ಕೊನೆಯ ಪಂದ್ಯದಲ್ಲಿ 7 ರನ್ ಜಯ, ಭಾರತಕ್ಕೆ ಟಿ20 ಸರಣಿ

Update: 2018-02-25 05:26 GMT

ಕೇಪ್ ಟೌನ್, ಫೆ. 25 : ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ ಗಳಿಂದ ಸೋಲಿಸಿದ ಭಾರತ ಟಿ20 ಸರಣಿಯನ್ನು 2-1 ರಿಂದ ಗೆದ್ದು ಕೊಂಡಿದೆ. 

ಗೆಲ್ಲಲು 173 ರನ್ ಗಳಿಸಬೇಕಿದ್ದ ದಕ್ಷಿಣ ಆಫ್ರಿಕಾ 6 ವಿಕೆಟ್ ಕಳೆದುಕೊಂಡು 165 ರನ್ ಮಾತ್ರ ಮಾಡಲು ಸಾಧ್ಯವಾಯಿತು.

ಕೊನೆಯ ಓವರ್ ನಲ್ಲಿ 19 ರನ್ ಬೇಕಿತ್ತು.  ಆದರೆ ಭುವನೇಶ್ವರ ಕುಮಾರ್ ಅವರ ಬಿಗಿ ಬೌಲಿಂಗ್ ಎದುರು 12 ರನ್ ಮಾತ್ರ ಸ್ಕೋರ್ ಮಾಡಲು ದಕ್ಷಿಣ ಆಫ್ರಿಕಾ ಶಕ್ತವಾಯಿತು.

43 ರನ್ ಗಳಿಸಿ ಒಂದು ವಿಕೆಟ್ ಪಡೆದ ಸುರೇಶ್ ರೈನಾ ಪಂದ್ಯ ಶ್ರೇಷ್ಠ ಹಾಗೂ ಭುವನೇಶ್ವರ ಕುಮಾರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮ ತಂಡವನ್ನು ಮುನ್ನಡೆಸಿದರು.

ಕೊನೆಯ ಓವರ್ ವರೆಗೂ ಕ್ರಿಕೆಟ್‌ಪ್ರಿಯರನ್ನು ತುದಿಗಾಗಲ್ಲಿ ನಿಲ್ಲಿಸಿತ್ತು. ದಕ್ಷಿಣ ಆಫ್ರಿಕಾದ ಪ್ರಥಮದರ್ಜೆ ಕ್ರಿಕೆಟ್‌ನ ಅನುಭವಿ ಆಟಗಾರ, ಕ್ರಿಸ್ಟಿಯನ್ ಜೋಂಕರ್ ಚೊಚ್ಚಲ ಪಂದ್ಯದಲ್ಲೇ 24 ಎಸೆತಗಳಿಂದ 49 ರನ್ ಸಿಡಿಸಿ ಭಾರತದಿಂದ ವಿಜಯಮಾಲೆ ಕಿತ್ತುಕೊಳ್ಳಲು ನಡೆಸಿದ ಪ್ರಯತ್ನ ಕೊನೆಕ್ಷಣದಲ್ಲಿ ಕೈಕೊಟ್ಟಿತು. 14.5 ಓವರ್ ಬಳಿಕ ಫರ್ಹಾನ್ ಬೆಹರ್ಡೀನ್ ಜತೆಗಿನ ಆರನೇ ವಿಕೆಟ್ ಜತೆಯಾಟದಲ್ಲಿ ಕೇವಲ 3.3 ಓವರ್‌ನಲ್ಲಿ 51 ರನ್ ಸಿಡಿಸಿ ಪಂದ್ಯವನ್ನು ದಕ್ಷಿಣ ಆಫ್ರಿಕಾ ಕಡೆಗೆ ವಾಲಿಸಿದ್ದರು.

ಇದಕ್ಕೂ ಮುನ್ನ ಡೇವಿಡ್ ಮಿಲ್ಲರ್ ಮೂಲಕ ಇನಿಂಗ್ಸ್ ಆರಂಭಿಸುವ ದಕ್ಷಿಣ ಆಫ್ರಿಕಾ ತಂತ್ರ ಆರಂಭದಲ್ಲೇ ಕೈಕೊಟ್ಟಿತು. ಸ್ಫೋಟಕ ಬ್ಯಾಟ್ಸ್‌ಮನ್ ಈ ಪಂದ್ಯದಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ. ಭಾರತ ಏಳು ಓವರ್‌ಗಳಲ್ಲಿ 62 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ ಆಮೆಗತಿಯಲ್ಲಿ ಇನಿಂಗ್ಸ್ ಆರಂಭಿಸಿ 1 ವಿಕೆಟ್ ನಷ್ಟಕ್ಕೆ ಕೇವಲ 30 ರನ್ ಗಳಿಸಿತ್ತು. 10 ಓವರ್‌ನಲ್ಲಿ ದಕ್ಷಿಣ ಆಫ್ರಿಕಾ 52 ರನ್ ಗಳಿಸಿದರೆ ಭಾರತದ ಸ್ಕೋರ್ 2ವಿಕೆಟ್ ನಷ್ಟಕ್ಕೆ 81 ರನ್ ಆಗಿತ್ತು.
ಅಕ್ಷರ್ ಪಟೇಲ್, ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಹೀಗೆ ಸ್ಪಿನ್ನರ್‌ಗಳು ಆರಂಭದಲ್ಲಿ ಒಂದಷ್ಟು ರನ್ ಬಿಟ್ಟುಕೊಟ್ಟರೂ, ಅನುಭವಿ ಆಟಗಾರರು ರನ್ ಹರಿಯುವುದನ್ನು ನಿಯಂತ್ರಿಸಿದರು. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆಯನ್ನು ಚಾಕಚಕ್ಯತೆಯಿಂದ ಬಳಸಿಕೊಂಡು ಪ್ರೌಢಿಮೆ ಮೆರೆದರು. ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದ ದಕ್ಷಿಣ ಆಫ್ರಿಕಾ, ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ಶರಣಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News