ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಮುಸ್ಲಿಮ್- ದಲಿತರು ಒಂದಾಗುವ ಸಮಯ ಬಂದಿದೆ: ಜಿಗ್ನೇಶ್

Update: 2018-02-24 11:24 GMT

ಹೊಸದಿಲ್ಲಿ, ಫೆ.24:  ಫ್ಯಾಸಿಸ್ಟ್ ಶಕ್ತಿಗಳು ಧರ್ಮ ರಕ್ಷಣೆ, ಗೋಮಾತೆಯ ಹೆಸರಿನಲ್ಲಿ ದೌರ್ಜನ್ಯ, ಹಿಂಸಾಚಾದ ಮೂಲಕ ಮುಸ್ಲಿಮರು, ದಲಿತರು ಸೇರಿದಂತೆ ಅಲ್ಪಸಂಖ್ಯಾತ ವರ್ಗದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ. ಈ ದುಷ್ಟ ಶಕ್ತಿಗಳನ್ನು ಸೋಲಿಸಬೇಕಾದರೆ ಮುಸ್ಲಿಮ್ ಹಾಗೂ ದಲಿತ ಸಮುದಾಯಗಳು ಒಂದಾಗಿ ಹೋರಾಡಬೇಕಾದ ಸಮಯ ಬಂದಿದೆ ಎಂದು ಗುಜರಾತ್ ನ ವಡ್ಗಾಂವ್ ಶಾಸಕ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್.ಐ.ಒ.) ದ ವತಿಯಿಂದ ಹೊಸದಿಲ್ಲಿಯ ಜಾಮಿಯಾ ನಗರದಲ್ಲಿ ನಡೆಯುತ್ತಿರುವ ಎರಡನೇ ಅಖಿಲ ಭಾರತ ಸಮಾವೇಶದಲ್ಲಿ ಎರಡನೇ ದಿನವಾದ ಇಂದು ನಡೆದ ಮೊದಲ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಇಂದು ದೇಶದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರವು ತನ್ನ ವಿರುದ್ಧ ಮಾತನಾಡುವರನ್ನು ವ್ಯವಸ್ಥಿತವಾಗಿ ಮುಗಿಸಿಬಿಡುತ್ತಿದೆ. ಗುಜರಾತ್ ನಲ್ಲಿ ಶಾಸಕನಾಗಿ ಆಯ್ಕೆಯಾದ ನನ್ನನ್ನೇ ಅಧಿಕಾರಿಗಳ ಮೂಲಕ ಎನ್ ಕೌಂಟರ್ ನಡೆಸಿ ಕೊಲ್ಲುವ ಸಂಚು ಮಾಡುವಂತಹ ರೂಪಿಸುತ್ತಿದ್ದಾರೆಂದರೆ ಫ್ಯಾಸಿಸ್ಟ್ ಶಕ್ತಿಗಳು ತಮ್ಮ ಉದ್ದೇಶ ಕಾರ್ಯಗತಗೊಳಿಸಲು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದನ್ನು ದೇಶದ ಯುವಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ನುಡಿದರು.

ಕೇವಲ ದ್ವೇಷ ಹುಟ್ಟಿಸುವ ಆಯುಧ ಹೊಂದಿರುವ ಫ್ಯಾಸಿಸ್ಟ್ ಗಳನ್ನು ದೇಶದ ಯುವಜನತೆ ಪ್ರೀತಿ ವಿಶ್ವಾಸದ ಮೂಲಕ ಹೊಡೆದುರುಳಿಸಬೇಕು. 2019 ರ ಚುನಾವಣೆಯಲ್ಲಿ ಯುವಜನತೆಯು ಸಂಪೂರ್ಣ ಭಾಗವಹಿಸಿ, ದೇಶದ ದಿಕ್ಸೂಚಿಯನ್ನು ಬದಲಾಯಿಸಬೇಕು ಎಂದು ಹೇಳಿದರು.

ಎಸ್.ಐ.ಒ. ರಾಷ್ಟ್ರೀಯ ಕಾರ್ಯದರ್ಶಿ ತೌಸೀಫ್ ಅಹ್ಮದ್ ಮಡಿಕೇರಿ, ಕ್ವಿಲ್ ಫೌಂಡೇಶನ್ ನ ನಿರ್ದೇಶಕ ಸುಹೈಲ್ ಕೆ.ಕೆ., ಆರ್.ಟಿ.ಇ. ಫೋರಂನ ರಾಷ್ಟ್ರೀಯ ಸಂಚಾಲಕ ಅಂಬರೀಶ್ ರೈ ಮಾತನಾಡಿದರು.

ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ಉಪಾಧ್ಯಕ್ಷ ಟಿ.ಆರಿಫ್ ಅಲಿ ಅಧ್ಯಕ್ಷತೆ ವಹಿಸಿದ್ದರು.

ವರದಿ: ಇರ್ಷಾದ್ ವೇಣೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News