ಶಿವಮೊಗ್ಗ: ಅಂಗವಿಕಲ ಸ್ನೇಹಿ ಮತಗಟ್ಟೆಗಳ ಸ್ಥಾಪನೆಗೆ ಕ್ರಮ; ಜಿಲ್ಲಾಧಿಕಾರಿ ಡಾ.ಲೋಕೇಶ್

Update: 2018-02-21 12:23 GMT

ಶಿವಮೊಗ್ಗ, ಫೆ. 21: ಈ ಬಾರಿ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಅಂಗವಿಕಲ ಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳನ್ನು ಗುರುತಿಸಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು
ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಇದುವರೆಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಅರ್ಹ ಅಂಗವಿಕಲರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು. ಬಳಿಕ ಅಂಗವಿಕಲತೆ ವಿಧವನ್ನು ಅನುಸರಿಸಿ ಪಟ್ಟಿ ಸಿದ್ಧಪಡಿಸಬೇಕು. ಚುನಾವಣಾ ಮತಗಟ್ಟೆವಾರು ಅಂಗವಿಕಲ ಮತದಾರರ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಬೇಕು. ಮತಗಟ್ಟೆವಾರು ಆನ್‍ಲೈನ್ ಮ್ಯಾಪಿಂಗ್ ಮಾಡುವ ಸಂದರ್ಭದಲ್ಲಿ ಅಂಗವಿಕಲ ಮತದಾರರು ಇರುವ ಸ್ಥಳವನ್ನು ಪ್ರತ್ಯೇಕವಾಗಿ ಕಾಣುವಂತೆ ನಮೂದಿಸಬೇಕು. ಮತದಾನ ಪ್ರಕ್ರಿಯೆಯಲ್ಲಿ ಅಂಗವಿಕಲರು ಭಾಗವಹಿಸುವಂತೆ ಅವರನ್ನು ಪ್ರೇರೇಪಿಸಬೇಕು. ಇದಕ್ಕಾಗಿ ಅವರಲ್ಲಿಯೇ ಕೆಲವರಿಗೆ ತರಬೇತಿ ನೀಡಿ ಸಜ್ಜುಗೊಳಿಸಬೇಕು. ತಾಲೂಕು ಮಟ್ಟದಲ್ಲಿ ಅಂಗವಿಕಲರಿಗಾಗಿ ಚುನಾವಣಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಅವರು ಸೂಚನೆ ನೀಡಿದರು.

ಅಂಗವಿಕಲರ ಮತಗಟ್ಟೆವಾರು ಪಟ್ಟಿಯನ್ನು ಅನುಸರಿಸಿ ಆಯಾ ಮತಗಟ್ಟೆಗಳಲ್ಲಿ ರ್ಯಾಂಪ್, ಗಾಲಿಕುರ್ಚಿ, ಬ್ರೈಲ್ ಸೂಚನಾ ಫಲಕಗಳು, ಅಗತ್ಯ ಬಿದ್ದ ಕಡೆಗಳಲ್ಲಿ ಸಹಾಯಕರು, ವಿಶ್ರಾಂತಿ ಕೊಠಡಿಗಳ ವ್ಯವಸ್ಥೆಯನ್ನು ಮಾಡಬೇಕು. ರ್ಯಾಂಪ್‍ಗಳು ಹೆಸರಿಗೆ ಮಾತ್ರವಿರದೆ ಅಂಗವಿಕಲರು ಯಾರದ್ದೇ ಸಹಾಯ ಅಗತ್ಯವಿಲ್ಲದೆ ನೇರವಾಗಿ ಕೊಠಡಿ ಪ್ರವೇಶಿಸುವಂತಿರಬೇಕು. ಮತದಾನ ಸಂದರ್ಭದಲ್ಲಿ ಅಂಗವಿಕಲರನ್ನು ಸರತಿಯಲ್ಲಿ ನಿಲ್ಲಿಸದೆ ಪ್ರಥಮ ಆದ್ಯತೆ ನೀಡಬೇಕು. ಅಂಗವಿಕಲರು ಗೌರವಯುತವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಯಾವುದೇ ಚ್ಯುತಿ ಬಾರದಂತೆ ಮಾಡಬೇಕು ಎಂದು ಸ್ಪಷ್ಟಪಡಿಸಿದರು.

ತಹಶೀಲ್ದಾರ್ ಗಳಿಗೆ ಸೂಚನೆ: ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯ ಕನಿಷ್ಟ 4 ಮತಗಟ್ಟೆಗಳಿಗೆ ದಿನನಿತ್ಯ ಭೇಟಿ ನೀಡಿ ಅಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿ ಸಚಿತ್ರ ವರದಿ ಸಲ್ಲಿಸಬೇಕು. ಇದಕ್ಕಾಗಿ ವಾಟ್ಸಪ್ ಗ್ರೂಪ್ ಮಾಡಲಾಗಿದ್ದು, ಇದರಲ್ಲಿ ಪ್ರತಿದಿನ ಛಾಯಾಚಿತ್ರವನ್ನು ಅಪ್‍ಲೋಡ್ ಮಾಡಬೇಕು. ಪ್ರತಿ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು, ವಿದ್ಯುತ್, ರ್ಯಾಂಪ್ ಸೇರಿದಂತೆ 7 ಸೌಲಭ್ಯಗಳನ್ನು ಕಡ್ಡಾಯವಾಗಿ ಖಾತ್ರಿಪಡಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಇದರಲ್ಲಿ ಲೋಪ ಉಂಟಾದರೆ ಆಯಾ ಮತಗಟ್ಟೆ ಅಧಿಕಾರಿ, ಎ.ಆರ್.ಓ ಮತ್ತು ಆರ್ ಒ ಗಳನ್ನು ನೇರವಾಗಿ ಹೊಣೆಗಾರರಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News