ಮಧುರೈಯಲ್ಲಿ ಕಮಲ್ ಹಾಸನ್ ಹೊಸ ಪಕ್ಷದ ಘೋಷಣೆಗೆ ಕ್ಷಣಗಣನೆ

Update: 2018-02-21 09:59 GMT

ಚೆನ್ನೈ, ಫೆ.21: ನಟ, ನಿರ್ದೇಶಕ ಕಮಲ್ ಹಾಸನ್ ತಮ್ಮ ಹೊಸ ರಾಜಕೀಯ ಪಕ್ಷವನ್ನು ಇಂದು ಮಧುರೈಯಲ್ಲಿ ಘೋಷಿಸಲಿದ್ದಾರೆ. ಅದೇ ಸಂದರ್ಭ ಅವರು ತಮ್ಮ ರಾಜ್ಯ ಪ್ರವಾಸವನ್ನೂ ಆರಂಭಿಸಲಿದ್ದಾರೆ.

ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸಿದ ನಂತರ ಪಕ್ಷದ ಧ್ವಜಾರೋಹಣ ನಡೆಸಲಿದ್ದಾರೆ. ಇಂದು ಸಂಜೆ ಈ ಸಮಾರಂಭ ನಡೆಯಲಿದ್ದು, ಈ ಸಂದರ್ಭ ಪಕ್ಷದ ಧ್ವಜದ ವಿವರಗಳನ್ನು ಹಾಗೂ ಅದರ ಹಿಂದಿನ ಪರಿಕಲ್ಪನೆಯನ್ನು ವಿವರಿಸಲಾಗುವುದು ಎಂದು ಕಮಲ್ ಹಾಸನ್ ತಿಳಿಸಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಸಂಜೆಯ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಇಂದು ಬೆಳಗ್ಗೆ ಕಮಲ್ ಹಾಸನ್ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ರಾಮೇಶ್ವರಂನಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರೊಡನೆ ಮಾತನಾಡಿದರು. ಕಲಾಂ ಅವರು ಕಲಿತ ಶಾಲೆಗೆ ಭೇಟಿ ನೀಡುವ ಉದ್ದೇಶ ಕಮಲ್ ಅವರಿಗಿತ್ತಾದರೂ ಶಾಲಾಡಳಿತ ಅನುಮತಿ ನೀಡದೇ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಬಿಟ್ಟರು. ಕಲಾಂ ಅವರು ಕಲಿತ ಶಾಲೆಗೆ ಭೇಟಿ ನೀಡುವ ತನ್ನ ಉದ್ದೇಶದ ಹಿಂದೆ ಯಾವುದೇ ರಾಜಕೀಯವಿರಲಿಲ್ಲ ಎಂದು ಕಮಲ್ ಸ್ಪಷ್ಟ ಪಡಿಸಿದ್ದಾರೆ. "ಅವರು ನನ್ನನ್ನು ತಡೆದಿದ್ದಾರೆ ನಿಜ. ಆದರೆ ಕಲಾಂ ಅವರ ಜೀವನದಿಂದ ನಾನು ಪಾಠ ಕಲಿಯುವುದನ್ನು ಅವರಿಂದ ತಡೆಯಲು ಸಾಧ್ಯವಿಲ್ಲ'' ಎಂದು ಕಮಲ್ ಹೇಳಿದ್ದಾರೆ.

ಕಮಲ್ ಹಾಸನ್ ಅವರನ್ನು ಸ್ವಾಗತಿಸಲು  ಮಧುರೈ ಸಜ್ಜಾಗಿದೆ. ತಮ್ಮ ಹುಟ್ಟೂರು ಪರಮಕುಡಿಯಿಂದ ಮಧುರೈಗೆ ಸಾಗುವ ಹಾದಿಯಲ್ಲಿ ನಟ ಹಲವಾರು ಸಭೆಗಳಲ್ಲಿ ಭಾಗವಹಿಸಲಿದ್ದು ಮಧುರೈಯಲ್ಲಿ ರ್ಯಾಲಿಯೊಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News