ಬರಗೂರು ಕಣ್ಣಲ್ಲಿ ‘ಶಿಕ್ಷಣದಲ್ಲಿ ಕನ್ನಡ’

Update: 2018-02-23 18:42 GMT

ಬರಗೂರು ರಾಮಚಂದ್ರಪ್ಪ ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಕೇಳಿ ಬಂದ ಪ್ರಮುಖ ಹೆಸರು. ಹಲವು ಸಾಮಾಜಿಕ ಚಳವಳಿಗಳಲ್ಲಿ ಗುರುತಿಸಿಕೊಂಡದ್ದಲ್ಲದೆ ಕನ್ನಡ ಭಾಷೆ ಪರಂಪರೆಗಾಗಿಯೂ ಅಪಾರ ಕೆಲಸ ಮಾಡಿದವರು. ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು ಬರಗೂರು. ತಾವು ನಂಬಿದ್ದನ್ನು ಬರೆಯುತ್ತಾ, ಬದುಕುತ್ತಾ ಬಂದಿರುವ ಅವರು ಸಾಹಿತ್ಯ, ಸಿನೆಮಾ, ಸಂಸ್ಕೃತಿ, ಸಂಘಟನೆ ಹೀಗೆ ವಿವಿಧ ನೆಲೆಗಳಿಗೆ ತಮ್ಮನ್ನು ಒಡ್ಡಿಕೊಂಡು ಬಂದ ವರು. ‘ಶಿಕ್ಷಣದಲ್ಲಿ ಕನ್ನಡ’ ಇಂದಿನ ದಿನಗಳಲ್ಲಿ ಚರ್ಚೆಯಲ್ಲಿರುವ ವಿಷಯ. ಬರಗೂರು ಈ ಕೃತಿಯಲ್ಲಿ ಕನ್ನಡವನ್ನು ಶಿಕ್ಷಣದಲ್ಲಿ ತರುವಾಗ ಎದುರಾಗುವ ಸವಾಲುಗಳು ಮತ್ತು ಅದನ್ನು ಎದುರಿಸುವ ಬಗೆಯನ್ನು ಚರ್ಚಿಸಿದ್ದಾರೆ. ವಿವಿಧ ಸಂದರ್ಭಗಳಲ್ಲಿ ಅವರು ವಿವಿಧ ಪತ್ರಿಕೆಗಳಿಗಾಗಿ ಬರೆದ ಲೇಖನಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಶಿಕ್ಷಣದಲ್ಲಿ ಕನ್ನಡದ ಸ್ಥಾನ, ಸಮಸ್ಯೆ, ಸವಾಲುಗಳನ್ನು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಂವಿಧಾನಾತ್ಮಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ ಬರಹಗಳು ಇವು. ವಿವಿಧ ಸಂದರ್ಭಗಳಲ್ಲಿ ವಿಷಯ ವಿಶ್ಲೇಷಣೆ ಮಾಡಿದ್ದರಿಂದ ಓದುಗರಿಗೆ ಮನವರಿಕೆಯಾಗಬೇಕೆಂಬ ಕಾರಣಕ್ಕಾಗಿ ಕೆಲವು ಸಂಗತಿಗಳು ಪುನರುಕ್ತವಾಗಿವೆ. ಉದಾಹರಣೆಗೆ ಹೇಳುವುದಾದರೆ ಗೋಕಾಕ್ ಸಮಿತಿಯ ಸುತ್ತಮುತ್ತಲ ಸಂಗತಿಗಳು ಮತ್ತು ನ್ಯಾಯಾಲಯದಲ್ಲಿ ನಡೆದ ಮಾತೃಭಾಷಾ ಮಾಧ್ಯಮದ ಕಾನೂನು ಸಮರ ಸಂಗತಿಗಳು ಪುನರುಕ್ತವಾಗಿವೆ.

ಇಲ್ಲಿ ಒಟ್ಟು 10 ಲೇಖನಗಳಿವೆ. ಮೊದಲ ಲೇಖನದಲ್ಲಿ ಕನ್ನಡ, ಸಂಸ್ಕೃತಿ ಮತ್ತು ಸ್ವಾಯತ್ತೆಯ ಕುರಿತಂತೆ ಚರ್ಚಿಸಲಾಗಿದೆ. ಹಾಗೆಯೇ ಕನ್ನಡ ಮಾಧ್ಯಮಕ್ಕೆ ಸವಾಲಾಗಿರುವ ನ್ಯಾಯಾಲಯದ ತೀರ್ಪನ್ನು ಎದುರಿಸುವ ಬಗೆಯನ್ನು ಅವರು ಒಂದು ಲೇಖನದಲ್ಲಿ ಚರ್ಚಿಸಿದ್ದಾರೆ. ಹಾಗೆಯೇ ಇಂಗ್ಲಿಷ್‌ನ್ನೂ ತೊಡಗಿಸಿಕೊಂಡು ಕನ್ನಡವನ್ನು ಬದುಕುವ ಅಥವಾ ಅನ್ನ ಕೊಡುವ ಭಾಷೆಯಾಗಿ ಬೆಳೆಸುವ ಬಗೆಯನ್ನೂ ಅವರು ವಿವರಿಸುತ್ತಾರೆ. ಹಿಂದಿ ಹೇರಿಕೆ ಹೇಗೆ ಕನ್ನಡದ ಮೇಲೆ ತನ್ನ ಪರಿಣಾಮ ಬೀರಿದೆ ಎನ್ನುವುದನ್ನು ‘ಹಿಂದಿ ಹೇರಿಕೆಗೆ ಇದೆ ಒಂದು ಇತಿಹಾಸ’ ಲೇಖನದಲ್ಲಿ ಚರ್ಚಿಸುತ್ತಾರೆ. ಹಾಗೆಯೇ ಕಾಲೇಜು ಶಿಕ್ಷಣದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವುದರ ಹಿಂದಿನ ತೊಡಕುಗಳನ್ನು ಇನ್ನೊಂದು ಬರಹದಲ್ಲಿ ಚರ್ಚಿಸುತ್ತಾರೆ. ಈ ಕೃತಿ ಕನ್ನಡ ಭಾಷೆ ಮತ್ತು ಮಾಧ್ಯಮವನ್ನು ಭಾವುಕ ಕಣ್ಣಿನಿಂದ ನೋಡದೆ, ವಾಸ್ತವದ ನೆಲೆಯಲ್ಲಿ ನೋಡುತ್ತದೆ. ಆದುದರಿಂದಲೇ ಕನ್ನಡ ಮಾಧ್ಯಮದ ಅನುಷ್ಠಾನದ ಕುರಿತಂತೆ ಮಾತನಾಡುವವರಿಗೆ ಈ ಕೃತಿ ಒಂದು ಕೈ ಪಿಡಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಹೊರತಂದಿರುವ ಕೃತಿಯ ಒಟ್ಟು ಪುಟಗಳು 80. ಮುಖಬೆಲೆ 60 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News