ಮಾಧ್ಯಮಗಳು ಕೆಳಸ್ತರದ ವ್ಯಕ್ತಿಗಳ ಮೇಲೆ ಬೆಳಕು ಚೆಲ್ಲಬೇಕು: ಪ್ರೊ.ಮುಜಾಫರ್ ಅಸ್ಸಾದಿ

Update: 2018-02-23 17:56 GMT

ಮೈಸೂರು,ಫೆ.23: ಮಾಧ್ಯಮಗಳು ಪ್ರಜಾಪ್ರಭುತ್ವವನ್ನು ಗಟ್ಟಿ ಮಾಡುವುದಲ್ಲದೇ, ಹೊಸ ಹೊಸ ಚರ್ಚೆಗಳನ್ನು ನಡೆಸಿ ಅತ್ಯಂತ ಕೆಳಸ್ತರದ ವ್ಯಕ್ತಿಗಳನ್ನು ಕೇಂದ್ರವಾಗಿರಿಸಿ ಅವರ ಮೇಲೆ ಬೆಳಕು ಚೆಲ್ಲಬೇಕಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಚಿಂತಕರಾದ ಪ್ರೊ.ಮುಜಾಫರ್ ಅಸ್ಸಾದಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ “ಬುಡಕಟ್ಟು ಜನಾಂಗಗಳ ಸಬಲೀಕರಣದಲ್ಲಿ ಮಾಧ್ಯಮಗಳ ಪಾತ್ರ” ಮತ್ತು “ಕಲ್ಯಾಣ ಕಾರ್ಯಕ್ರಮಗಳು ಮತ್ತು ನವಮಾಧ್ಯಮಗಳ ನೆರವು” ಎರಡು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು.

ಬುಡಕಟ್ಟುಗಳು ಶಕ್ತಿ ಇಲ್ಲದ ಸಮುದಾಯ. ಅವರಿಗೆ ರಾಜಕೀಯ ಶಕ್ತಿಯೂ ಇಲ್ಲ, ಆರ್ಥಿಕ ಶಕ್ತಿಯೂ ಇಲ್ಲ. ಅವರು ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಅವರು ಎಲ್ಲಿಯೂ ಶ್ರೀಮಂತರಾಗಿದ್ದು ನೋಡಿಲ್ಲ. ಭೂಮಿ ಇರುವವನು ಸಾಮಾಜಿಕವಾಗಿ ಬೆಳೆಯುತ್ತಾನೆ. ಅವರಿಗೆ ಎಲ್ಲೋ ಒಂದು ಕಡೆ ಭೂಮಿ ಕೊಡಲಾಗುತ್ತದೆ. ಅದು ಬರಡು ಭೂಮಿಯಾಗಿರುತ್ತದೆ. ಅವರು ಶಿಕ್ಷಣ ಸಂಸ್ಥೆಗಳಲ್ಲಿ ಕಾಣಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆಶ್ರಮ ಶಾಲೆಗಳಲ್ಲಿ ಕೊಡುವ ಜ್ಞಾನ ಅವರ ಸಂಸ್ಕೃತಿಗೆ ವಿರುದ್ಧವಾಗಿದೆ. ಅವರ ಭಾಷೆಗಳಲ್ಲಿ ಶಿಕ್ಷಣ ಇಲ್ಲ.  ಗ್ರಂಥಾಲಯಗಳಲ್ಲಿ ಶೇಕ್ಸಪಿಯರ್ ಪುಸ್ತಕಗಳನ್ನು ಅಂದರೆ ಅವರಿಗೆ ಅರ್ಥವಾಗದ ಪುಸ್ತಕಗಳನ್ನು ಇಡಲಾಗುತ್ತದೆ. ಅದರಿಂದ ಅವರ ಸಬಲೀಕರಣ ಸಾಧ್ಯವೇ ಎಂದು ಪ್ರಶ್ನಿಸಿದರು. ಅದರಿಂದ ಅವರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ಅವರ ಭಾಷೆಯಲ್ಲಿಯೇ ಕಲಿಸಬೇಕು. ಅವರ ಭಾಷೆಯೊಟ್ಟಿಗೆ ಬೇರೆ ಭಾಷೆ, ಟೆಕ್ನಿಕಲ್ ಭಾಷೆಗಳನ್ನು ಕಲಿಸಬೇಕು ಎಂದು ತಿಳಿಸಿದರು. 

ಸಬಲೀಕರಣದ ಸಂದರ್ಭದಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಬೇಕು. ಅವರ ಮೇಲೆ ನಡೆಯುವ ಶೋಷಣೆ, ಅತ್ಯಾಚಾರ ಇವುಗಳ ಮೇಲೆ ಬೆಳಕು ಚೆಲ್ಲಬೇಕು. ಸಬಲೀಕರಣದ ಸಂದರ್ಭದಲ್ಲಿ ಅವರ ಪರಿಕಲ್ಪನೆಯ ಜೀವನ ಎಂದರೇನು? ಅವರ ಮುಖ್ಯ ವಿಷಯಗಳ ಮೇಲೆ ಫೋಕಸ್ ಮಾಡಬೇಕು. ಅದನ್ನೇ ಪದೇ ಪದೇ ಮಾತನಾಡಿದರೆ ಸರ್ಕಾರ ಎಚ್ಚೆತ್ತುಕೊಳ್ಳಲಿದೆ. ಬಡತನ ಏನು? ಸಾಂಘಿಕ ಬಡತನವೇ? ವ್ಯವಸ್ಥೆಯೇ ರೂಪಿಸಿದ್ದೇ ಎಂಬುದನ್ನು ತಿಳಿಯಬೇಕು. ಇನ್ನೂ ಅವರನ್ನು ಪರಕೀಯ ಜನಾಂಗ ಎಂಬಂತೆ ನೋಡಲಾಗುತ್ತಿದೆ. ಇವತ್ತಿಗೂ ಅವರು ಮನುಷ್ಯರು ಎಂದು ಪರಿಗಣಿಸಲಾಗುತ್ತಿಲ್ಲ. ಅವರ ಪರವಾಗಿ ಮಾಧ್ಯಮಗಳು ಮಾತನಾಡಬೇಕು, ಅವರನ್ನೇ ಕೇಂದ್ರವಾಗಿರಿಸಿ ಬೆಳಕು ಚೆಲ್ಲಬೇಕು. ಪ್ರಜಾಪ್ರಭುತ್ವ ಗಟ್ಟಿ ಮಾಡುವುದು ಮಾತ್ರವಲ್ಲ. ಹೊಸ ಹೊಸ ಚರ್ಚೆಗಳನ್ನು ನಡೆಸಿ ಅತ್ಯಂತ ಕೆಳಸ್ತರದ ವ್ಯಕ್ತಿಗಳ ಪರವಾಗಿ ಎದ್ದುನಿಂತು ಚರ್ಚೆ ನಡೆಸಬೇಕು. ಯಾಕೆ ಇವತ್ತೂ ಕೂಡ ಅವರು ಬಡತನದಲ್ಲಿರಬೇಕು, ಸರ್ಕಾರದ ಯೋಜನೆಗಳು ಯಾಕೆ ಇನ್ನೂ ಅವರನ್ನು ತಲುಪುತ್ತಿಲ್ಲ. ಯೋಜನೆಗಳು ಲೆಕ್ಕಕ್ಕೆ ಮಾತ್ರವೇ ಸೀಮಿತವೇ..? ಅನುಷ್ಠಾನವಾಗುತ್ತಿಲ್ಲವೇ..? ಈ ಕುರಿತು ಫೋಕಸ್ ಮಾಡಬೇಕು ಎಂದು ತಿಳಿಸಿದರು. ಅವರ ದನಿಯ ಆಳದಲ್ಲಿ ನೋವಿದೆಯೇ?ಆಸೆ-ಆಕಾಂಕ್ಷೆ ದೃಷ್ಟಿಕೋನಗಳಿವೆಯೇ ಎಂಬುದನ್ನು ತಿಳಿಸಿಕೊಡಬೇಕು. ಇಲ್ಲದಿದ್ದಲ್ಲಿ ವ್ಯವಸ್ಥೆಗೆ, ಜನರಿಗೆ, ಸಮಾಜಕ್ಕೆ ತಿಳಿಯಲಾರದು ಎಂದರು. ಕಳೆದ ಹೋದ ಸಮುದಾಯಗಳಾದ ಅವರಿಗೆ ಮಾಧ್ಯಮದ ಮೂಲಕ ಧ್ವನಿ ಕೊಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ಮೈಸೂರು ಪಾರಂಪರಿಕ ಕಟ್ಟಡಗಳ ನಗರಿ, ಅರಮನೆಗಳ ನಗರಿ ಹೆಚ್ಚು ಪ್ರವಾಸಿಗರು ಬರುತ್ತಾರೆ ಎನ್ನುವುದು ತಿಳಿದಿತ್ತು. ಆದರೆ ಇಲ್ಲಿಂದ ನಲ್ವತ್ತು ಕಿ.ಮೀ ಹೋದರೆ ಯಾವ ರೀತಿ ಬಡತನ ಇದೆ, ಬುಡಕಟ್ಟು ಜನರು ಹೇಗೆ ವಾಸಿಸುತ್ತಾರೆ ಎಂಬುದು ಗಜಪಯಣದ ವೇಳೆ ತಿಳಿಯಿತು. ಸಭೆಗಳನ್ನು ನಡೆಸಿ ಪರಿಹರಿಸುವ ಕಾರ್ಯವನ್ನೂ ನಡೆಸಲಾಗಿದೆ. ಮಾಧ್ಯಮದವರೂ ಕೂಡ ಧ್ವನಿ ಇಲ್ಲದವರಿಗೆ ಧ್ವನಿಕೊಡುವ ಕೆಲಸಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಚಾರವಾಗಬೇಕು. ಟ್ಯಾಬ್ಲಾಯ್ಡಿಸಮ್ ಸ್ವಲ್ಪ ಕಡಿಮೆ ಮಾಡಿ ಇಂತಹ ವಿಷಯಗಳ ಮೇಲೆ ಹೆಚ್ಚು ಬೆಳಕು ಚೆಲ್ಲುವ ಅವಶ್ಯಕತೆಯಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈಸೂರಿನ ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಬ್ಯೂರೊ ಚೀಫ್ ಕೆ. ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಕರ್ನಾಟಕ ರಾಜ್ಯ ಗಿರಿಜನ ಸಂಶೋಧನ ಸಂಸ್ಥೆಯ ನಿರ್ದೇಶಕ ಪ್ರೊ. ಟಿ.ಟಿ. ಬಸವನಗೌಡ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಸಿ. ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News