ಬೆಂಕಿ ಹಚ್ಚಲು ಬಂದು ಸುಳ್ಳು ಹೇಳಿದ ಅಮಿತ್ ಶಾ

Update: 2018-02-21 18:59 GMT

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸಬೇಕೆಂದು ಬಿಜೆಪಿ ನಾಯಕರು ಹಠ ತೊಟ್ಟಿದ್ದಾರೆ. ಕರ್ನಾಟಕದಲ್ಲಿ ಪಕ್ಷವನ್ನು ಗೆಲ್ಲಿಸಲು ಪ್ರಚಾರಕ್ಕೆ ಬರುತ್ತಿರುವ ಈ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬೆಂಕಿ ಹಚ್ಚಲು ಬೆಂಕಿ ಪೊಟ್ಟಣ ಹಿಡಿದುಕೊಂಡೇ ಬರುತ್ತಿದ್ದಾರೆ. ಇದು ವಿರೋಧಿಗಳು ಮಾಡುತ್ತಿರುವ ಆರೋಪವಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ವತಃ ಇದನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕ ಹಾರಿಸ್ ಮಗ ಮುಹಮ್ಮದ್ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್ ಎಂಬ ಯುವಕ ಬಿಜೆಪಿಯ ಕಾರ್ಯಕರ್ತ ಎಂದು ಅಮಿತ್ ಶಾ ಮೊದಲು ಹೇಳಿ, ತಾನು ಮುಂಚೆ ಹೇಳಿದ್ದು ಸುಳ್ಳು ಎಂದು ನಂತರ ಒಪ್ಪಿಕೊಂಡಿದ್ದಾರೆ. ಅಮಿತ್ ಶಾ ಮುಂಜಾನೆ ನೀಡಿದ ಹೇಳಿಕೆಯಿಂದ ಜನ ಪ್ರಚೋದಿತರಾಗಿ ಎಲ್ಲಿಯಾದರೂ ಹಿಂಸಾಚಾರಕ್ಕೆ ಇಳಿದಿದ್ದರೆ ಯಾರು ಹೊಣೆ? ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಅವರು ಯಾಕೆ ಈ ರೀತಿ ಸುಳ್ಳು ಹೇಳಿದರು. ರಾಜಕೀಯ ಸ್ವಾರ್ಥ ಸಾಧನೆಗಾಗಿ ಸುಳ್ಳು ಹೇಳುವುದು ಅಮಿತ್ ಶಾ ಅವರಿಗೆ ಹೊಸದಲ್ಲ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇದೇ ರೀತಿ ಸುಳ್ಳು ವದಂತಿಯನ್ನು ಹಬ್ಬಿಸಿ ಆ ರಾಜ್ಯದಲ್ಲಿ ವ್ಯಾಪಕ ಕೋಮುಗಲಭೆಗೆ ಅವರು ಕಾರಣರಾಗಿದ್ದರು.

ಮುಝಫ್ಫರ್‌ನಗರದಲ್ಲಿ ವ್ಯಾಪಕ ಹಿಂಸಾಚಾರ ನಡೆದು ಜನ ತತ್ತರಿಸಿ ಹೋಗಿದ್ದರು. ಕೊನೆಗೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದವರು ಊರನ್ನೇ ಬಿಟ್ಟು ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಈ ಹಿಂಸಾಚಾರದಿಂದಾಗಿ ಕೋಮುಧ್ರುವೀಕರಣ ಉಂಟಾಗಿ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿಗೆ ಸಾಧ್ಯವಾಯಿತು. ಇಂದಿಗೂ ಉತ್ತರಪ್ರದೇಶದ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ ಅಲ್ಲಿ ಭೀತಿಯ ವಾತಾವರಣ ನಿವಾರಣೆಯಾಗಿಲ್ಲ. ಎನ್‌ಕೌಂಟರ್ ಹೆಸರಿನಲ್ಲಿ ಅಮಾಯಕರನ್ನು ದಿನನಿತ್ಯ ಅಲ್ಲಿ ಕೊಂದು ಹಾಕಲಾಗುತ್ತಿದೆ. ಅದನ್ನು ಒಪ್ಪಿಕೊಂಡ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎನ್‌ಕೌಂಟರ್ ಮುಂದುವರಿಸುವುದಾಗಿ ಅಹಂಕಾರದಿಂದ ಹೇಳಿಕೊಂಡಿದ್ದಾರೆ. ಗುಂಡಿಗೆ ಗುಂಡಿನಿಂದಲೇ ಉತ್ತರಿಸುವುದಾಗಿ ಅವರು ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಬಳಸಿದ ಚುನಾವಣಾ ತಂತ್ರವನ್ನೇ ಕರ್ನಾಟಕದಲ್ಲೂ ಬಳಸಲು ಬಿಜೆಪಿ ಮುಂದಾಗಿದೆ. ಶಾಂತಿ ಮತ್ತು ನೆಮ್ಮದಿಯ ತಾಣವಾದ ಕನ್ನಡ ನಾಡಿನಲ್ಲಿ ಕೋಮುಕಲಹದ ದಳ್ಳುರಿ ಎಬ್ಬಿಸಿ ವೋಟಿನ ಬೆಳೆ ತೆಗೆಯಲು ಅಮಿತ್ ಶಾ ಮುಂದಾಗಿದ್ದಾರೆ.

ಇಂತಹ ಬೆಂಕಿ ಹಚ್ಚುವ ಕಾರ್ಯದಲ್ಲಿ ಪರಿಣಿತರಾದ ಅಮಿತ್ ಶಾ ಕರ್ನಾಟಕಕ್ಕೆ ಬಂದಾಗಲೆಲ್ಲ ಹಿಂಸಾಚಾರದ ಘಟನೆಗಳು ನಡೆದಿವೆ. ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲುವುದು ಅಷ್ಟು ಸುಲಭವಲ್ಲ ಎಂದು ಅಮಿತ್ ಶಾ ಅವರಿಗೆ ಗೊತ್ತಿದೆ. ಈ ಹಿಂದೆ ಬಿಜೆಪಿಗೆ ಅಧಿಕಾರ ದೊರಕಿದಾಗ ನಡೆದ ಹಗರಣಗಳನ್ನು ಜನ ಮರೆತಿಲ್ಲ. ಜನರ ಬಳಿ ಹೋಗಿ ಮತ ಕೇಳುವ ನೈತಿಕತೆ ಕರ್ನಾಟಕದ ಬಿಜೆಪಿ ನಾಯಕರಿಗಿಲ್ಲ. ಅಂತಲೇ ಪದೇ ಪದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕರ್ನಾಟಕಕ್ಕೆ ಕರೆದುಕೊಂಡು ಬರುತ್ತಾರೆ. ರಾಜ್ಯದಲ್ಲಿ ಈ ಹಿಂದೆ ಜನ ಬಿಜೆಪಿಗೆ ಅಧಿಕಾರ ನೀಡಿದ್ದರು. ಜನ ನೀಡಿದ ಅಧಿಕಾರವನ್ನು ಬಿಜೆಪಿ ನಾಯಕರು ದಕ್ಷವಾಗಿ ಮತ್ತು ಪ್ರಾಮಾಣಿಕವಾಗಿ ನಿಭಾಯಿಸಲಿಲ್ಲ. 5 ವರ್ಷಗಳ ಅಧಿಕಾರಗಳ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾವಣೆಯಾದರು. ಒಬ್ಬ ಮುಖ್ಯಮಂತ್ರಿ ಭ್ರಷ್ಟಾಚಾರದ ಆರೋಪದ ಮೇಲೆ ಪರಪ್ಪನ ಅಗ್ರಹಾರದ ಜೈಲಿಗೆ ಹೋಗಿ ಬಂದರು. ಇನ್ನೊಬ್ಬ ಮಂತ್ರಿ ರಿಯಲ್ ಎಸ್ಟೇಟ್ ಹಗರಣದಲ್ಲಿ ಜೈಲು ಪಾಲಾಗಿದ್ದರು. ಮತ್ತೊಬ್ಬ ಮಂತ್ರಿ ಗಣಿ ಲೂಟಿಯಲ್ಲಿ ಗುರುತರ ಆರೋಪಕ್ಕೊಳಗಾಗಿ ಸುದೀರ್ಘಕಾಲ ಜೈಲಿನಲ್ಲಿದ್ದರು. ಒಬ್ಬ ಮಂತ್ರಿ ಸ್ನೇಹಿತರ ಪತ್ನಿಯ ಮೇಲೆ ಅತ್ಯಾಚಾರ ಮಾಡಲು ಹೋಗಿ ರಾಜೀನಾಮೆ ನೀಡಬೇಕಾಯಿತು.

ಇನ್ನು ಮೂವರು ಮಂತ್ರಿಗಳು ವಿಧಾನಸಭೆ ಅಧಿವೇಶನದಲ್ಲಿ ಬ್ಲೂಫಿಲಂ ನೋಡಿ ಸಿಕ್ಕ್ಕಿ ಬಿದ್ದು ರಾಜೀನಾಮೆ ನೀಡಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಳ್ಳಾರಿಯ ಗಣಿ ಸಂಪತ್ತಿನ ಲೂಟಿ ಅವ್ಯಾಹತವಾಗಿ ನಡೆಯಿತು. ದೇಶಕ್ಕೆ ಸೇರಿದ ಖನಿಜ ಸಂಪತ್ತನ್ನು ಮನಬಂದಂತೆ ಕೊಳ್ಳೆ ಹೊಡೆದ ಗಣಿರೆಡ್ಡಿಗಳು ಬಳ್ಳಾರಿಯಲ್ಲಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿ ಆಡಳಿತ ವ್ಯವಸ್ಥೆಯೇ ಕುಸಿದುಬೀಳುವಂತೆ ಮಾಡಿದ್ದರು. ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರು ಮತ್ತು ಕಾರ್ಮಿಕರ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿಗಳು ನಡೆದವು. ಕರಾವಳಿಯ ಜಿಲ್ಲೆಗಳಲ್ಲಿ ಕಾನೂನನ್ನು ಕೈಗೆತ್ತಿಕೊಂಡ ಕೋಮುವಾದಿ ಸಂಘಟನೆಗಳ ಗೂಂಡಾಗಳು ದನ ರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ನಿರಂತರವಾಗಿ ದಾಳಿಗಳನ್ನು ನಡೆಸಿದರು. ಅನೇಕ ಕಡೆ ಕ್ರೈಸ್ತ ಧರ್ಮದವರ ಪ್ರಾರ್ಥನಾಲಯಗಳನ್ನು ನಾಶಮಾಡಿದರು. ಇದೆಲ್ಲದರ ಪರಿಣಾಮವಾಗಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಂತಹ ಕಳಂಕ ಅಂಟಿಸಿಕೊಂಡ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮುಂತಾದವರನ್ನು ಕಟ್ಟಿಕೊಂಡು ಚುನಾವಣೆಗೆ ಹೊರಟಿದ್ದಾರೆ.

ಇವರನ್ನು ಕಟ್ಟಿಕೊಂಡು ಹೋದರೆ ಕರ್ನಾಟಕದಲ್ಲಿ ಗೆಲ್ಲುವುದು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿದೆ. ಅಂತಲೇ ಜನಾಂಗೀಯ ಕಲಹದ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾರೆ. ಅಮಿತ್ ಶಾ ಮಾತ್ರವಲ್ಲ, ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ, ಸಂಸದರಾದ ಪ್ರತಾಪ ಸಿಂಹ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಆಡುತ್ತಿರುವ ಮಾತುಗಳನ್ನು ಕೇಳಿದರೆ ಆತಂಕ ಉಂಟಾಗುತ್ತದೆ. ನಳಿನ್ ಕುಮಾರ್ ಕಟೀಲು ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವುದಾಗಿ ಹಿಂದೊಮ್ಮೆ ಬಹಿರಂಗವಾಗಿ ಹೇಳಿದ್ದರು. ಇವೆಲ್ಲ ಆವೇಶದಿಂದ ಆಡುವ ಮಾತುಗಳು ಮಾತ್ರವಲ್ಲ, ಇವು ಸಂಘಪರಿವಾರ ರೂಪಿಸಿದ ವ್ಯವಸ್ಥಿತ ಕಾರ್ಯತಂತ್ರ. ಅಮಿತ್ ಶಾ ಈ ಹಿಂದೆ ಕರ್ನಾಟಕಕ್ಕೆ ಬಂದಾಗ ಪ್ರತಾಪ ಸಿಂಹರನ್ನು ಪ್ರತ್ಯೇಕವಾಗಿ ಕರೆದು ರಾಜ್ಯಸರಕಾರದ ವಿರುದ್ಧ ಶಾಂತಿಯುತ ಚಳವಳಿ ಮಾಡಿದರೆ ಸಾಲದು ಲಾಠಿ ಪ್ರಹಾರ, ಗೋಲಿಬಾರ್ ನಡೆದು ಜನ ಸಾವಿಗೀಡಾಗುವಂತಹ ರೀತಿಯಲ್ಲಿ ಪ್ರತಿಭಟನೆಗಳನ್ನು ನಡೆಸಬೇಕು ಎಂಬ ಮಾತು ಟಿ.ವಿ. ಚಾನೆಲ್‌ಗಳಲ್ಲಿ ವೈರಲ್ ಆಗಿತ್ತು. ಅಂತಲೇ ಅಮಿತ್ ಶಾ ಕರ್ನಾಟಕಕ್ಕೆ ಬಂದರೆ ಇನ್ನೆಲ್ಲಿ ಬೆಂಕಿ ಹಚ್ಚುತ್ತಾರೋ ಎಂಬ ಆತಂಕ ಉಂಟಾಗುತ್ತದೆ. ಈ ಹಿಂದೆ ಅವರು ಕರ್ನಾಟಕಕ್ಕೆ ಭೇಟಿನೀಡಿ ಹೋದನಂತರ ಕಾರವಾರ ಜಿಲ್ಲೆ ಒಂದು ವಾರಗಳ ಕಾಲ ಹಿಂಸೆಯಿಂದ ತತ್ತರಿಸಿತ್ತು. ನಿಷೇಧಾಜ್ಞೆ ಜಾರಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತನೊಬ್ಬನ ಕೊಲೆ ಘಟನೆಯ ನೆಪ ಮಾಡಿಕೊಂಡು ಅರಣ್ಯ ಮಂತ್ರಿ ರಮಾನಾಥ ರೈ ಅವರ ರಾಜೀನಾಮೆಗೆ ಒತ್ತಾಯಿಸಿ ‘ಮಂಗಳೂರು ಚಲೋ’ ಹೆಸರಿನಲ್ಲಿ ಹಿಂಸಾಚಾರ ನಡೆಸಲಾಯಿತು. ಇತ್ತೀಚೆಗೆ ಸುರತ್ಕಲ್ ಬಳಿ ಯುವಕನೊಬ್ಬನ ಹತ್ಯೆಯ ನೆಪ ಮುಂದೆ ಮಾಡಿ ಅಲ್ಪಸಂಖ್ಯಾತ ಸಮುದಾಯದ ಇನ್ನೊಬ್ಬ ಅಮಾಯಕ ವ್ಯಕ್ತಿಯ ಕೊಲೆ ಮಾಡಲಾಯಿತು. ಈ ಕೊಲೆಯನ್ನು ವಿಶ್ವ ಹಿಂದೂ ಪರಿಷತ್‌ನ ನಾಯಕರೊಬ್ಬರು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದರು. ಕೊಲೆಯ ಸೇಡನ್ನು ಕೊಲೆಯ ಮೂಲಕವೇ ತೀರಿಸುವುದಾಗಿ ಅವರು ಹೇಳಿದ್ದರು. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಮುಂಬರುವ ವಿಧಾನಸಭಾ ಚುನಾವಣೆವರೆಗೆ ಈ ರಾಜ್ಯವನ್ನು ನೆಮ್ಮದಿಯಾಗಿಡಲು ಬಿಜೆಪಿ ನಾಯಕರು ಬಿಡುವುದಿಲ್ಲ.

ಕರ್ನಾಟಕದಲ್ಲಿ ಕಳೆದ ಐದು ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯನವರ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲ. ಯಾವ ಮಂತ್ರಿಗಳೂ ಜೈಲಿಗೆ ಹೋಗಿ ಬಂದಿಲ್ಲ. ಅನ್ನಭಾಗ್ಯದಂತಹ ಯೋಜನೆಯ ಮೂಲಕ ಈ ಸರಕಾರ ಗ್ರಾಮೀಣ ಪ್ರದೇಶದ ಬಡವರ ಮನಸ್ಸನ್ನು ಗೆದ್ದಿದೆ. ಆದ್ದರಿಂದ ಕಾಂಗ್ರೆಸನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದು ತಿಳಿದುಕೊಂಡ ಬಿಜೆಪಿ ನಾಯಕರು ಕೋಮುಪ್ರಚೋದಕ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಅಮಿತ್ ಶಾ ಮತ್ತೆ ದಕ್ಷಿಣಕನ್ನಡ ಜಿಲ್ಲೆಗೆ ಬಂದು ಹತ್ಯೆಗೀಡಾದವರ ಮನೆಗೆ ಭೇಟಿ ನೀಡುತ್ತಾ, ಪ್ರಚೋದನಾಕಾರಿ ಮಾತುಗಳನ್ನಾಡುತ್ತಾ ತಿರುಗಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೈಸೂರಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರಕಾರದ ವಿರುದ್ಧ ಆಧಾರವಿಲ್ಲದ ಆರೋಪಗಳನ್ನು ಮಾಡಿ ಹೋಗಿದ್ದಾರೆ.

ಅನಂತಕುಮಾರ ಹೆಗಡೆಯಂತಹ ಸಚಿವರು ಹೋದಕಡೆಯಲ್ಲೆೆಲ್ಲ ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡುತ್ತಿದ್ದಾರೆ. ಪರೋಕ್ಷವಾಗಿ ಮೀಸಲಾತಿಯ ವಿಷ ಕಾರುತ್ತಿದ್ದಾರೆ. ದಕ್ಷಿಣ ಮತ್ತು ಉತ್ತರಕನ್ನಡ ಜಿಲ್ಲೆಗಳನ್ನು ಬಿಟ್ಟರೆ ರಾಜ್ಯದ ಉಳಿದ ಜಿಲ್ಲೆಗಳ ಜನರಿಗೆ ಕನ್ನಡ ಭಾಷೆ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಅವಮಾನ ಮಾಡುತ್ತಿದ್ದಾರೆ. ಅಮಿತ್ ಶಾ ಉಡುಪಿಗೆ ಭೇಟಿ ನೀಡಿ ಕೃಷ್ಣ ಮಠಕ್ಕೆ ಹೋಗಿ ದೇವರ ದರ್ಶನ ಮಾಡಿಬಂದಿದ್ದಾರೆ. ಅದರ ಜೊತೆಗೆ ಮಠಾಧೀಶರೊಂದಿಗೆ ರಹಸ್ಯ ಸಭೆ ನಡೆಸಿ ಹೇಗಾದರೂ ಮಾಡಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಉಡುಪಿಯ ಪೇಜಾವರ ಸ್ವಾಮಿಗಳು ಮಠಾಧೀಶರ ಈ ಸಭೆಯನ್ನು ಏರ್ಪಡಿಸಿದ್ದರು. ಈ ಸಭೆ ನಡೆಸಲು ಯಾರ ಅಭ್ಯಂತರವೂ ಇಲ್ಲ. ಆದರೆ, ರಹಸ್ಯವಾಗಿ ನಡೆಸುವ ಅಗತ್ಯವೇನಿರಲಿಲ್ಲ. ಪತ್ರಕರ್ತರಿಗೂ ಪ್ರವೇಶವಿಲ್ಲದ ಈ ಸಭೆಯಲ್ಲಿ ಏನು ಮಾತುಕತೆ ನಡೆಯಿತು ಯಾರಿಗೂ ಗೊತ್ತಿಲ್ಲ. ಆದ್ದರಿಂದಲೇ ರಾಜ್ಯದ ಜನ ಅದರಲ್ಲೂ ಕರಾವಳಿಯ ಎಲ್ಲಾ ಸಮುದಾಯಗಳ ಜನ ಈ ಹಿಂಸಾ ಪ್ರಚೋದಕರ ಬಗ್ಗೆ ಎಚ್ಚರವಾಗಿರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News