ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲ : ಮಾಜಿ ಸಂಸದ ಎಚ್.ವಿಶ್ವನಾಥ್

Update: 2018-02-22 18:40 GMT

ಮೈಸೂರು,ಫೆ.22: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಜನಪ್ರತಿನಿಧಿಗಳ ಪುಂಡಾಟಿಕೆ ಮಿತಿ ಮೀರಿದೆ ಪೊಲೀಸ್ ಹಾಗೂ ಗೃಹ ಇಲಾಖೆ ಅಸಂವಿಧಾನಿಕ ಹಿಡಿತದಲ್ಲಿದ್ದು ಜನಸಾಮಾನ್ಯರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆಡಳಿತಾರೂಡ ಕಾಂಗ್ರೆಸ್ ಸರ್ಕಾರದ ಬಗ್ಗೆ  ಮಾಜಿ ಸಂಸದ, ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಂದಲೇ ಕಾನೂನು ಉಲ್ಲಂಘನೆ ಆಗುತ್ತಿದೆ. , ಪೊಲೀಸ್ ಹಾಗೂ ಗೃಹ ಇಲಾಖೆಯನ್ನು ಹೆಚ್ಚುವರಿ ಪ್ರಜಾಪ್ರಭುತ್ವ ಅಧಿಕಾರ ನಡೆಸುತ್ತಿದ್ದು ಗೃಹಮಂತ್ರಿಗೂ ಬೆಲೆ ಇಲ್ಲ. ಶಾಸಕನ ಮಗ ಹಫ್ತಾ ವಸೂಲಿಗಿಳಿದ್ದಿದ್ದಾರೆಂದರೆ ರಾಜ್ಯದಲ್ಲಿ  ಕಾನೂನು ಸುವ್ಯವಸ್ಥೆ ಏನಾಗಿದೆ ಎಂದು ಬೇಸರಿಸಿ, ಇದರಿಂದಾಗಿ ಕೈಗಾರಿಕೋದ್ಯಮ, ಪ್ರವಾಸೋದ್ಯಮ ಕುಸಿಯುತ್ತದೆ ಎಂದು ಹೇಳಿದರು. 

ಅಹಿಂದಾ ಹೆಸರಿನಲ್ಲಿ ಅಧಿಕಾರವೇರಿದ ಸಿಎಂ ಸಿದ್ದರಾಮಯ್ಯ ಆ  ವರ್ಗದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಬಲೀಕರಣಕ್ಕೆ ಯಾವುದೇ ವಿಶೇಷ ಯೋಜನೆ ರೂಪಿಸದೆ, ಜನರ ನಿರೀಕ್ಷೆಯನ್ನು ಹುಸಿಯಾಗಿಸಿದ್ದು ಅವರೊಬ್ಬ.ಕೃತಜ್ಞತೆ ಇಲ್ಲದ ರಾಜಕಾರಣಿ ಹಾಲು, ಅಕ್ಕಿ ಕೊಟ್ಟಿದ್ದು ಜನಪ್ರಿಯ ಯೋಜನೆಗಳಾ? ಮಾತೆತ್ತಿದರೆ ಅನ್ನಭಾಗ್ಯ, ಕ್ಷೀರ ಭಾಗ್ಯ ಅಂತ ಭಾಗ್ಯಗಳನ್ನು ಹೇಳುತ್ತಿದ್ದು. ಹಿಂದುಳಿದ ವರ್ಗಗಳು ತಮ್ಮ ಮೇಲೆ ಇಟ್ಟುಕೊಂಡಿದ್ದ ವಿಶ್ವಾಸ ಕಳೆದುಕೊಂಡಿವೆ ಎಂದ ಅವರು, ಇದೊಂದು ಗುತ್ತಿಗೆದಾರರ ಅವಲಂಭಿತ ಸರ್ಕಾರ, ಹಣ ಬಿತ್ತಿ ಮತತೆಗೆಯುವೆ ಎನ್ನುವ ಸಿಎಂ ಲೆಕ್ಕಚಾರಕ್ಕೆ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವರು ಎಂದರು

ಬಜೆಟ್ ಸಂಪೂರ್ಣ ಸುಳ್ಳಿನ ಕಂತೆ, ಬಜೆಟ್ ನಲ್ಲಿ 100 ಹೊಸ ಪಬ್ಲಿಕ್ ಶಾಲೆ ಆರಂಭಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಆದರೆ ತಲಾ 5 ಲಕ್ಷ ರೂ. ಮೀಸಲು ಇಟ್ಟಿದ್ದು.  5 ಲಕ್ಷ ರೂ.ಗಳಲ್ಲಿ ಪಬ್ಲಿಕ್ ಶಾಲೆ  ತೆರೆಯಲು ಸಾಧ್ಯವೇ? ಜನರನ್ನು ನೀವು ಮೂರ್ಖರು ಅಂದು ಕೊಂಡಿದ್ದು, ನೀವೊಬ್ಬ ಮಹಾ ಮೂರ್ಖ ಎಂದು ದೂರಿ. ಮುಖ್ಯಮಂತ್ರಿಯೊಂದಿಗೆ ಇಂದು ಸಾಮಾನ್ಯ ಕುರುಬರು ಜೊತೆಗಿಲ್ಲ, ಇವರೊಂದಿಗೆ ಕೇವಲ ಕೆಂಪಯ್ಯ, ಸುರೇಶ್, ಬೈರತಿ ಬಸವರಾಜ, ರಾಮಯ್ಯರಂತಹ ಫೈವ್ ಸ್ಟಾರ್ ಕುರುಬರು ಇದ್ದಾರೆ ಎಂದು ವ್ಯಂಗ್ಯವಾಡಿದರು.

ಫೆ.24ರಂದು ದಸರಾ ವಸ್ತು ಪ್ರದರ್ಶನ ಆವರಣದ ದಿ.ಕಾಳಿಂಗರಾವ್ ಗಾನಮಂಟಪದಲ್ಲಿ ಜೆಡಿಎಸ್ ಗ್ರಾಮಾಂತರ ನಗರ ಜಿಲ್ಲೆಗಳ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ.

ಬೆಳಗ್ಗೆ 11ಕ್ಕೆ ನಡೆಯುವ ಸಭೆಯಲ್ಲಿ ಮಾಜಿ ಸಚಿವರಾದ  ಪಿ.ಜಿ.ಆರ್.ಸಿಂಧ್ಯಾ, ಬಂಡೆಪ್ಪ ಕಾಶಂಪೂರ್, ಶಾಸಕ ಮಧು ಬಂಗಾರಪ್ಪ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು..

ಪತ್ರಿಕಾಗೊಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಜೆಡಿಎಸ್ ಮುಖಂಡರಾದ ಚನ್ನಬಸಪ್ಪ, ಸೋಮಸುಂದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News