ಶಸ್ತ್ರ ಚಿಕಿತ್ಸೆಯ ನಂತರ ಎರಡು ಹೃದಯಗಳ ಒಡೆಯನಾದ ಭಾರತೀಯ !

Update: 2018-02-21 09:53 GMT

ಹೈದರಾಬಾದ್, ಫೆ. 21: ಹೃದಯ ವೈಫಲ್ಯಕ್ಕೊಳಗಾಗಿ ಬದಲಿ ಹೃದಯ ಜೋಡಿಸುವ ಶಸ್ತ್ರಕ್ರಿಯೆಗೆ ಆಪರೇಷನ್ ಥಿಯೇಟರಿಗೆ ಕರೆದೊಯ್ಯಲ್ಪಟ್ಟ ವ್ಯಕ್ತಿಯೊಬ್ಬ ಅಲ್ಲಿಂದ ಹಿಂದಿರುಗುವಾಗ ಎರಡು ಹೃದಯಗಳ ಒಡೆಯನಾಗಿ ಬಿಟ್ಟಿದ್ದಾರೆ.

ಶಸ್ತ್ರಕ್ರಿಯೆ ನಡೆಸಿದ ವೈದ್ಯರು ಆತನ ಎದೆಗೂಡಿನೊಳಗೆ ದಾನಿಯ ಹೃದಯ ಜೋಡಿಸುವುದರ ಜತೆಗೆ ಆತನ ಒರಿಜಿನಲ್ ಹೃದಯ ತೆಗೆಯದಿರಲು ಕೈಗೊಂಡ ನಿರ್ಧಾರದಿಂದಲೇ ಅವರು ಈಗ ಎರಡು ಹೃದಯ ಹೊಂದಿದವನಾಗಿದ್ದಾರೆ.

ಈ ಅಪರೂಪದ ಶಸ್ತ್ರಕ್ರಿಯೆ ಹೈದರಾಬಾದ್ ನಗರದ ಪ್ರತಿಷ್ಠಿತ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಶನಿವಾರ ನಡೆದಿದೆ. ಹದಿನೇಳು ವರ್ಷದ ಬಾಲಕನೊಬ್ಬನ ಹೃದಯವನ್ನು ದಾನವಾಗಿ ದೊರೆತ ಕಾರಣ 56 ವರ್ಷದ ರೋಗಿಗೆ ಹೃದಯ ಕಸಿ ಶಸ್ತ್ರಕ್ರಿಯೆ ನಡೆಸಲು ವೈದ್ಯರು ತೀರ್ಮಾನಿಸಿದ್ದರು.
ಆದರೆ ಶಸ್ತ್ರಕ್ರಿಯೆ ನಡೆಸಿದ ವೈದ್ಯರ ತಂಡದ ಮುಖ್ಯಸ್ಥರಾಗಿದ್ದ ಡಾ ಎ ಗೋಲಾಕೃಷ್ಣ ಗೋಖಲೆ ಈ ಹೃದಯದ ಕಸಿ ಅಷ್ಟೊಂದು ಸುಲಭವಲ್ಲ ಎಂದು ತಿಳಿದುಕೊಂಡರು.

ದಾನಿಯ ಹೃದಯ ಸಾಮಾನ್ಯ ಮುಷ್ಠಿಯಷ್ಟು ದೊಡ್ಡದಿದ್ದರೆ, ರೋಗಿಯ ಹೃದಯ ಸಣ್ಣ ಫುಟ್ಬಾಲ್ ಗಾತ್ರದ್ದಾಗಿದ್ದುದರಿಂದ ದಾನಿಯ ಹೃದಯ ಆತನಿಗೆ ತೀರಾ ಚಿಕ್ಕದ್ದಾಗಿತ್ತು. ಇದರಿಂದಾಗಿ ರೋಗಿಯ ಶ್ವಾಸಕೋಶದ ರಕ್ತದೊತ್ತಡವೂ ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಅಧಿಕಗೊಂಡಿತ್ತು. ಆಗ ವೈದ್ಯರು ದಾನಿಯ ಹೃದಯವನ್ನು ರೋಗಿಯ ಹೃದಯದ ಬದಿಯಲ್ಲಿಯೇ ಇರಿಸಲು ನಿರ್ಧರಿಸಿದ್ದರು. ಈ ಪ್ರಕ್ರಿಯೆಯನ್ನು ‘ಪಿಗ್ಗಿಬ್ಯಾಕ್ ಹಾರ್ಟ್ ಟ್ರಾನ್ಸ್‌ಪ್ಲಾಂಟ್’ ಎನ್ನಲಾಗುತ್ತದೆ ಹಾಗೂ ಅದಕ್ಕೆ ವೈಫಲ್ಯಕ್ಕೊಳಗಾದ ಹೃದಯವನ್ನು ತೆಗೆಯುವ ಅಗತ್ಯವಿರುವುದಿಲ್ಲ. ಇಲ್ಲಿಯ ತನಕ ಇಂತಹ ಕೇವಲ 150 ಶಸ್ತ್ರಕ್ರಿಯೆ ನಡೆದಿರಬಹುದು ಎಂದು ಡಾ. ಗೋಖಲೆ ಹೇಳಿದ್ದಾರೆ. ಶಸ್ತ್ರಕ್ರಿಯೆ ಸುಮಾರು 7 ಗಂಟೆಗಳ ತನಕ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News