ಮಡಿಕೇರಿ: ಕೊಡವ ಭಾಷೆಗೆ 8ನೇ ಪರಿಚ್ಛೇದದ ಸ್ಥಾನಮಾನಕ್ಕೆ ಆಗ್ರಹಿಸಿ ಸಿಎನ್‍ಸಿ ಪ್ರತಿಭಟನೆ

Update: 2018-02-21 18:28 GMT

ಮಡಿಕೇರಿ, ಫೆ.21: ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಮತ್ತು ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯ ಸದಸ್ಯರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಅಂತರ ರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳಿಸಬೇಕು, ಕೊಡವ ತಕ್ಕನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು. ಪ್ರತೀ ವರ್ಷ ಆಕ್ಸ್ ಫರ್ಡ್ ಡಿಕ್ಷನರಿ ಜಗತ್ತಿನ ವಿವಿಧ ಭಾಷೆಗಳ 15 ಸಾವಿರ ಪದಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದ್ದು ಈ ಡಿಕ್ಷನರಿಯಲ್ಲಿ ಕೊಡವ ಭಾಷೆಯ ಪದಗಳನ್ನು ಸೇರಿಸುವುದರ ಮೂಲಕ ಕೊಡವ ಭಾಷೆ ಮತ್ತು ಡಿಕ್ಷನರಿಗಳೆರಡನ್ನೂ ಸಮೃದ್ಧ ಮತ್ತು ಶ್ರೀಮಂತಗೊಳಿಸಲು ಸರಕಾರ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಲಾಯಿತು.

ವಿಶ್ವ ವಿಖ್ಯಾತ ತತ್ವಶಾಸ್ತ್ರಜ್ಞ ಜಾರ್ಜ್ ಬರ್ನಾಡ್ ಶಾ ಪ್ರಕಾರ ಒಂದು ಜನಾಂಗ/ಬುಡಕಟ್ಟನ್ನು ನಿರ್ಣಾಮ ಮಾಡಬೇಕಾದಲ್ಲಿ ಆಡಳಿತಗಾರರು ಆ ಜನಾಂಗದ ಭಾಷೆ ಮತ್ತು ಅವರ ಭೂಮಿಯನ್ನು ನಾಶ ಮಾಡಬೇಕೆಂದಿದೆ. ಅದೇ ಪ್ರಕಾರ ಕೊಡವ ಜನಾಂಗವನ್ನು ಅಳಿಸಿ ಹಾಕಲು ಅವರ ಭಾಷೆ ಕೊಡವ ತಕ್ಕ್, ಅವರ ನೆಲೆ ಆವಾಸ ಸ್ಥಾನ ಕೊಡವ ಲ್ಯಾಂಡ್ ಮತ್ತು ಅವರ ವಂಶ ಪಾರಂಪರ್ಯ ಕೃಷಿ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರಗಳು ಎಲ್ಲಾ ತೆರನಾದ  ಕುಕೃತ್ಯವನ್ನು ನಡೆಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ಹಿನ್ನೆಲೆಯಲ್ಲಿ ಕೊಡವರ ಭಾಷೆ ಉಳಿಯಬೇಕು ಮತ್ತವರ ಭೂಮಿಯೂ ಉಳಿಯಬೇಕಾದರೆ ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಗೆ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು ಎಂದು ಆಗ್ರಹಿಸಿದರು.

ಕೊಡವ ಭಾಷೆಯನ್ನು ಆಡಳಿತ ಭಾಷೆಯಾಗಿ ಸಂವಿಧಾನದ 350ಬಿ ವಿಧಿಯಡಿ ಪರಿಗಣಿಸಬೇಕು. ಕೊಡವ ತಕ್ಕನ್ನು ಸಂವಿಧಾನದ 347ನೇ ವಿಧಿಯ ಪ್ರಕಾರ ಪಠ್ಯ ಕ್ರಮದಲ್ಲಿ ಸೇರಿಸಬೇಕು. ಕೊಂಕಣಿ ಮತ್ತು ಫ್ರೆಂಚ್ ಭಾಷೆಯ ಮಾದರಿಯಲ್ಲಿ ರಾಜ್ಯದ ಎರಡನೇ ಭಾಷೆಯಾಗಿ ಕೊಡವ ಭಾಷೆಯನ್ನು ಪರಿಗಣಿಸಬೇಕು. ಒಂದೊಮ್ಮೆ ಕೊಡಗು ರಾಜ್ಯವಾಗಿದ್ದ ಕೊಡವರ ಜನ್ಮ ಭೂಮಿ ಕರ್ನಾಟಕಕ್ಕೆ ಸೇರಿದ ಮೇಲೆ ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿ ಹೋದ ಕೊಡವರಿಗೆ ಸಂವಿಧಾನದ 7ನೇ ತಿದ್ದುಪಡಿ ಅಡಿಯಲ್ಲಿ 1956 ರ ರಾಜ್ಯ ಪುನರ್ಘಟನಾ ಕಾಯ್ದೆ ಅನ್ವಯ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ವಿಶೇಷ ಮೀಸಲಾತಿ ನೀಡಬೇಕಾಗಿತ್ತು. ಆದರೆ ನಮ್ಮನ್ನು ವಂಚಿಸಿ ಅನ್ಯಾಯ ಮಾಡಲಾಗಿದ್ದು, ಆದ್ದರಿಂದ ಕೊಡವರನ್ನು ಭಾಷಾ ಅಲ್ಪಸಂಖ್ಯಾತರೆಂದು ಪರಿಗಣಿಸಿ ಸಂವಿಧಾನದ 29 ಮತ್ತು 30 ರನ್ವಯ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ವಿಶೇಷ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕನ್ನಡೀಕರಣಗೊಂಡಿರುವ ಕೊಡಗಿನ ಮೂಲ ಗ್ರಾಮಗಳ ಜನಪದೀಯ ಹೆಸರುಗಳನ್ನು ಮತ್ತೆ ಅದೇ ಜನಪದೀಯ ಹೆಸರಿನಿಂದಲೇ ದಾಖಲಿಸಬೇಕು. ಕೊಡವ ಅಲ್ಪಸಂಖ್ಯಾತ ಹಬ್ಬಗಳಾದ ಪುತ್ತರಿ, ಕೈಲ್‍ಪೊವ್ದ್, ಎಡಮ್ಯಾರ್, ಕಕ್ಕಡ ಪದ್‍ನಟ್, ಕಾರಣಂಗೊಡ್ಪೊ ಮತ್ತು ಕಾವೇರಿ ಚಂಗ್ರಾಂದಿ ಹಬ್ಬಗಳಿಗೆ ಅಧಿಕೃತ ರಜೆ ಘೋಷಿಸಬೇಕು. ಕೊಡಗರು ಎಂದು ಕಾಗುಣಿತ ದೋಷದಿಂದ ವಿರೂಪಗೊಂಡಿರುವ ‘ಕೊಡವ’ ಸಮುದಾಯ ಸೂಚಕ ಹೆಸರನ್ನು ಕೊಡಗರು ಬದಲಿಗೆ ಕೊಡವ ಎಂದು ದಾಖಲಿಸಬೇಕೆಂದು ಹೈಕೋರ್ಟ್‍ನ ಆದೇಶವಿದ್ದು, ಅದರಂತೆ ಕೂಡಲೇ ‘ಕೊಡವ’ ಎಂದು  ಗೆಝೆಟ್  ನೋಟಿಫಿಕೇಷನ್ ಹೊರಡಿಸಬೇಕು. ಕೊಡವ ಭಾಷೆಯ ವಾರ್ತಾ ಪ್ರಸಾರವನ್ನು ದೂರದರ್ಶನ (ಡಿ.ಡಿ 1) ಮತ್ತು ಆಕಾಶವಾಣಿಯಲ್ಲಿ ಇತರೆ ಪ್ರಮುಖ ಭಾಷೆಗಳಂತೆ ನಿರಂತರ ಬಿತ್ತರಿಸಬೇಕು. ಕೊಡವ ತಕ್ಕ್ ನ ವಿಶೇಷ ಅಧ್ಯಾಯವನ್ನು ಪ್ರಸಾರ ಭಾರತಿಯಲ್ಲಿ ಪ್ರಾರಂಭಿಸಬೇಕು. ಬಿಬಿಸಿಯಲ್ಲಿ ಪಸ್ತೂನ್, ಖುರ್ದಿ ಭಾಷೆಗಳ ವಿಶೇಷ ಅಧ್ಯಾಯ ಪ್ರಾರಂಭಿಸಿದಂತೆ ಕೊಡವ ತಕ್ಕ್‍ನ ಅಧ್ಯಾಯ ಪ್ರಾರಂಭಿಸಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟ್‍ನಲ್ಲಿ ಕೊಡವ ಬುಡಕಟ್ಟು ಲೋಕದ ಸಾಂಸ್ಕೃತಿಕ ಅನನ್ಯತೆ ಮತ್ತು ಪಾರಂಪರಿಕ ಅಪೂರ್ವತೆಯನ್ನು ಅಧಿಕೃತವಾಗಿ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಈ ಸಂದರ್ಭ ಆಗ್ರಹಿಸಿದರು.

ಈ ಸಂಬಂಧ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಮಂತ್ರಿ, ಅರ್ಥಶಾಸ್ತ್ರಜ್ಞ ಹಾಗೂ ರಾಜ್ಯಸಭಾ ಸದಸ್ಯ ಡಾ|| ಸುಬ್ರಮಣಿಯನ್ ಸ್ವಾಮಿ, ರಾಜ್ಯಪಾಲ ವಾಜುಬಾಯಿ ವಾಲ, ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್, ಕೇಂದ್ರ ಸಂಸ್ಕೃತಿ ಮಂತ್ರಿ, ಕೇಂದ್ರ ಮಾನವ ಸಂಪನ್ಮೂಲ ಮಂತ್ರಿ , ಕೇಂದ್ರ ಅಲ್ಪಸಂಖ್ಯಾತ ಇಲಾಖಾ ಮಂತ್ರಿ, ಕೇಂದ್ರ ಬುಡಕಟ್ಟು ಮಂತ್ರಿ, ಕೇಂದ್ರ ಗೃಹಖಾತೆ ಸಹಾಯಕ ಮಂತ್ರಿ, ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟಾನಿಯೋ ಗುಟರೆಸ್, ಯು.ಎನ್.ಹೆಚ್.ಆರ್.ಸಿ ಹೈ ಕಮಿಷ್‍ನರ್ ಪ್ರಿನ್ಸ್ ಝಾಯಿದ್ ರಾದ್ ಆಲ್ ಹುಸೇನ್, ವಿಶ್ವ ಸಂಸ್ಥೆಯ ಯುನೆಸ್ಕೋದ ನಿರ್ದೇಶಕಿ ಐರಿನಾ ಬೊಕಾವೊ ಮತ್ತು ಭಾರತೀಯ ಭಾಷಾ ಸಂಸ್ಥಾನ (ಸಿ.ಐ.ಎಲ್)ದ ನಿರ್ದೇಶಕರಿಗೆ ಜ್ಞಾಪನಾಪತ್ರ ಸಲ್ಲಿಸಲಾಯಿತು.   

ಸತ್ಯಾಗ್ರಹದಲ್ಲಿ  ಸಂಘಟನೆಯ ಪ್ರಮುಖರದ ಅಜ್ಜಿಕುಟ್ಟಿರ ಲೋಕೇಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಅಪ್ಪಾರಂಡ ಪ್ರಸಾದ್, ಬಾಚಮಂಡ ಕಸ್ತೂರಿ, ಬಾಚಮಂಡ ಬೆಲ್ಲು, ಅರೆಯಡ ಗಿರೀಶ್, ಮಂದಪಂಡ ಮನೋಜ್, ಬೇಪಡಿಯಂಡ ಬಿದ್ದಪ್ಪ, ನಂದಿನೆರವಂಡ ವಿಜು, ಅಪ್ಪಚ್ಚಿರ ರಮ್ಮಿ ನಾಣಯ್ಯ, ಬಡುವಂಡ ವಿಜಯ, ಕಿರಿಯಮಾಡ ಶರೀನ್, ಕಲಿಯಂಡ ಕಮಲಾ, ಚಂಬಂಡ ಜನತ್, ಬಡುವಂಡ ಅರುಣ, ಬೊಟ್ಟಂಗಡ ಸವಿತಾ, ಪುದ್ಯೊಕ್ಕಡ ಪೊನ್ನಣ್ಣ, ಬೊಟ್ಟಂಗಡ ಗಿರೀಶ್, ಮದ್ದಂಡ ದಮಯಂತಿ, ಮದ್ದಂಡ ಕಾವೇರಿ, ಅಪ್ಪೆಂಗಡ ಮಾಲೆ, ಅಪ್ಪಚ್ಚಿರ ಶರಿನ್, ಬೇಪಡಿಯಂಡ ದಿನು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಾ ನಂಜುಂಡೇಗೌಡ ಮನವಿ ಪತ್ರ ಸ್ವೀಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News