ರಾಜಕೀಯ ರೂಪ ಪಡೆಯುತ್ತಿರುವ ಶಾಸಕಾಂಗ-ಕಾರ್ಯಾಂಗ ಬಿಕ್ಕಟ್ಟು

Update: 2018-02-23 04:05 GMT

ಕರ್ನಾಟಕದಲ್ಲಿ ಶಾಸಕನ ಪುತ್ರನೊಬ್ಬ, ಯುವಕನೊಬ್ಬನಿಗೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರೆ ಹೊಸದಿಲ್ಲಿಯಲ್ಲಿ ಆಪ್‌ನ ಶಾಸಕರಿಬ್ಬರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ನಡೆದ ಘಟನೆಗೆ ಹೋಲಿಸಿದರೆ ಇದು ತುಸು ಗಂಭೀರವಾದುದು. ಕರ್ನಾಟಕದಲ್ಲಿ ಹಲ್ಲೆ ನಡೆಸಿರುವುದು ಶಾಸಕನ ಪುತ್ರ. ಇದರ ಹೊಣೆಯನ್ನು ಶಾಸಕ ಹೊರಬೇಕು ನಿಜ. ಆದರೆ ಹಲ್ಲೆಗೆ ಸಂಬಂಧಿಸಿ ನೇರ ಆರೋಪವನ್ನು ಶಾಸಕನ ಮೇಲೆ ಮಾಡುವಂತಿಲ್ಲ. ಇಂದು ಹೆಚ್ಚಿನ ರಾಜಕಾರಣಿಗಳು ಇದೇ ಹಾದಿಯನ್ನು ಹಿಡಿದಿದ್ದಾರೆ. ಜೊತೆಗೆ ಆತ ಹಲ್ಲೆ ನಡೆಸಿರುವುದು ಕರ್ತವ್ಯದಲ್ಲಿರುವ ಯಾವುದೋ ಅಧಿಕಾರಿಗೆ ಅಲ್ಲ. ವೈಯಕ್ತಿಕ ಮನಸ್ತಾಪವೇ ಪ್ರಕರಣ ಬಿಗಡಾಯಿಸಲು ಕಾರಣವಾಗಿದೆ. ಆದರೆ ದಿಲ್ಲಿಯಲ್ಲಿ ನಡೆಯುತ್ತಿರುವುದು ಸಾಂವಿಧಾನಿಕ ಬಿಕ್ಕಟ್ಟು. ಮೇಲ್ನೋಟಕ್ಕೆ ಇದು ಇಬ್ಬರು ಶಾಸಕರು ಅಧಿಕಾರಿಗಳ ಮೇಲೆ ನಡೆಸಿದ ಹಲ್ಲೆಯೆಂಬಂತೆ ಕಂಡರೂ, ಕಾರ್ಯಾಂಗ ಮತ್ತು ಶಾಸಕಾಂಗದ ನಡುವಿನ ಬಿರುಕನ್ನು ಎತ್ತಿ ತೋರಿಸುತ್ತದೆ. ಅಧಿಕಾರಿಗಳು ದೂರು ನೀಡಿದ ಬೆನ್ನಿಗೆ ಯಾವ ತನಿಖೆಯೂ ಇಲ್ಲದೆ ತರಾತುರಿಯಲ್ಲಿ ಶಾಸಕರ ಬಂಧನವಾಗಿರುವುದು ಗಮನಿಸಿದರೆ, ಪೊಲೀಸರೂ ಆಪ್ ಪಕ್ಷವನ್ನು ಬಗ್ಗು ಬಡಿಯಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಜೊತೆಗೆ ಈ ಬೆಳವಣಿಗೆಗಳನ್ನು ಕೇಂದ್ರವೇ ನಿಯಂತ್ರಿಸುತ್ತಿದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

ಈ ಹಿಂದೆ ಆಪ್ ಸರಕಾರಕ್ಕೂ ದಿಲ್ಲಿಯ ಪೊಲೀಸ್ ವ್ಯವಸ್ಥೆಗೂ ನಡೆದ ತಿಕ್ಕಾಟ ರಾಷ್ಟ್ರ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿತ್ತು. ‘‘ಪೊಲೀಸ್ ಇಲಾಖೆಯನ್ನು ಕೇಂದ್ರ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಸರಕಾರದೊಂದಿಗೆ ಅವರು ಸಹಕರಿಸುತ್ತಿಲ್ಲ’’ ಎನ್ನುವುದು ಮುಖ್ಯಮಂತ್ರಿ ಕೇಜ್ರಿವಾಲ್ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಬರೇ ಪೊಲೀಸ್ ಇಲಾಖೆ ಮಾತ್ರವಲ್ಲ, ಇಡೀ ಕಾರ್ಯಾಂಗವೇ ತಾನು ಯಾರ ಜೊತೆಗೆ ನಿಲ್ಲಬೇಕು ಎನ್ನುವ ಗೊಂದಲದಲ್ಲಿದೆ. ದಿಲ್ಲಿಯನ್ನು ನಿಜಕ್ಕೂ ಆಳುತ್ತಿರುವವರು ಯಾರು? ಕೇಜ್ರಿವಾಲ್ ನೇತೃತ್ವದ ಸರಕಾರವೇ? ಅಥವಾ ಲೆಫ್ಟಿನೆಂಟ್ ಗವರ್ನರ್ ಅವರೇ? ಈ ಜಗ್ಗಾಟ ಹಿಂದಿನ ಗವರ್ನರ್ ಇದ್ದಾಗ ತುರಿಯಾವಸ್ಥೆಗೆ ತಲುಪಿತ್ತು. ಲೆಫ್ಟಿನೆಂಟ್ ಗವರ್ನರ್ ಅವರನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಕೇಜ್ರಿವಾಲ್‌ಗೆ ಕಾಟ ನೀಡುತ್ತಿತ್ತು. ಒಂದು ಸರಕಾರವಾಗಿ ಸ್ವತಂತ್ರವಾಗಿ ಆಡಳಿತ ನೀಡಲು ಇಂದಿಗೂ ಕೇಜ್ರಿವಾಲ್‌ಗೆ ಸಾಧ್ಯವಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಕೇಂದ್ರ ಆಪ್ ವಿರುದ್ಧ ಐಟಿ ಅಧಿಕಾರಿಗಳನ್ನೂ ಬಳಸಿಕೊಂಡಿತು. ಪಕ್ಷದೊಳಗೇ ಭಿನ್ನಮತೀಯರನ್ನು ಸೃಷ್ಟಿಸಿ ಅದನ್ನು ಒಡೆಯಲು ಸಂಚು ಹೂಡಿತು. ಇದಾವುದೂ ಫಲ ನೀಡದೇ ಇದ್ದಾಗ, ಲಾಭದಾಯಕ ಹುದ್ದೆಗಳನ್ನು ಅಕ್ರಮವಾಗಿ ಹೊಂದಿರುವುದಕ್ಕಾಗಿ ಶಾಸಕರ ಮೇಲೆ ಮೊಕದ್ದಮೆ ಹೂಡಿತು. ಇತರ ರಾಜ್ಯಗಳಲ್ಲಿ ಇಂತಹ ಶಾಸಕರ ಸಂಖ್ಯೆ ಬೇಕಾದಷ್ಟಿದೆಯಾದರೂ ದಿಲ್ಲಿ ಸರಕಾರ ಮಾತ್ರ ಆರೋಪಿ ಸ್ಥಾನದಲ್ಲಿ ನಿಂತಿತು. ಅಂತಿಮವಾಗಿ 20 ಶಾಸಕರನ್ನೂ ಅಮಾನತು ಮಾಡಿತು. ಇಷ್ಟಾದರೂ ಕೇಂದ್ರಕ್ಕೆ ಆಪ್ ಸರಕಾರವನ್ನು ಉರುಳಿಸಲು ಸಾಧ್ಯವಾಗಿಲ್ಲ. ಅದಿನ್ನೂ ಇನ್ನೂ ಸರಳ ಬಹುಮತದ ಮೇಲೆ ಮುಂದುವರಿಯುತ್ತಿದೆ.

ಮುಂದಿನ ಚುನಾವಣೆಗೆ ಮೊದಲು ಆಪ್ ಸರಕಾರವನ್ನು ಹೇಗಾದರೂ ಮಾಡಿ ಉರುಳಿಸಲೇ ಬೇಕು ಎನ್ನುವ ಪ್ರಯತ್ನದ ಭಾಗವಾಗಿ ಇಡೀ ಕಾರ್ಯಾಂಗವನ್ನೇ ಆಪ್ ಸರಕಾರದ ವಿರುದ್ಧ ಕೇಂದ್ರ ಛೂ ಬಿಟ್ಟಿದೆ. ಅದರ ಭಾಗವಾಗಿಯೇ ಅಧಿಕಾರಿಗಳು ಆರೋಪಿಸಿದ ಬೆನ್ನಿಗೇ ಇಬ್ಬರು ಶಾಸಕರನ್ನು ಪೊಲೀಸರು ಅವಸರವಸರವಾಗಿ ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ತನ್ನ ಶಾಸಕರನ್ನು ರಕ್ಷಿಸಲು ಕೇಜ್ರಿವಾಲ್ ಕೂಡ ಬೀದಿಗಿಳಿದಿದ್ದಾರೆ. ಶಾಸಕರ ಬಂಧನವನ್ನು ವಿರೋಧಿಸಿ ಆಪ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ ‘ಶಾಸಕರು ಮುಸ್ಲಿಮ್ ಮತ್ತು ದಲಿತ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ದೂರು ನೀಡಲಾಗಿದೆ’’ ಎಂದು ಆಪ್ ದೂರುತ್ತಿದೆ. ಈ ಸಂಬಂಧ ‘ವೀಡಿಯೋ ಸಾಕ್ಷಿ’ಯನ್ನು ಒದಗಿಸಿದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಪ್ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ತಮ್ಮ ಬಗ್ಗೆ ಅವಮಾನ ಕಾರಿ ಮತ್ತು ಜಾತಿ ಆಧಾರಿತ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಶಾಸಕರು ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಗಂಭೀರವಾಗಿ ತೆಗೆದುಕೊಳ್ಳಲು ಪೊಲೀಸರು ಹಿಂಜರಿದಿದ್ದಾರೆ. ಅಂದರೆ ಅವರು ಏಕಪಕ್ಷೀಯವಾಗಿ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.

ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಮನ್ವಯತೆಯಿಲ್ಲದೇ ಇದ್ದರೆ ಯಾವುದೇ ಅಭಿವೃದ್ಧಿ ಯೋಜನೆಗಳು ಜಾರಿಯಾಗುವುದು ಸಾಧ್ಯವಿಲ್ಲ. ಒಬ್ಬ ಉತ್ತಮ ಶಾಸಕನಿದ್ದರೆ ಸಾಕಾಗದು. ಆ ಯೋಜನೆಗಳನ್ನು ಜಾರಿಗೊಳಿಸುವ ಉತ್ತಮ ಅಧಿಕಾರಿಯ ಸಹಾಯವೂ ಬೇಕಾಗುತ್ತದೆ. ಅಭಿವೃದ್ಧಿ ಸಮೀಕ್ಷೆಯ ಸಂದರ್ಭದಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯ, ಉದ್ಧಟತನದ ಉತ್ತರಗಳನ್ನು ನೀಡುವುದು ಇಂದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಶಾಸಕರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇಂತಹದೇ ಒಂದು ಸಾಮಾನ್ಯ ಪ್ರಕರಣ ಇದೀಗ ಕಾರ್ಯಾಂಗ ಮತ್ತು ಶಾಸಕಾಂಗದ ನಡುವಿನ ತಿಕ್ಕಾಟವಾಗಿ ಪರಿವರ್ತನೆಗೊಂಡಿದೆ. ಆಪ್ ಸರಕಾರದ ಅಸಹಾಯಕತೆಯನ್ನು ಅಧಿಕಾರಿಗಳು ತಮಗೆ ಪೂರಕವಾಗಿ ಬಳಸಿಕೊಳ್ಳುವುದಕ್ಕೆ ನೋಡುತ್ತಿದ್ದಾರೆಯೋ ಎಂಬ ಸಂಶಯವೂ ಇದೆ. ಒಂದಂತೂ ಸತ್ಯ. ಈ ಬೆಳವಣಿಗೆಗಳನ್ನು ಕೇಂದ್ರ ಸರಕಾರ ನಿಯಂತ್ರಿಸುತ್ತಿದೆ. ಇಡೀ ಕಾರ್ಯಾಂಗ ವ್ಯವಸ್ಥೆ ಶಾಸಕಾಂಗ ವ್ಯವಸ್ಥೆಯ ವಿರುದ್ಧ ಬಂಡೇಳುವುದಕ್ಕೆ ಕುಮ್ಮಕ್ಕು ನೀಡುತ್ತಿದೆ. ಇದು ಆತಂಕಕಾರಿ ಬೆಳವಣಿಗೆ.

ಇಂದು ಕೇಂದ್ರ ಸರಕಾರ ತನ್ನ ಸ್ವಾರ್ಥಕ್ಕಾಗಿ ಇಂತಹ ತಂತ್ರಗಳನ್ನು ಬಳಸುವುದರಲ್ಲಿ ಯಶಸ್ವಿಯಾಗಬಹುದು. ಆದರೆ ಇದನ್ನು ಇತರ ರಾಜ್ಯಗಳ ಅಧಿಕಾರಿಗಳೂ ಮಾದರಿಯಾಗಿ ಬಳಸಿಕೊಂಡರೆ, ಯಾವುದೇ ಸರಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ? ನಾಳೆ ಬಿಜೆಪಿ ಸರಕಾರದ ವಿರುದ್ಧವೂ ಈ ಕಾರ್ಯಾಂಗ ವ್ಯವಸ್ಥೆ ಬಂಡಾಯವೇಳಬಹುದು. ಆದುದರಿಂದ ಪ್ರಕರಣವನ್ನು ತನ್ನ ರಾಜಕೀಯ ಹಿತಾಸಕ್ತಿಗೆ ಪೂರಕವಾಗಿ ಬಳಸುವುದನ್ನು ಕೇಂದ್ರ ಸರಕಾರ ತಕ್ಷಣ ನಿಲ್ಲಿಸಬೇಕು. ಹಾಗೆಯೇ ವೀಡಿಯೋ ದಾಖಲೆಯನ್ನು ತನಿಖಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ನಿಜಕ್ಕೂ ನಡೆದಿರುವುದು ಏನು? ಶಾಸಕರು ಅಧಿಕಾರಿಯ ಮೇಲೆ ದಾಳಿ ನಡೆಸಿರುವುದು ನಿಜವೇ? ಅಧಿಕಾರಿಗಳು ಶಾಸಕರನ್ನು ನಿಂದಿಸಿ ಪ್ರಚೋದಿಸಿದ್ದಾರೆಯೆ? ಇವೆಲ್ಲವೂ ಗಂಭೀರವಾದ ತನಿಖೆಯಿಂದ ಮಾತ್ರ ಹೊರಬರಬಹುದು. ಒಂದು ವೇಳೆ ಅಧಿಕಾರಿಯಿಂದ ಸುಳ್ಳು ದೂರು ದಾಖಲಾಗಿದ್ದರೆ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಾರ್ಯಾಂಗ ವ್ಯವಸ್ಥೆ ಶಾಸಕಾಂಗ ವ್ಯವಸ್ಥೆಯನ್ನು ದಾರಿ ತಪ್ಪಿಸುತ್ತಿದೆ ಎನ್ನುವುದು ಚರ್ಚೆಯ ವಸ್ತು. ಇದೀಗ ದಿಲ್ಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆ ಚರ್ಚೆಯ ಮುಂದುವರಿದ ಭಾಗ ಎನ್ನುವುದರಲ್ಲಿ ಸಂಶಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News