ಕೇಂದ್ರ ಬಜೆಟ್-ಪ್ರಮುಖ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು

Update: 2018-02-21 18:49 GMT

ಭಾಗ-2

ತಪ್ಪು ಊಹನೆ

ಸಂಪನ್ಮೂಲ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಸರಕಾರ ತಪ್ಪು ಊಹನೆಗಳಿಗೆ ಅಂಟಿಕೊಂಡಂತೆ ಕಾಣುತ್ತದೆ. ತೆರಿಗೆ ಸಂಗ್ರಹ ಬಜೆಟ್ ಅಂದಾಜಿನಂತೆ ಆಗಬೇಕಾದರೆ ಪ್ರಗತಿವಾದದ (ಜಿಡಿಪಿ) ಅದರ ಶಿಖರವನ್ನು ತಲುಪಬೇಕು. ಪ್ರಗತಿಯ ದರ 2014ರ ನಂತರದ ಅವಧಿಯ ಶಿಖರವನ್ನೇ ತಲುಪಿ ಅದರ ಫಲವಾಗಿ ನೇರ ಮತ್ತು ಪರೋಕ್ಷ ತೆರಿಗೆಗಳ ಸಂಗ್ರಹ ಗಮನಾರ್ಹವಾಗಿ ಹೆಚ್ಚಬಹುದೆಂಬ ನಂಬಿಕೆಯ ಮೇಲೆ ಈ ಸಲದ ಬಜೆಟ್‌ನಲ್ಲಿ ನಮೂದಿಸಿದ ವೆಚ್ಚಗಳಾಗಿ ನಿಂತಿವೆ. ಆದರೆ ಈ ವರ್ಷದ ಈವರೆವಿಗಿನ ಪರಿಸ್ಥಿತಿಯನ್ನು ಗಮನಿಸಿದಾಗ ಅಂತಹ ದಾಖಲೆ ದರದ ಪ್ರಗತಿಯಾಗುವುದು ಸಂಶಯ, ಸರಕಾರದ ಊಹನೆ ಸರಿಯಾಗಿ ಅಪೇಕ್ಷಿತ ದರದಲ್ಲಿ ಪ್ರಗತಿಯ ದರ ಸಾಧಿಸಲ್ಪಡದಿದ್ದರೆ, ನಮೂದಿಸಿದ ವೆಚ್ಚಗಳಿಗೆ ಬೇಕಾದ ಹಣ ಲಭ್ಯವಾಗುವುದು ಕಷ್ಟ. ಅಂತಹ ಪರಿಸ್ಥಿತಿಯಲ್ಲಿ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ಕನಸಾಗಿಯೇ ಉಳಿದೀತು.
 ಇದೊಂದು ಈ ಸಲದ ಬಜೆಟ್‌ನ ಪ್ರಮುಖ ನ್ಯೂನತೆ ಹಾಗೂ ಋಣಾತ್ಮಕ ಅಂಶವಾಗಿದೆ.

ವಿತ್ತೀಯ ಬಲವರ್ಧನೆಗೆ ವಿರಾಮ:
ಈ ಸಲದ ಬಜೆಟ್‌ನ ಮತ್ತೊಂದು ಪ್ರಮುಖ ಋಣಾತ್ಮಕ ಅಂಶ ಅಥವಾ ವಿಫಲತೆಯೆಂದರೆ ವಿತ್ತೀಯ ಕೊರತೆಯ ಗುರಿಯನ್ನು ಮೀರಿರುವುದು. ಈ ವರ್ಷದ ವಿತ್ತೀಯ ಕೊರತೆಯ ಗುರಿಯು ಒಟ್ಟು ಆಂತರಿಕ ಉತ್ಪತ್ತಿಯ ಶೇ.3.2 ಆಗಿತ್ತು. ಅದನ್ನು ಶೇ. 3.5ಗೆ ಏರಿಸಲಾಗಿದೆ. ವಿತ್ತೀಯ ಬಲವರ್ಧನೆಗೆ ಸಂಬಂಧಿಸಿದ ರಸ್ತೆ ಭೂಪಟವನ್ನು ಸರಕಾರ ಬದಲಿಸಿದೆ ಅದಕ್ಕೆ ವಿರಾಮ - ಇದರ ಫಲವಾಗಿ ಮುಂದಿನ 3 ವರ್ಷಗಳ ವಿತ್ತೀಯ ಕೊರತೆಯ ಗುರಿಗಳು ಈ ರೀತಿ ಬದಲಾಗಿವೆ.
2018 - ಶೇ. 19-3.3, 2019-ಶೇ. 20-3., 2020 - ಶೇ. 21- 3
 ಎನ್.ಕೆ.ಸಿಂಗ್ ಸಮಿತಿಯ ಶಿಫಾರಸಿನಂತೆ 2022- 23ಕ್ಕೆ ವಿತ್ತೀಯ ಕೊರತೆಯ ಗುರಿ 2.5ಕ್ಕೆ ಸೀಮಿತಗೊಳ್ಳಬೇಕು. ವಿತ್ತೀಯ ಕೊರತೆಯ ಹೆಚ್ಚಳ ಮತ್ತು ವಿತ್ತೀಯ ಬಲವರ್ಧನೆಯಲ್ಲಿನ ವಿಫಲತೆ, ದೇಶದಲ್ಲಿ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗುವ ಭಯವಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಹೆಚ್ಚಿಸಬಹುದು. ಇದರಿಂದ ಸರಕಾರದ ಸಾಲವೆತ್ತುವ ಕಾರ್ಯಕ್ರಮಕ್ಕೆ ಪ್ರತಿಕೂಲ ಪರಿಸ್ಥಿತಿಯು ನಿರ್ಮಾಣವಾಗಬಹುದು. ಬಡ್ಡಿದರದ ಏರಿಕೆಯು ಆರ್ಥಿಕ ಪ್ರಗತಿ ಪ್ರಕ್ರಿಯೆಗೆ ಅಡ್ಡಿಯನ್ನುಂಟುಮಾಡಿ ಒಟ್ಟಾರೆ ಆರ್ಥಿಕ ಪ್ರಗತಿಗೆ ಹಿನ್ನಡೆಯುಂಟಾಗುವ ಭಯವಿದೆ.

ಬಂಡವಾಳ ಹೂಡಿಕೆಗೆ ಅಡೆತಡೆ ಹೆಚ್ಚಳ:
 ಈ ಸಲದ ಬಜೆಟ್‌ನ ಮತ್ತೊಂದು ಋಣಾತ್ಮಕ ಅಂಶ ದೀರ್ಘಾವಧಿ ಬಂಡವಾಳ ಲಾಭ ತೆರಿಗೆಯ ಪುನರಾರಂಭ. ರೂ. 5ಲಕ್ಷ ಕ್ಕಿಂತ ಹೆಚ್ಚಿನ ದೀರ್ಘಾವಧಿ ಬಂಡವಾಳ ಲಾಭದ ಮೇಲೆ ಶೇ. 10ರ ತೆರಿಗೆಯನ್ನು ವಿಧಿಸಲಾಗಿದೆ. ಹಾಗೆಯೇ ಶೇರು ಹೂಡಿಕೆಯ ಪರಸ್ಪರ ನಿಧಿಗಳ ಹಂಚಿಕೆಯಾದ ವರಮಾನದ ಮೇಲೆ ಶೇ.10ರ ತೆರಿಗೆ ವಿಧಿಸಲಾಗಿದೆ. ಈ ತೆರಿಗೆಯ ಪುನರಾರಂಭ ಈಗಿನ ಪರಿಸ್ಥಿತಿಯಲ್ಲಿ ಆತಂಕವನ್ನುಂಟುಮಾಡಿದೆ. ಭಾರತದಲ್ಲಿ ಖಾಸಗಿ ಹೂಡಿಕೆಗಳು ಹೆಚ್ಚುವಲ್ಲಿ ಹೂಡಿಕೆ ಮತ್ತು ಒಟ್ಟು ಆಂತರಿಕ ಉತ್ಪತ್ತಿಯ ನಡುವಿನ ನಿಷ್ಪತ್ತಿ (ಐ್ಞಛಿಠಿಞಛ್ಞಿಠಿ ಎಈ ್ಟಠಿಜಿಟ) ಬಹಳ ಕಡಿಮೆಯಿದೆ ಮತ್ತು ಏರುತ್ತಿಲ್ಲ, ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಊರ್ಜಿತ್ ಪಟೇಲ್ ಹೇಳಿದಂತೆ ಐದು ವಿವಿಧ ತೆರಿಗೆಗಳು ಹೂಡಿಕೆಗಳನ್ನು ತಡೆಯುತ್ತಿವೆ. ಸರಕಾರಕ್ಕೆ ದೀರ್ಘಾವಧಿ ಬಂಡವಾಳ ಲಾಭ ತೆರಿಗೆಯಿಂದ ರೂ.20,000 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದೆ. ಇದು ಸಾಧ್ಯವಾಗುವುದು ಕಷ್ಟ. ಮೇಲಿನ ತೆರಿಗೆಯಲ್ಲದೆ ಸರಕಾರ ಹೊಸತಾಗಿ ಶೇ. 4ರ ಆರೋಗ್ಯ ಮತ್ತು ಶಿಕ್ಷಣ ಸೆಸ್‌ನ್ನು ಶೇರು ಮಾರುಕಟ್ಟೆ ವ್ಯವಹಾರದ ಮೇಲೆ ಹೇರಲು ನಿರ್ಧರಿಸಿದೆ. ಅದಲ್ಲದೆ ಜಿಎಸ್‌ಟಿ ಪ್ರತೀ ತೆರಿಗೆಯ ಮೇಲೂ ಇದೆ. ಇವೆಲ್ಲ ಹೂಡಿಕೆಯನ್ನು ತಡೆಯುವುದರಲ್ಲಿ ಸಂಶಯವಿಲ್ಲ. ಇದರ ಫಲವಾಗಿ ಶೇರು ಮಾರುಕಟ್ಟೆಗೆ ಬಂಡವಾಳದ ಒಳ ಹರಿವು ಕುಗ್ಗಬಹುದು.

ಉದ್ಯೋಗ ಸೃಷ್ಟಿಯ ಅವಗಣನೆ:

 ಈಗಿನ ಕೆಂದ್ರ ಸರಕಾರದ ಬಹುದೊಡ್ಡ ವಿಫಲತೆಯೆಂದರೆ ಉದ್ಯೋಗ ಸೃಷ್ಟಿ ಸಾಧ್ಯವಾಗದಿರುವುದು. ಅಧಿಕಾರಕ್ಕೆ ಮುಂಚೆ ನೀಡಿದ ಭರವಸೆಯಂತೆ ಉದ್ಯೋಗ ಸೃಷ್ಟಿಗೆ ಸರಕಾರ ಮುಂದಾಗಲಿಲ್ಲ. ಈ ಸಲದ ಬಜೆಟ್‌ನಲ್ಲಿ ಕೂಡ ಉದ್ಯೋಗ ಸೃಷ್ಟಿಯ ಅವಗಣನೆಯಾಗಿದೆ. ಉದ್ಯೋಗ ಸೃಷ್ಟಿಯನ್ನು ಪ್ರೋತ್ಸಾಹಿಸಿ ಹೆಚ್ಚಿಸುವ ಯಾವ ಸೃಜನಶೀಲ ಕ್ರಮವನ್ನೂ ಬಜೆಟ್‌ನಲ್ಲಿ ಅಳವಡಿಸಿಕೊಂಡಿಲ್ಲ. ಇದು ಆತಂಕದ ವಿಷಯ. ಈ ಸಲದ ಬಜೆಟ್‌ನಲ್ಲಿ ಆರೋಗ್ಯಕ್ಷೇತ್ರ, ಕೃಷಿ, ಗ್ರಾಮೀಣ ಮೂಲ ಸ್ಥಾವರ ಅಭಿವೃದ್ಧಿ ಸಣ್ಣ ಮಧ್ಯಮ ಮತ್ತು ಉದ್ದಿಮೆಗಳ ಅಭಿವೃದ್ಧಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹಲವು ಉಪಯುಕ್ತ ಕಾರ್ಯಕ್ರಮಗಳಿವೆ ನಿಜ. ಆದರೆ ಅವುಗಳ ಅನುಷ್ಠಾನಕ್ಕೆ ಬೇಕಾದ ನಿಧಿಗಳನ್ನು ಒಟ್ಟುಗೂಡಿಸುವ ಸವಾಲು ಬಹಳ ದೊಡ್ಡದಿದೆ. ಗುರಿಯಂತೆ ಒಟ್ಟು ಆಂತರಿಕ ಉತ್ಪನ್ನ ಹೆಚ್ಚಿದರೆ ಮಾತ್ರ ತೆರಿಗೆ ಸಂಗ್ರಹ ಹೆಚ್ಚಿ ಬಜೆಟ್‌ನಲ್ಲಿ ನಮೂದಿಸಿದ ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯ. ತಪ್ಪು ಊಹನೆ ಆಧಾರಿತ ಸಂಪನ್ಮೂಲ ಸಂಗ್ರಹ ಯೋಜನೆಯ ಫಲವಾಗಿ ಬೇಕಾದ ನಿಧಿಗಳನ್ನು ಒಟ್ಟುಗೂಡಿಸಿ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ಸಾಧ್ಯವೇ ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ.

Writer - ಡಾ. ಕೆ.ಕೆ. ಅಮ್ಮಣ್ಣಾಯ

contributor

Editor - ಡಾ. ಕೆ.ಕೆ. ಅಮ್ಮಣ್ಣಾಯ

contributor

Similar News