ಸೈನಾಗೆ ತೈ ಝು ಮೊದಲ ಎದುರಾಳಿ

Update: 2018-02-22 18:33 GMT

ಬರ್ಮಿಂಗ್‌ಹ್ಯಾಮ್,ಫೆ.22: ಮುಂದಿನ ತಿಂಗಳು ಆರಂಭವಾಗಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಗುರುವಾರ ಡ್ರಾ ಪ್ರಕ್ರಿಯೆ ನಡೆದಿದ್ದು, ಸೈನಾ ನೆಹ್ವಾಲ್ ಮೊದಲ ಸುತ್ತಿನ ಪಂದ್ಯದಲ್ಲಿ ತೈ ಝು ಯಿಂಗ್‌ರನ್ನು ಹಾಗೂ ಪಿ.ವಿ.ಸಿಂಧು ಥಾಯ್ಲೆಂಡ್‌ನ ಪಾರ್ನ್‌ಪಾವಿ ಚೊಚುವಾಂಗ್ ಸವಾಲು ಎದುರಿಸಲಿದ್ದಾರೆ. 2015ರ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿರುವ ವಿಶ್ವದ ನಂ.11ನೇ ಆಟಗಾರ್ತಿ ಸೈನಾ ಕಳೆದ ತಿಂಗಳು ಇಂಡೋನೇಷ್ಯಾ ಓಪನ್‌ನಲ್ಲಿ ತೈವಾನ್‌ನ ವಿಶ್ವದ ನಂ.1 ಆಟಗಾರ್ತಿ ತೈ ಝು ಅವರ ವಿರುದ್ಧ ಸೋತಿದ್ದರು. ಇದೀಗ ಮೊದಲ ಸುತ್ತಿನಲ್ಲಿ ಮತ್ತೊಮ್ಮೆ ತೈ ಝುರನ್ನು ಎದುರಿಸಲಿರುವ ಸೈನಾಗೆ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ.

 ಸಿಂಧು ಮೊದಲ ಸುತ್ತಿನಲ್ಲಿ ಸುಲಭವಾಗಿ ಜಯ ಸಾಧಿಸುವ ನಿರೀಕ್ಷೆಯಿದೆ. ಈ ನಿಟ್ಟಿಯಲ್ಲಿ ಅವರು ಯಶಸ್ವಿಯಾದರೆ 2ನೇ ಸುತ್ತಿನಲ್ಲಿ ಅಮೆರಿಕದ ಬೆಲ್ವೆನ್ ಝಾಂಗ್‌ರನ್ನು ಎದುರಿಸಲಿದ್ದಾರೆ. ಝಾಂಗ್ ಅವರು ಇಂಡಿಯಾ ಓಪನ್ ಫೈನಲ್‌ನಲ್ಲಿ ಸಿಂಧುರನ್ನು ಸೋಲಿಸಿದ್ದರು.

ಕಳೆದ ವರ್ಷ ನಾಲ್ಕು ಸೂಪರ್ ಸರಣಿ ಪ್ರಶಸ್ತಿಗಳನ್ನು ಜಯಿಸಿದ್ದ ವಿಶ್ವದ ನಂ.3ನೇ ಆಟಗಾರ್ತಿ ಕಿಡಂಬಿ ಶ್ರೀಕಾಂತ್ ಮಾ.14 ರಿಂದ 18ರ ತನಕ ನಡೆಯಲಿರುವ ಬಿಡಬ್ಲುಎಫ್ ವರ್ಲ್ಡ್ ಟೂರ್ ಸೂಪರ್ 1000 ಟೂರ್ನಮೆಂಟ್‌ನ ಆರಂಭಿಕ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಬ್ರೈಸ್ ಲೆವೆರ್‌ಡೆಝ್‌ರನ್ನು ಎದುರಿಸಲಿದ್ದಾರೆ.

 ಬಿ.ಸಾಯಿ ಪ್ರಣೀತ್ ಹಾಗೂ ಎಚ್.ಎಸ್.ಪ್ರಣಯ್ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ. ಸಿಂಗಾಪುರ ಓಪನ್ ಚಾಂಪಿಯನ್ ಪ್ರಣೀತ್ ಮಾಜಿ ವಿಶ್ವ ನಂ.1 ಆಟಗಾರ ಸನ್ ವಾನ್ ಹೊರನ್ನು ಎದುರಿಸಲಿದ್ದಾರೆ. ಇಂಡಿಯಾ ಓಪನ್ ವೇಳೆ ಕಾಣಿಸಿಕೊಂಡ ಕಾಲುನೋವಿನಿಂದ ಚೇತರಿಸಿಕೊಂಡಿರುವ ವಿಶ್ವದ ನಂ.11ನೇ ಆಟಗಾರ ಪ್ರಣಯ್ 8ನೇ ಶ್ರೇಯಾಂಕದ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್‌ರನ್ನು ಎದುರಿಸಲಿದ್ದಾರೆ.

 ಡಬಲ್ಸ್ ಪಂದ್ಯಾವಳಿಯಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಜಪಾನ್‌ನ ಟಕುರೊ ಹೊಕಿ ಹಾಗೂ ಯುಗೊ ಕೊಬಯಶಿ ಅವರನ್ನು ಎದುರಿಸಲಿದ್ದಾರೆ. ಇಂಡಿಯಾ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿರುವ ಪ್ರಣಯ್ ಚೋಪ್ರಾ ಹಾಗೂ ಎನ್.ಸಿಕ್ಕಿ ರೆಡ್ಡಿ ಜರ್ಮನಿಯ ಮರ್ವಿನ್ ಎಮಿಲ್ ಹಾಗೂ ಲಿಂಡಾ ಎಫ್ಲೆಯರ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News