ಗೌರಿಗೆ ಸಿಕ್ಕೀತೆ ನ್ಯಾಯ?

Update: 2018-02-24 05:04 GMT

ಗೌರಿ ಲಂಕೇಶ್ ಅವರ ಹತ್ಯೆಯಾಗಿ ಐದು ತಿಂಗಳು ಕಳೆದಿವೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಜಾತ್ಯತೀತ ಸರಕಾರವಿದೆ. ಖಂಡಿತವಾಗಿಯೂ ಗೌರಿ ಲಂಕೇಶರ ಸಾವಿಗೆ ನ್ಯಾಯ ಸಿಗುತ್ತದೆ ಎಂದು ನಾಡಿನ ಜನತೆ ಗಾಢ ಭರವಸೆಯನ್ನು ಇಟ್ಟಿದ್ದರು. ಆದರೆ, ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ‘‘ತನಿಖೆ ನಡೆಯುತ್ತಿದೆ ಮಾಹಿತಿ ದೊರಕಿದೆ’’ ಎಂದು ಹೇಳುತ್ತಾ ಬರುತ್ತಿದ್ದಾರೆಯೇ ಹೊರತು ತನಿಖೆಯ ಪ್ರಗತಿಯ ಕುರಿತಂತೆ ಈವರೆಗೆ ಯಾವುದೇ ಸುಳಿವನ್ನೂ ನೀಡಿಲ್ಲ. ಸುಳಿವು ಬಹಿರಂಗ ಪಡಿಸಿದರೆ ಹೆಚ್ಚಿನ ತನಿಖೆಗೆ ಅಡ್ಡಿಯಾಗಬಹುದು ಎನ್ನುವಂತಹ ಸಮಜಾಯಿಷಿಯನ್ನು ರಾಜಕಾರಣಿಗಳು ನೀಡುತ್ತಾ ಬಂದಿದ್ದಾರೆ. ಆದರೆ ಈ ಹಿಂದೆ ಕಲಬುರ್ಗಿಯ ಹತ್ಯೆಯ ತನಿಖೆ ಕೂಡ ಇದೇ ರೀತಿಯಲ್ಲಿ ಹಳ್ಳ ಹಿಡಿಯಿತು. ಇದೀಗ ಜನಸಾಮಾನ್ಯರು ಗೌರಿಯ ಹತ್ಯೆಯ ಆರೋಪಿಗಳ ಹೆಸರು ಶೀಘ್ರದಲ್ಲೇ ಬಹಿರಂಗ ಪಡಿಸಬೇಕು ಎಂದು ಬೀದಿಗಿಳಿಯುವ ಸಿದ್ಧತೆಯಲ್ಲಿದ್ದಾರೆ. ಇಂತಹ ಹೊತ್ತಿನಲ್ಲೇ ವಾರದೊಳಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಹೆಸರು ಬಹಿರಂಗಪಡಿಸುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿರುವುದು ಜನತೆಗೆ ಸಣ್ಣದೊಂದು ಸಮಾಧಾನವನ್ನು ತಂದಿದೆ.

ಈ ಹಿಂದಿನಂತೆ ಮಾಧ್ಯಮಗಳಿಗೆ ಅವರು ಈ ಹೇಳಿಕೆಯನ್ನು ನೀಡಿದ್ದಿದ್ದರೆ ನಂಬಬೇಕಾಗಿರಲಿಲ್ಲ. ಈ ಬಾರಿ ಅವರು ವಿಧಾನ ಪರಿಷತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಭರವಸೆಯನ್ನು ನೀಡಿದ್ದಾರೆ. ಬಿಜೆಪಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರವನ್ನು ನೀಡುತ್ತಾ, ‘‘ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಇನ್ನೊಂದು ವಾರದಲ್ಲಿ ಹಂತಕರ ಕುರಿತ ವಿವರಗಳನ್ನು ತಿಳಿಸಲಾಗುವುದು’’ ಎನ್ನುವ ಹೇಳಿಕೆ ಗೌರಿ ಹತ್ಯೆಯ ಪ್ರಕರಣಕ್ಕೆ ಹೊಸ ತಿರುವನ್ನು ನೀಡಬಹುದು ಎಂಬ ಆಶಾವಾದ ಹುಟ್ಟಿಸಿದೆ. ಒಂದು ವಾರ ಬೇಡ, ಕನಿಷ್ಠ ಒಂದು ತಿಂಗಳೊಳಗೆ ವಿವರಗಳನ್ನು ಬಹಿರಂಗ ಪಡಿಸಿದರೂ ಅದು ಧಾರಾಳವಾಯಿತು. ಆದರೆ ಬರೇ, ಮಾಹಿತಿ ಸಿಕ್ಕಿದೆ, ಶೀಘ್ರದಲ್ಲೇ ಬಂಧಿಸುತ್ತೇವೆ ಎಂಬ ಭರವಸೆಯಿಂದ ಜನರನ್ನು ತೃಪ್ತಿ ಪಡಿಸುವ ಮಾತುಗಳು ಇನ್ನು ಸಾಕು. ಗೌರಿ ಲಂಕೇಶ್ ಅವರ ಹತ್ಯೆಯ ಆರೋಪಿಗಳನ್ನು ಬಹಿರಂಗ ಪಡಿಸುವುದರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ದೊಡ್ಡ ಹೊಣೆಗಾರಿಕೆಯಿದೆ. ಇಂದು ಬಿಜೆಪಿ, ಸಂಘಪರಿವಾರ ದೇಶಾದ್ಯಂತ ತನ್ನ ಬೇರುಗಳನ್ನು ಹರಡುತ್ತಿರುವಾಗ ಅದರ ವಿರುದ್ಧ ಗಟ್ಟಿಧ್ವನಿಯಲ್ಲಿ ಮಾತನಾಡಿದವರು ಗೌರಿಲಂಕೇಶ್.

ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಅದರ ಪ್ರಯೋಜನವನ್ನು ಪರೋಕ್ಷವಾಗಿಯಾದರೂ ಉಂಡಿದೆ ಎನ್ನುವುದನ್ನು ಸರಕಾರ ಮರೆಯಬಾರದು. ಸಂಘಪರಿವಾರ ಜೀವ ವಿರೋಧಿ ವೌಲ್ಯಗಳನ್ನು ಖಂಡಿಸುತ್ತಾ, ಗೌರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದರು. ಈ ರಾಜ್ಯದಲ್ಲಿ ಬಿಜೆಪಿ ಸರಕಾರವೇನಾದರೂ ಇದ್ದಿದ್ದರೆ ಜನರು ಅದರಿಂದ ಬಹು ನಿರೀಕ್ಷೆಯನ್ನು ಇಡುತ್ತಿರಲಿಲ್ಲ. ಇದೀಗ ಇಲ್ಲಿರುವುದು ತನ್ನನ್ನು ತಾನು ಜಾತ್ಯತೀತ ಎಂದು ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸರಕಾರ. ಈ ಸರಕಾರವಿರುವಾಗಲೇ ಗೌರಿಯವರ ಹತ್ಯೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗುವುದಿಲ್ಲ ಎಂದ ಮೇಲೆ, ಮುಂದೆ ಬಿಜೆಪಿ ಸರಕಾರವೇನಾದರೂ ಅಧಿಕಾರಕ್ಕೆ ಬಂದರೆ ಅದನ್ನು ನಿರೀಕ್ಷಿಸಲು ಸಾಧ್ಯವೆ? ಬೆಂಗಳೂರಿನಂತಹ ಶಹರದಲ್ಲಿ ತೀರಾ ತಡರಾತ್ರಿಯೂ ಅಲ್ಲದ ಹೊತ್ತಿನಲ್ಲಿ ನಡೆದ ಹತ್ಯೆಯನ್ನೇ ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗುತ್ತಾರೆ ಎಂದ ಮೇಲೆ, ಬೆಂಗಳೂರಿನಲ್ಲಿರುವ ಉಳಿದ ಜನಸಾಮಾನ್ಯರು ನಿರ್ಭೀತಿಯಿಂದ ಬದುಕುವುದು ಹೇಗೆ ಸಾಧ್ಯ?

 ಇದೇ ಸಂದರ್ಭದಲ್ಲಿ ಗೌರಿಯ ಹತ್ಯೆ ಬರೇ ಒಂದು ಕ್ರಿಮಿನಲ್ ಘಟನೆಯಲ್ಲ ಎನ್ನುವುದನ್ನು ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರ ಗಮನಿಸಬೇಕು. ಗೌರಿಯನ್ನು ಹತ್ಯೆ ಮಾಡಿದವರು ಯಾರು ಎನ್ನುವುದನ್ನು ಕಂಡು ಹಿಡಿದಾಕ್ಷಣಕ್ಕೆ ಅವರ ಕೆಲಸ ಮುಗಿಯುವುದಿಲ್ಲ. ಅವರನ್ನು ಹತ್ಯೆಗೈದಿರುವುದು ಯಾಕೆ ಎನ್ನುವುದೂ ಅಷ್ಟೇ ಮುಖ್ಯ. ಹತ್ಯೆಗೈದ ದುಷ್ಕರ್ಮಿಗಳು ಯಾವುದೋ ಹಿತಾಸಕ್ತಿಗಳ ಒಂದು ಆಯುಧವಾಗಿಯಷ್ಟೇ ಬಳಸಲ್ಪಟ್ಟಿದ್ದಾರೆ. ಪೊಲೀಸರು ಬಂಧಿಸಲ್ಪಟ್ಟವರು ಸುಪಾರಿ ಕಿಲ್ಲರ್‌ಗಳಷ್ಟೇ. ಆದರೆ ಇವವರ ಮೂಲಕ ಹತ್ಯೆ ಮಾಡಿಸಿದವರು ಯಾರು ಎನ್ನುವುದನ್ನು ಪತ್ತೆ ಹಚ್ಚದೆ ಗೌರಿಯವರಿಗೆ ನ್ಯಾಯ ಸಿಗುವುದು ಅಸಾಧ್ಯ. ಕಲಬುರ್ಗಿಯ ಹತ್ಯೆಗೂ, ದಾಭೋಲ್ಕರ್ ಮತ್ತು ಪನ್ಸಾರೆಯವರ ಹತ್ಯೆಗೂ ಇರುವ ಸಂಬಂಧಗಳನ್ನು ಈಗಾಗಲೇ ತನಿಖೆ ಬಹಿರಂಗಪಡಿಸಿದೆ. ಆದರೆ ಈವರೆಗೆ ನಿರ್ದಿಷ್ಟವಾದ ಗುಂಪನ್ನು ಅಧಿಕೃತವಾಗಿ ಗುರುತಿಸಲು ತನಿಖಾಧಿಕಾರಿಗಳು ವಿಫಲವಾಗಿದ್ದಾರೆ.

ಗೌರಿಯ ಹತ್ಯೆಯಲ್ಲಿ ಸಂಘಪರಿವಾರದ ಕೈವಾಡವಿದೆ ಎಂದು ಈವರೆಗೆ ಜನರು ಸಂಶಯಿಸುತ್ತಾ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ‘ಸನಾತನ ಸಂಸ್ಥೆ’ಯಂತಹ ಶಂಕಿತ ಉಗ್ರವಾದಿ ಸಂಘಟನೆಗಳ ಹೆಸರುಗಳೂ ಕೇಳಿ ಬರುತ್ತಿವೆ. ಹೀಗಿರುವಾಗ ಕೊಲೆಯಲ್ಲಿ ನೇರ ಪಾತ್ರವಹಿಸಿದ ಒಂದಿಬ್ಬರು ಸುಪಾರಿ ಕಿಲ್ಲರ್‌ಗಳನ್ನು ಮಾಧ್ಯಮಗಳ ಮುಂದಿಟ್ಟು ಕೈತೊಳೆದುಕೊಂಡರೆ ಸರಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಗೌರಿಯವರ ಕೊಲೆಗೆ ಕಾರಣವಾದ ಸಿದ್ಧಾಂತ ಯಾವುದು, ಸಂಘಟನೆ ಯಾವುದು ಎಂದು ಗುರುತಿಸಿ ಅವುಗಳ ವಿರುದ್ಧ ಕ್ರಮ ತೆಗೆದುಕೊಂಡಾಗ ಮಾತ್ರ ಗೌರಿಯ ಸಾವಿಗೆ ನ್ಯಾಯ ಕೊಟ್ಟಂತಾಗುತ್ತದೆ. ಇದೇ ಸಂದರ್ಭದಲ್ಲಿ ಗುಂಡುಗಳ ಮೂಲಕ ಗೌರಿಯವರನ್ನು ಸಾಯಿಸಲು ಸಾಧ್ಯವಿಲ್ಲ ಎನ್ನುವುದು ಆ ಸಂಘಟನೆಗಳಿಗೂ ಮನವರಿಕೆಯಾಗಿದೆ. ಇಂದು ಗೌರಿಯ ಹೆಸರಿನಲ್ಲಿ ರಾಜ್ಯದ ಲಕ್ಷಾಂತರ ಜನರು ಸಂಘಟಿತರಾಗಿದ್ದಾರೆ. ಎಲ್ಲಿ ನೋಡಿದರಲ್ಲಿ ಗೌರಿಯರು ಹುಟ್ಟಿಕೊಳ್ಳುತ್ತಿದ್ದಾರೆ. ಗೌರಿಯನ್ನು ಕೊಂದ ಸಿದ್ಧಾಂತದ ವಿರುದ್ಧ ಇವರು ತಮ್ಮ ಚಳವಳಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕಾಗಿದೆ. ಸಂಘಪರಿವಾರ ಸಿದ್ಧಾಂತದ ವಿರುದ್ಧ ಹೇಗೆ ಗೌರಿಯವರು ಜನಸಾಮಾನ್ಯರನ್ನು ಜಾಗೃತಿಗೊಳಿಸುವ ಪ್ರಯತ್ನ ನಡೆಸುತ್ತಿದ್ದರೋ ಅದೇ ಪ್ರಯತ್ನ ಹೊಸ ಗೌರಿಯರಿಂದ ಮುಂದುವರಿಯಬೇಕಾಗಿದೆ.

ಎಲ್ಲವನ್ನು ಸರಕಾರದ ತಲೆಗೆ ಕಟ್ಟಿ, ನಮ್ಮ ಹೊಣೆಗಾರಿಕೆಗಳಿಂದ ನುಣುಚಿಕೊಳ್ಳುವಂತಿಲ್ಲ. ಈಗಾಗಲೇ ಗೌರಿಯ ಹೆಸರಿನಲ್ಲಿ ಒಂದು ಟ್ರಸ್ಟ್ ನಿರ್ಮಾಣವಾಗಿದೆ. ಹಾಗೆಯೇ ಗೌರಿಯ ಹೆಸರಿನಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆಗಳು ಎಲ್ಲ ಅಡೆತಡೆಗಳನ್ನು ಮೀರಿ ಜಾರಿಗೆ ಬರಬೇಕಾಗಿದೆ. ಅದುವೇ ನಾವು ಸಂಘಪರಿವಾರಕ್ಕೆ ನೀಡುವ ಉತ್ತರ. ಒಬ್ಬ ಗೌರಿಯನ್ನು ಕೊಂದರೆ ಸಾವಿರ ಗೌರಿಯರು ಹುಟ್ಟುತ್ತಾರೆ ಎನ್ನುವುದು ಒಮ್ಮೆ ಅವರಿಗೆ ಮನವರಿಕೆಯಾದರೆ ಮತ್ತೊಮ್ಮೆ ಇಂತಹ ಹುಚ್ಚು ಸಾಹಸಕ್ಕೆ ಇಳಿಯುವುದಿಲ್ಲ. ಹಾಗೆಯೇ ಸಂಘಪರಿವಾರದ ಸಿದ್ಧಾಂತವನ್ನು ಎದುರಿಸುವ ಹೊಸ ದಾರಿಗಳನ್ನು ಕಂಡುಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಮುಂದುವರಿಯಲು ಗೌರಿಯ ಹೆಸರು ನಮಗೆಲ್ಲ ಸ್ಫೂರ್ತಿಯಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News