ಕೇರಳ ಕೊಲೆಗೆ ಕೋಮುಬಣ್ಣ ಹಚ್ಚುವ ಯತ್ನ : ಕ್ಷಮೆಯಾಚಿಸಿ ಮುಖ ಉಳಿಸಿಕೊಂಡ ಸೆಹ್ವಾಗ್

Update: 2018-02-25 06:20 GMT

ಹೊಸದಿಲ್ಲಿ, ಫೆ. 24 : ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಟ್ವಿಟರ್ ನಲ್ಲಿ ಖ್ಯಾತರಾಗಿರುವ ಸ್ಪೋಟಕ ಬ್ಯಾಟ್ಸ್ ಮ್ಯಾನ್ ವೀರೇಂದ್ರ ಸೆಹವಾಗ್ ಕೇರಳದ ವ್ಯಕ್ತಿಯನ್ನು ಕಟ್ಟಿ ಹಾಕಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಈಗ ಕ್ಷಮೆ ಕೇಳಿದ್ದಾರೆ.

ಇತ್ತೀಚಿಗೆ ಕೇರಳದಲ್ಲಿ ಅಕ್ಕಿ ಕದ್ದ ಎಂಬ ನೆಪದಲ್ಲಿ ಆದಿವಾಸಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಹತ್ತಕ್ಕೂ ಹೆಚ್ಚು ಮಂದಿ ಸೇರಿ ಚಿತ್ರಹಿಂಸೆ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸುವ ಮೊದಲೇ ಆತ ಪ್ರಾಣಬಿಟ್ಟಿದ್ದ. ಚಿತ್ರಹಿಂಸೆ ನೀಡುವಾಗ ಯುವಕನೊಬ್ಬ ಅಲ್ಲೇ ನಿಂತು ಸೆಲ್ಫಿ ತೆಗೆದು ಅದನ್ನು ಫೇಸ್ ಬುಕ್ ಗೆ ಹಾಕಿದ್ದ.  ಈ ಅಮಾನವೀಯ ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಯಿತು.  ಜಾತಿ, ಧರ್ಮ, ಪಕ್ಷ ಭೇದ ಮರೆತು ಎಲ್ಲರೂ ಇದನ್ನು ಖಂಡಿಸಿದ್ದರು. 

ಈ ಘಟನೆ ಬಗ್ಗೆ ಟ್ವೀಟ್ ಮಾಡಿದ್ದ ಸೆಹ್ವಾಗ್ ಇಡೀ ಘಟನೆಯನ್ನು ಒಂದು ಸಮುದಾಯದ ತಲೆಗೆ ಕಟ್ಟಲು ಪ್ರಯತ್ನಿಸಿದ್ದರು. 

Madhu stole 1 kg rice. A mob of Ubaid , Hussain and Abdul Kareem lynched the poor tribal man to death. This is a disgrace to a civilised society and I feel ashamed that this happens and kuch farak nahi padta. ( ಮಧು ಒಂದು ಕೆಜಿ ಅಕ್ಕಿ ಕದ್ದಿದ್ದಾನೆ. ಉಬೈದ್ , ಹುಸೇನ್ ಹಾಗು ಅಬ್ದುಲ್ ಕರೀಂ ಅವರ ಗುಂಪು ಆ ಬಡ ಆದಿವಾಸಿ ವ್ಯಕ್ತಿಯನ್ನು ಕೊಂದು ಹಾಕಿದ್ದಾರೆ. ಇದು ಇಡೀ ನಾಗರೀಕ ಸಮಾಜಕ್ಕೆ ಕಳಂಕವಾಗಿದೆ. ಇಂತಹದ್ದು ನಡೆಯುತ್ತದೆ ಹಾಗು ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದರೆ ನನಗೆ ನಾಚಿಕೆಯಾಗುತ್ತದೆ ") ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದರು.

ಸೆಹ್ವಾಗ್ ರ ಈ ಟ್ವೀಟ್ ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಸೇರಿದಂತೆ ಹಲವರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ 16 ಮಂದಿ ಆರೋಪಿಗಳ ಹೆಸರನ್ನು ಟ್ವೀಟ್ ಮಾಡಿ ಸೆಹವಾಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಪಿಗಳಲ್ಲಿ ಹಿಂದೂ, ಮುಸ್ಲಿಂ , ಕ್ರೈಸ್ತ ಧರ್ಮದವರು ಇದ್ದರು. 

ನಂತರ ಈ ಬಗ್ಗೆ ಸೆಹ್ವಾಗ್, “ ತಪ್ಪನ್ನು ಒಪ್ಪಿಕೊಳ್ಳದೇ ಇರುವುದು ಇನ್ನೊಂದು ತಪ್ಪು.  ಈ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳ ಹೆಸರನ್ನು ಬರೆಯುವಾಗ ಕೆಲವು ಹೆಸರನ್ನು ಬಿಟ್ಟಿದ್ದೇನೆ. ಸರಿಯಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ. ಆದರೆ ಅದು ಕೋಮು ಬಣ್ಣ ಹಚ್ಚುವ ಟ್ವೀಟ್ ಆಗಿರಲಿಲ್ಲ . ” ಎಂದು ಟ್ವೀಟ್ ಮಾಡಿ ಕ್ಷಮೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News