ ಬೇಕಾದ ಸಮಯ/ ಅವಧಿಯನ್ನು ನಮೂದಿಸಿಲ್ಲ.

ಶೀಘ್ರ ಉಪಶಮನ ಕ್ರಮಗಳ ಕೊರತೆ:  ಕೃಷಿ ಕ್ಷೇತ್ರದ ಬಿಕ್ಕಟ್ಟನ್ನು ನಿವಾರಿಸಲು ಯಾವುದೇ ಶೀಘ್ರ ಉಪಶಮನ ಕ್ರಮಗಳನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳದಿರುವುದು ಅದರ ನ್ಯೂನತೆಯಾಗಿದೆ. ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದಂತೆ ನೇರ ಆದಾಯ ಬೆಂಬಲ (direct income support) ಒದಗಿಸುವ ಕುರಿತಾಗಿಯೂ ಬಜೆಟ್‌ನಲ್ಲಿ ಯಾವ ನಮೂದನೆಯೂ ಇಲ್ಲ. ಋಣ ಪರಿಹಾರಕ್ಕೆ ಸಂಬಂಧಿಸಿದ ಬೇಡಿಕೆಯ ಕುರಿತೂ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ರೈತರ ಉತ್ಪಾದನಾ ಸಂಸ್ಥೆಗಳಿಗೆ ಶೇ. 100ರಷ್ಟರ ತೆರಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹವಾಗಿದೆ. ಹಾಗೆಯೇ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ 1.5ರಷ್ಟಕ್ಕೆ ಹೆಚ್ಚಿಸಿರುವುದು ಉತ್ತಮ ನಿರ್ಧಾರವಾಗಿದೆ. ರೂ. 10,000 ಕೋಟಿಯ ಮೂಲಸ್ಥಾವರ ಅಭಿವೃದ್ಧಿ ನಿಧಿಯನ್ನು ಗ್ರಾಮೀಣ ಕ್ಷೇತ್ರಕ್ಕಾಗಿ ಸ್ಥಾಪಿಸುವ ನಿರ್ಧಾರ ಕೂಡ ಸ್ವಾಗತಾರ್ಹವಾಗಿದೆ.

ಮೂಲ ಸ್ಥಾವರ ಸೌಲಭ್ಯಗಳ ಅಭಿವೃದ್ಧಿಗೆ ಅತೃಪ್ತಿಕರ ಒತ್ತು:
ಉದ್ಯೋಗ ಸೃಷ್ಟಿಗೆ ಕಾರಣವಾಗಬಲ್ಲ ಮೂಲಸ್ಥಾವರ ಕ್ಷೇತ್ರಗಳಿಗೆ ಒದಗಿಸಿದ ಹಣ ಏನೂ ಸಾಲದು. ರೈಲ್ವೆಯನ್ನು ಬಿಟ್ಟು ಇತರ ಮೂಲ ಸ್ಥಾವರ ಸೌಲಭ್ಯಗಳ ಅಭಿವೃದ್ಧಿಗೆ ಒದಗಿಸಿದ ಹಣದ ಮೊತ್ತ ತೃಪ್ತಿಕರವಾಗಿಲ್ಲ. ಮೂಲಸ್ಥಾವರ ಕ್ಷೇತ್ರಗಳಿಗೆ ಒಟ್ಟು ವೆಚ್ಚ ರೂ. 5.97 ಕೋಟಿಯಾಗಲಿದೆ. ಇದು 2017-18ರಲ್ಲಿ ರೂ. 4.94ಕೋಟಿಯಾಗಿತ್ತು. ಮೂಲಸ್ಥಾವರ ಕ್ಷೇತ್ರಗಳಿಗೆ ಒದಗಿಸಿದ ಹಣದಲ್ಲಿ ದೊಡ್ಡ ಪಾಲು ರೈಲ್ವೆಗೆ ಹೋಗುವುದರಿಂದ ರಸ್ತೆಗಳ ಅಭಿವೃದ್ಧಿಗೆ ಒದಗಿಸಿದ ಹಣ ಏನೂ ಸಾಲದು. ಮೂಲಸ್ಥಾವರ ಕ್ಷೇತ್ರಗಳ ಅಭಿವೃದ್ಧಿಗೆ ಅತೀ ಹೆಚ್ಚಿನ ಸಂಪನ್ಮೂಲ ಒದಗಿಸಬೇಕಿತ್ತು. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚುತ್ತದೆ. ಮತ್ತು ಅದರ ಫಲವಾಗಿ ಪ್ರಗತಿಗೆ ಹೆಚ್ಚು ಹೆಚ್ಚು ಕೊಡುಗೆ ಲಭ್ಯವಾಗುತ್ತದೆ. ಬಜೆಟ್‌ನಲ್ಲಿ ಸಣ್ಣ, ಮಧ್ಯಮ ಮತ್ತು ಕಿರು ಉದ್ಯಮಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. 3,714 ಕೋಟಿ ಹಣವನ್ನು ಸಾಲದ-ರೂಪದ ಬೆಂಬಲಕ್ಕಾಗಿ, ಬಡ್ಡಿ ಸಹಾಯಧನ (interest subsidy) ಮತ್ತು ಆವಿಷ್ಕಾರಗಳಿಗಾಗಿ ಒದಗಿಸಲಾಗಿದೆ. 

ಮುದ್ರಾ ಯೋಜನೆಯನ್ವಯ ರೂ. 3 ಲಕ್ಷ ಕೋಟಿ ಸಾಲವನ್ನು 2018-19ರಲ್ಲಿ ಒದಗಿಸುವ ಪ್ರಸ್ತಾಪ ಬಜೆಟ್‌ನಲ್ಲಿದೆ. ಸಾಲದ ಅರ್ಹತಾ ನಿಯಮಗಳನ್ನು ಮತ್ತು ಪುನರ್ಧನ ನೀತಿಯನ್ನು ಪುನಃ ಪರಿಶೀಲಿಸಿ ಅವುಗಳನ್ನು ಮತ್ತಷ್ಟು ಸುಧಾರಿಸುವ ಪ್ರಕ್ರಿಯೆಗೂ ಸರಕಾರ ಗಮನ ನೀಡಲಿದೆ. ಇವೆಲ್ಲ ಉತ್ತಮ ಹೆಜ್ಜೆಗಳಾಗಿದ್ದು ಸ್ವಾಗತಾರ್ಹವಾಗಿದೆ.

Writer - ಡಾ.ಕೆ.ಕೆ. ಅಮ್ಮಣ್ಣಾಯ

contributor

Editor - ಡಾ.ಕೆ.ಕೆ. ಅಮ್ಮಣ್ಣಾಯ

contributor

Similar News