ನಲಪಾಡ್, ಸಹಚರರಿಗೆ 14 ದಿನಗಳ ನ್ಯಾಯಾಂಗ ಬಂಧನ

Update: 2018-02-21 13:52 GMT

ಬೆಂಗಳೂರು, ಫೆ.21: ಯುಬಿ ಸಿಟಿಯಲ್ಲಿ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬುಧವಾರ ಕೋರ್ಟ್ ಆದೇಶಿಸಿದೆ.

ಬುಧವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಪೊಲೀಸ್ ವಶದಲ್ಲಿದ್ದ ಮುಹಮ್ಮದ್ ನಲಪಾಡ್ ಸೇರಿ ಏಳು ಜನ ಆರೋಪಿಗಳನ್ನು ಇಲ್ಲಿನ ಕಬ್ಬನ್‌ಪಾರ್ಕ್ ಪೊಲೀಸರು, ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದರು. ಇದಾದ ಬಳಿಕ ಪೊಲೀಸರು, ನಗರದ 8ನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಜಾಮೀನು ಅರ್ಜಿಯ ವಿಚಾರಣೆ ವೇಳೆ ನಲಪಾಡ್ ಪರ ವಕೀಲರು, ಜಾಮೀನು ನೀಡುವಂತೆ ಮನವಿ ಮಾಡಿದ್ದರೂ, ಐಪಿಸಿ ಸೆಕ್ಷನ್ 307ರ ಅಡಿ ಮೊಕದ್ದಮೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಲು ನಿರಾಕರಿಸಿ, ಮಾರ್ಚ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು.

ಗಂಭೀರ ಪ್ರಕರಣ: ಈ ಸಂಬಂಧ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ಸುಂದರ್, ಪ್ರಕರಣ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಹಲ್ಲೆಗೊಳಗಾದ ಸಂತ್ರಸ್ತ ವಿದ್ವತ್‌ಗೆ ಮೂಳೆಗಳು ಮುರಿದಿವೆ. ಸಿಸಿಟಿವಿಯಲ್ಲಿ ಘಟನೆಯ ಸಂಪೂರ್ಣ ದೃಶ್ಯಾವಳಿ ದಾಖಲಾಗಿದೆ. ಆರೋಪಿಗಳು ಆಸ್ಪತ್ರೆಗೂ ತೆರಳಿದ್ದಾರೆ. ಇದು ನಿರ್ಭಯಾ ಪ್ರಕರಣದ ಮಾದರಿಯಂತಿದೆ ಎಂದು ಹೇಳಿದರು.

ಆರೋಪಿ ಪರ ವಕೀಲರು, ರಾಜಕೀಯ ಒತ್ತಡದಿಂದಾಗಿ ಕೊಲೆ ಯತ್ನ (307) ಮೊಕದ್ದಮೆ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಾಗಿ ಎಷ್ಟೋ ಗಂಟೆಗಳ ಬಳಿಕ ಮತ್ತೊಂದು ಸೆಕ್ಷನ್ ಸೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸದೇ ಬಾಹ್ಯ ಒತ್ತಡಕ್ಕೆ ಮಣಿದು ಈ ಪ್ರಕರಣ ದಾಖಲಿಸಿರುವುದು ತಪ್ಪುಎಂದು ಪೊಲೀಸರ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.

ಪರಪ್ಪನ ಅಗ್ರಹಾರ
ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶದ ಕೆಲವೇ ಕ್ಷಣಗಳಲ್ಲಿ ಮುಹಮ್ಮದ್ ನಲಪಾಡ್ ಸೇರಿ ಏಳು ಜನ ಆರೋಪಿಗಳನ್ನು ಪೊಲೀಸರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ದರು. ಬುಧವಾರ ಸಂಜೆ 6:30 ಸುಮಾರಿಗೆ ಪರಪ್ಪನ ಅಗ್ರಹಾರದ ಒಳಗಡೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ವಿಚಾರಣಾಧೀನ ಕೈದಿಗಳ ಕೊಠಡಿಗೆ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.

ಆರೋಪಿಗಳು ಹಿನ್ನೆಲೆ
* ಮುಹಮ್ಮದ್ ನಲಪಾಡ್, ಶಾಸಕನ ಪುತ್ರ, ನಲಪಾಡ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಅಶೋಕನಗರ ನಿವಾಸಿ.
* ಅರುಣ್ ಬಾಬು, ಆಸ್ಟಿನ್ ಟೌನ್ ನಿವಾಸಿ. ಡಿಪ್ಲೊಮಾ ಇನ್ ಸಾಫ್ಟ್‌ವೇರ್ ಪದವೀಧರ
* ಮಂಜುನಾಥ್, ನಲಪಾಡ್ ಕಾರು ಚಾಲಕ, ಬನ್ನೇರುಘಟ್ಟದ ನೇಕಾರರ ಕಾಲನಿ ನಿವಾಸಿ.
* ಮುಹಮ್ಮದ್ ಆಶ್ರಫ್, ಆಸ್ಟಿನ್ ಟೌನ್ ನಿವಾಸಿ. ಬಿಕಾಂ ಪದವೀಧರ.
* ಬಾಲಕೃಷ್ಣ, ಚಾಲಕ,
* ಅಭಿಷೇಕ್, ರಿಚ್ ಮಂಡ್‌ಟೌನ್ ನಿವಾಸಿ, ಬಿಬಿಎ ಪದವೀಧರ.
 * ನಫೀ ಮುಹಮ್ಮದ್ ನಾಸೀರ್, ರಿಚ್ಮಂಡ್‌ಟೌನ್ ನಿವಾಸಿ. ಬಿಬಿಎಂ ಪದವೀಧರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News